ADVERTISEMENT

ಅಧಿಕಾರಿಗಳಿಂದ ಅಸಮರ್ಪಕ ಮಾಹಿತಿ: ಆಕ್ರೋಶ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2012, 6:00 IST
Last Updated 17 ಏಪ್ರಿಲ್ 2012, 6:00 IST

ಧಾರವಾಡ: ಜಿಲ್ಲೆಯಲ್ಲಿನ ಬರಪೀಡಿತ ಪ್ರದೇಶಗಳ ಬಗ್ಗೆ ಸಮರ್ಪಕ ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಸೋಮವಾರ ಜಿಲ್ಲಾಧಿಕಾರಿ ಕಚೇರಿಯ ಸಭಾಭವನ ದಲ್ಲಿ ನಡೆಯಿತು.

ಜಿಲ್ಲೆಯ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷದ ತಂಡವು, ರೈತರ ಅಹವಾಲು ಸ್ವೀಕರಿಸಿದ ನಂತರ ಜಿಲ್ಲಾಧಿಕಾರಿ ಕಚೇರಿ ಸಭಾಭವನದಲ್ಲಿ ಸಭೆ ನಡೆಯಿತು. ಜಿಲ್ಲೆಯ ಬರಪೀಡಿತ ಪ್ರದೇಶಗಳ ಮಾಹಿತಿ ಸಂಗ್ರಹಿಸುತ್ತಿರುವ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ತೋಟಕಾರಿಕೆ ಇಲಾಖೆ ಜಂಟಿ ನಿದೇಶಕರು ಹಾಗೂ ಜಿಲ್ಲೆಯ ತಹಶೀಲ್ದಾರರ ಕಾರ್ಯವೈಖರಿ ವಿರುದ್ಧ ಹರಿಹಾಯ್ದರು.

ಬೆಳೆ ವಿಮೆ ಹಾಗೂ ಕುಡಿಯುವ ನೀರಿನ ಸಂಪರ್ಕ ಕುರಿತಂತೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು. ಸಮರ್ಪಕವಾಗಿ ಜನರಿಗೆ ಕುಡಿಯುವ ನೀರು ವಿತರಿಸುವುದು ಸರ್ಕಾರ ಕರ್ತವ್ಯ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿನ ಬರ ಪರಿಸ್ಥಿತಿ ಕುರಿತು ಮಾಹಿತಿ ಸಂಗ್ರಹಿಸಿ, ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯನ್ನು ಏ. 17ರಂದು ಕರೆದು ಚರ್ಚಿಸಬೇಕು. ಕುಡಿಯುವ ನೀರು ಒದಗಿಸುವುದು, ಜಾನುವಾರುಗಳಿಗೆ ಮೇವು ನೀಡಲು ಹಾಗೂ ಜನರಿಗೆ ಉದ್ಯೋಗ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಅವರಿಗೆ ಸೂಚಿಸಿದರು.

ಜಿಲ್ಲೆಯಲ್ಲಿ ಗೋ ಶಾಲೆಗಳನ್ನು ಪ್ರಾರಂಭಿಸಲು ಸಾರ್ವಜನಿಕರು ಒಪ್ಪಿಗೆ ಸೂಚಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

`ರೈತರು ಮೇವು ದೊರೆಯದ ಹಿನ್ನೆಲೆಯಲ್ಲಿ ದನಕರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಪ್ರತಿ ಗ್ರಾಮದಲ್ಲಿ ಜನಸಂಪರ್ಕ ಸಭೆಗಳನ್ನು ಆಯೋಜಿಸುವ ಮೂಲಕ ಅಗತ್ಯವಾದ ಸ್ಥಳಗಳಲ್ಲಿ ಗೋ ಶಾಲೆ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು~ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.

ಕಳೆದ ಐದು ತಿಂಗಳಿಂದ ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಯಾವುದೇ ರೀತಿಯ ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

2003- 2004ರಿಂದ ಇಲ್ಲಿಯವರೆಗೂ ರೈತರು ಬೆಳೆ ವಿಮೆ ಕಟ್ಟುತ್ತಾ ಬಂದಿದ್ದಾರೆ. ಆದರೆ ಅವರಿಗೆ ಸರಿಯಾದ ರೀತಿಯಲ್ಲಿ ಪರಿಹಾರ ಸರ್ಕಾರದಿಂದ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದ ಸಿದ್ದರಾಮಯ್ಯ, ಈ ಕುರಿತು ಪಂಚಾಯತ್ ಮಟ್ಟದಲ್ಲಿ ಸಮೀಕ್ಷೆ ನಡೆಸುವ ಮೂಲಕ ಕೂಡಲೇ ಕ್ರಮ ಜರುಗಿಸಬೇಕು. ಈ ಕುರಿತು ಸರ್ಕಾರದ ಮೇಲೂ ಒತ್ತಡ ತರಲಾಗುವುದು ಎಂದರು.

ಸಭೆಯಲ್ಲಿ ಪ್ರಶ್ನೆಗಳಿಗೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ನೀಡುತ್ತಿದ್ದ ಉತ್ತರಗಳಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, `ನಾನು ಮುಖ್ಯಮಂತ್ರಿಯಾಗಿದ್ದರೆ ಇಂಥ ಅಧಿಕಾರಿಗಳನ್ನು ಅಮಾನತುಗೊಳಿಸಲು ಕ್ರಮ ಕೈಗೊಳ್ಳುತ್ತಿದ್ದೆ. ಇವನ್ನೆಲ್ಲಾ ನಿಮ್ಮ ಪೆದ್ದ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ಗೆ ಹೇಳಿ~ ಎಂದು ಖಾರವಾಗಿ ನುಡಿದರು.

ಶಾಸಕರಾದ ಸಿ.ಎಸ್.ನಾಡಗೌಡ, ಟಿ.ಬಿ.ಜಯಚಂದ್ರ, ವೀರಣ್ಣ ಮತ್ತಿಕಟ್ಟಿ, ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ದರ್ಪಣ ಜೈನ್ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು, ಮತ್ತಿತರರು ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.