ADVERTISEMENT

`ಅಪೌಷ್ಟಿಕತೆ ಪರಿಹರಿಸಲು ಪುನಶ್ಚೇತನ ಕೇಂದ್ರ'

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 6:13 IST
Last Updated 25 ಡಿಸೆಂಬರ್ 2012, 6:13 IST

ಹುಬ್ಬಳ್ಳಿ: `ಮಕ್ಕಳ ಅಪೌಷ್ಟಿಕತೆ ಸಾಮಾಜಿಕ ಸಮಸ್ಯೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ಸರ್ಕಾರಿ ಆಸ್ಪತ್ರೆಗಳಲ್ಲಿ ಪೌಷ್ಟಿಕತೆಯ ಪುನಶ್ಚೇತನ ಕೇಂದ್ರಗಳನ್ನು ಆರಂಭಿಸಿದೆ. ಕಿಮ್ಸನಲ್ಲಿ ಅಪೌಷ್ಟಿಕ ಮಕ್ಕಳ ಆರೈಕೆ ಹಾಗೂ ವೈದ್ಯಕೀಯ ಸೌಲಭ್ಯಕ್ಕಾಗಿ ವಿಶೇಷ ವಾರ್ಡ್ ತೆರೆಯಲಾಗಿದೆ' ಎಂದು  ಕಿಮ್ಸ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥ ಡಾ.ಟಿ.ಎ. ಶೇಪೂರ ತಿಳಿಸಿದರು.

ವಾರ್ತಾ ಇಲಾಖೆಯ ರಾಜ್ಯ ಸಮಾಚಾರ ಕೇಂದ್ರ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ `ಮಕ್ಕಳ ಪೌಷ್ಟಿಕ ಆಹಾರ- ಆರೋಗ್ಯ ಶಿಕ್ಷಣ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಅಪೌಷ್ಟಿಕತೆಯಿಂದಾಗಿ ಮಕ್ಕಳ ಬೆಳವಣಿಗೆ ಕುಂಠಿತಗೊಂಡು ರಕ್ತಹೀನತೆ, ಅತಿಸಾರ, ನ್ಯುಮೋನಿಯಾ ಸೋಂಕಿನಿಂದ ಸಾವು ಸಂಭವಿಸುತ್ತವೆ. ಆದ್ದರಿಂದ ಮಗು ಜನಿಸಿದ ತಕ್ಷಣ ಜೋಪಾನವಾಗಿ ಆರೈಕೆ ಮಾಡಬೇಕು. ಆರು ತಿಂಗಳು ಕಡ್ಡಾಯವಾಗಿ ಎದೆ ಹಾಲು ನೀಡಬೇಕು. ಮಗುವಿನಲ್ಲಿ ಸಮಸ್ಯೆ ಕಂಡುಬಂದರೆ ಪೌಷ್ಟಿಕ ಪುನಶ್ಚೇತನ ಕೇಂದ್ರಕ್ಕೆ ದಾಖಲಿಸಬೇಕು' ಎಂದರು.

ವಿಚಾರಸಂಕಿರಣ ಉದ್ಛಾಟಿಸಿದ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ರೇಖಾ ಮಲ್ಲಾರಿ, ` ಮಕ್ಕಳ ಅಪೌಷ್ಟಿಕತೆ ಬಗ್ಗೆ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿ ಅರಿವು ಮೂಡಿಸಬೇಕು' ಎಂದರು.

ತಾ.ಪಂ. ಇಒ ಎಂ.ಬಿ. ಗಂಗಲ್ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಜಿ.ಪ. ವಿಶ್ವ ಸಂಸ್ಥೆ ಮಹಿಳಾ ಕಾರ್ಯಕ್ರಮದ ಜಿಲ್ಲಾ ಯೋಜನಾಧಿಕಾರಿ ರವೀಂದ್ರ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಹುಬ್ಬಳ್ಳಿ ಗ್ರಾಮೀಣ ಶಿಶು ಯೋಜನಾಭಿವೃದ್ಧಿ ಅಧಿಕಾರಿ ಎಸ್.ಬಿ. ಮಾಸಮಡ್ಡಿ, `ಜಿಲ್ಲೆಯಲ್ಲಿ 3036 ಅಪೌಷ್ಟಿಕ ಮಕ್ಕಳಿದ್ದಾರೆ. ಈ ಪೈಕಿ ಹುಬ್ಬಳ್ಳಿ ಗ್ರಾಮೀಣದಲ್ಲಿ 336 ಮಕ್ಕಳನ್ನು ಗುರುತಿಸಿ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಬಾಲ ಸಂಜೀವಿನಿ ಯೋಜನೆಯಡಿ ಐದು ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದೆ' ಎಂದರು.

ಅಂಗನವಾಡಿ ಕಾರ್ಯಕರ್ತೆಯರು, ಗ್ರಾ. ಪಂ. ಮಹಿಳಾ ಪ್ರೇರಕರು, ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು. ಅಂಗನವಾಡಿಗಳಿಗೆ ನೀಡಿದ ಅಡುಗೆ ಅನಿಲ  ಗ್ಯಾಸ್ ಬಳಕೆ ಹಾಗೂ ಮುಂಜಾಗ್ರತೆ ಕುರಿತು ಎಚ್.ಪಿ. ಕಂಪೆನಿ ವತಿಯಿಂದ ಶೋಭಾ ವಿವರಿಸಿದರು. ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಪಿ.ಎಸ್. ಪರ್ವತಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.