ಹುಬ್ಬಳ್ಳಿ: `ಅನ್ನ ಹಾಗೂ ಜ್ಞಾನದಾನಕ್ಕಿಂತ ಮತ್ತೊಂದು ದಾಸೋಹ ಇಲ್ಲ. ಬದುಕಿನ ಸಾರ್ಥಕತೆ ಇರುವುದೇ ಈ ಎರಡು ಅಂಶಗಳ ಮೇಲೆ~ ಎಂದು ವಿಜಾಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
ಭಾನುವಾರ ನಡೆದ ನವನಗರದ ರೋಟರಿ ಶಿಕ್ಷಣ ಸಂಸ್ಥೆಯ ಬೆಳ್ಳಿಹಬ್ಬದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
`ಮನುಷ್ಯ ನಡೆಯುವಾಗ ಎಡವುವುದು ಸಹಜ. ಹಿನ್ನಡೆ ಆದಾಗ ನಿರಾಸೆ ಅನುಭವಿಸಬಾರದು. ಗುರಿ ಮುಟ್ಟುವವರೆಗೆ ಸಾಗಬೇಕು. ನೂರು ಸಲ ವಿಫಲವಾದರೂ ಒಂದು ದಿನ ಗೆದ್ದೇ ಗೆಲ್ಲುತ್ತೇವೆ ಎಂಬ ಭಾವನೆ ಇಟ್ಟುಕೊಳ್ಳಬೇಕು~ ಎಂದು ನುಡಿದರು.
`ಹಣ, ಪದವಿ, ಪ್ರಶಸ್ತಿಗಳಿಂದ ಮನುಷ್ಯ ದೊಡ್ಡವ ನಾಗಲು ಸಾಧ್ಯವಿಲ್ಲ. ಆತನಲ್ಲಿ ಹೃದಯವಂತಿಕೆ ಇರಬೇಕು. ಇನ್ನೊಬ್ಬರಿಗೆ ಸಹಾಯ ಮಾಡುವ ಗುಣ ಇರಬೇಕು. ಅಂಥ ವ್ಯಕ್ತಿತ್ವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಹೃದಯವಂತಿಕೆ ಇಲ್ಲದ ವ್ಯಕ್ತಿ ಎಂಥ ಉನ್ನತ ಹುದ್ದೆಗೆ ಏರಿದರೂ ಪ್ರಯೋಜನವಿಲ್ಲ~ ಎಂದರು.
`ಮಕ್ಕಳಿಗೆ ಶಿಕ್ಷಣ ನೀಡುವುದು ಮುಖ್ಯವಲ್ಲ. ನಮ್ಮ ದೇಶದಲ್ಲಾಗಲಿ, ಪರದೇಶದಲ್ಲಾಗಲಿ ಉದ್ಯೋಗ ಅರಸಿ ಹೋದರೆ ಅಲ್ಲಿನವರು ನೆನಪಿಟ್ಟುಕೊಳ್ಳುವಂಥ ಕೆಲಸ ಮಾಡಬೇಕು. ಆಗ ದೇಶ ಹಾಗೂ ಶಿಕ್ಷಣ ನೀಡಿದ ಸಂಸ್ಥೆಗಳ ಶ್ರಮ ಸಾರ್ಥಕವಾಗುತ್ತದೆ~ ಎಂದರು. ಅತಿಥಿಯಾಗಿದ್ದ ಶಾಸಕ ಚಂದ್ರಕಾಂತ ಬೆಲ್ಲದ, ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿ ದರು.
ಪಾಲಿಕೆ ಸದಸ್ಯ ಚಂದ್ರಶೇಖರ ಮನಗುಂಡಿ, ಮಾಜಿ ಮೇಯರ್ ಅಜ್ಜಪ್ಪಾ ಹೊರಕೇರಿ, ರೋಟರಿ ಶಿಕ್ಷಣ ಸಂಸ್ಥೆಯ ನಿರ್ದೇಶಕ ಸಿ.ಜಿ.ಪೊನ್ಮಪ್ಪ, ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಟಿ.ಪಾಟೀಲ, ಕಾರ್ಯದರ್ಶಿ ಎಂ.ಎಫ್.ಮನಗುಂಡಿ, ಸಂಸ್ಥೆಯ ಜಂಟಿ ಕಾರ್ಯದರ್ಶಿ ಗಿರೀಶ್ ಬೊಮ್ಮನಗೌಡರ, ಎಸ್.ವಿ.ಶಿರಗುಪ್ಪಿ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.