ಧಾರವಾಡ: ‘ದೇಶದಾದ್ಯಂತ ಇರುವ ಬೀಜಗಳ ವಿಭಿನ್ನತೆ, ಏಕರೂಪತೆ ಹಾಗೂ ದೃಢತೆ ಪರೀಕ್ಷಾ ಕೇಂದ್ರಗಳಿಗೆ (ಡಸ್) ಕೇಂದ್ರ ಸರ್ಕಾರ ನೀಡಿದ್ದ ಅನುದಾನ ಬಳಕೆಯಾಗದೇ ಇರುವುದರಿಂದ ಸುಮಾರು ₨ 5 ಕೋಟಿ ವಾಪಸ್ ಹೋಗಿದೆ. ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವತ್ತ ಕೇಂದ್ರದ ಅಧಿಕಾರಿಗಳಿಗೆ ಗಮನ ಹರಿಸಬೇಕು’ ಎಂದು ನವದೆಹಲಿಯ ಸಸ್ಯ ತಳಿ ರಕ್ಷಣೆ ಹಾಗೂ ರೈತರ ಹಕ್ಕುಗಳ ಪ್ರಾಧಿಕಾರದ ಅಧ್ಯಕ್ಷ ಡಾ.ಆರ್.ಆರ್.ಹಂಚಿನಾಳ ಹೇಳಿದರು.
ಇಲ್ಲಿಯ ಕೃಷಿ ವಿ.ವಿ.ಯ ಪ್ರೇಕ್ಷಾಗೃಹದಲ್ಲಿ ಶುಕ್ರವಾರ ಆರಂಭವಾದ ಪ್ರಾಧಿಕಾರದ ಎಂಟನೇ ವಾರ್ಷಿಕ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಅನುದಾನ ವಾಪಸ್ ಹೋಗುವುದರಿಂದ ಕೇಂದ್ರ ಸರ್ಕಾರಕ್ಕೆ ತಪ್ಪು ಮಾಹಿತಿ ರವಾನಿಸಿದಂತಾಗುತ್ತದೆ. ಇದರಿಂದ ಮುಂದಿನ ವರ್ಷವೂ ಅನುದಾನದಲ್ಲಿ ಕಡಿತ ಮಾಡುವ ಸಂಭವವಿದೆ’ ಎಂದು ಎಚ್ಚರಿಕೆ ನೀಡಿದರು.
ಕೃಷಿ ವಿ.ವಿ. ಆವರಣದಲ್ಲಿ ‘ಡಸ್’ ಕೇಂದ್ರವನ್ನು ಆರಂಭಿಸುವುದರಿಂದ ದಕ್ಷಿಣ ಭಾರತದ ಭಾಗದ ತಳಿವರ್ಧಕರು, ಸಂಶೋಧಕರು ಹಾಗೂ ರೈತರಿಗೆ ವಿವಿಧ ಬೆಳೆಗಳ ತಳಿಗಳನ್ನು ನೋಂದಣಿ ಮಾಡಲು ಸಾಕಷ್ಟು ಅನುಕೂಲವಾಗುತ್ತದೆ ಎಂದು ಕುಲಪತಿ ಡಾ.ಡಿ.ಪಿ.ಬಿರಾದಾರ ಅವರ ಮನವಿಗೆ ಸ್ಪಂದಿಸಿದ ಹಂಚಿನಾಳ, ‘ಶೀಘ್ರವೇ ಇಲ್ಲಿ ಕೇಂದ್ರ ಸ್ಥಾಪಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿ ಪಡೆಯಲಾಗುವುದು’ ಎಂದು ಭರವಸೆ ನೀಡಿದರು.
ಗುಜರಾತ್‌ನ ನವಸಾರಿ ಕೃಷಿ ವಿ.ವಿ.ಯ ಕುಲಪತಿ ಡಾ.ಎ.ಆರ್.ಪಾಠಕ್ ಮಾತನಾಡಿ, ‘ನಮ್ಮ ದೇಶದಲ್ಲಿ ಸಾರ್ವಜನಿಕ ಸಂಸ್ಥೆಗಳು ಹಾಗೂ ರೈತ ಬಾಂಧವರು ತಮ್ಮ ತಳಿಗಳನ್ನು ನೋಂದಣಿ ಮಾಡದಿರುವುದು ಬಹಳ ಖೇದಕರ ಸಂಗತಿಯಾಗಿದೆ. ಕೇವಲ ಖಾಸಗಿ ಸಂಸ್ಥೆಗಳು ತಳಿಗಳು ನೋಂದಣಿ ಮಾಡಿ ಸಾಕಷ್ಟು ಲಾಭ ಪಡೆದುಕೊಳ್ಳುತ್ತಿರುವರು. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸಂಸ್ಥೆಗಳು ಮತ್ತು ರೈತರು ಇದರ ಲಾಭ ಪಡೆದುಕೊಳ್ಳಬೇಕು. ತೋಟಗಾರಿಕೆ, ಔಷಧಿ ಮತ್ತು ಸುಗಂಧ ದ್ರವ್ಯ, ಕೃಷಿ ಅರಣ್ಯ ಬೆಳೆಗಳಲ್ಲಿ ನೋಂದಣಿ ಪ್ರಕ್ರಿಯೆ ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.
ಪ್ರಾಧಿಕಾರದ ರಿಜಿಸ್ಟ್ರಾರ್ ಜನರಲ್ ಡಾ.ಆರ್.ಸಿ.ಅಗರವಾಲ್ ಕಳೆದ ಸಾಲಿನಲ್ಲಿ ಕೈಗೊಂಡ ಸಾಧನೆಗಳ ನೋಂದಣಿ ಪ್ರಗತಿಯನ್ನು ಮಂಡಿಸಿದರು. ಶಿವಮೊಗ್ಗದ ತೋಟಗಾರಿಕೆ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ಪಿ.ಎಂ.ಸಾಲಿಮಠ, ನೂಜುವಿಡು ಸೀಡ್ಸ್‌ನ ಅಧ್ಯಕ್ಷ ಡಾ.ಪ್ರಭಾಕರ ರಾವ್, ಪ್ರಾಧಿಕಾರದ ಪ್ರಕಾಶಗೌಡ ಪಾಟೀಲ, ಕೃಷಿ ವಿ.ವಿ.ಯ ವ್ಯವಸ್ಥಾಪನಾ ಮಂಡಳಿ ಸದಸ್ಯರಾದ ಡಾ.ಡಿ.ರಾಜಗೋಪಾಲ, ಡಾ.ವೈ.ಬಿ.ಪಾಟೀಲ ಮತ್ತು ಹೇಮಾಕ್ಷಿ ವಿ.ಕಿರೇಸೂರ ಉಪಸ್ಥಿತರಿದ್ದರು.
ದೇಶದ ಸುಮಾರು 90ಕ್ಕೂ ಹೆಚ್ಚು ವಿಜ್ಞಾನಿಗಳು ಪಾಲ್ಗೊಂಡಿದ್ದರು.
ಸಂಶೋಧನಾ ನಿರ್ದೆೇಶಕ ಡಾ.ಬಿ.ಎಂ.ಖಾದಿ ಸ್ವಾಗತಿಸಿದರು. ಬೀಜ ಘಟಕದ ವಿಶೇಷಾಧಿಕಾರಿ ಡಾ.ಎನ್.ಕೆ.ಬಿರಾದಾರ ಪಾಟೀಲ ವಂದಿಸಿದರು. ಕೃಷಿ ಜೈವಿಕ ತಂತ್ರಜ್ಞಾನ ಸಂಸ್ಥೆಯ ಮುಖ್ಯಸ್ಥ ಡಾ.ಪಿ.ಯು. ಕೃಷ್ಣರಾಜ್ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.