ADVERTISEMENT

ಅಭಿವೃದ್ಧಿಯ ನಿರೀಕ್ಷೆಯಲ್ಲಿ ವಿದ್ಯಾನಗರದ ಉದ್ಯಾನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2017, 6:25 IST
Last Updated 17 ಜುಲೈ 2017, 6:25 IST
ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವ ಹುಬ್ಬಳ್ಳಿಯ ವಿದ್ಯಾನಗರದ ಚಿಕ್ಕವೀರಯ್ಯನವರ ಉದ್ಯಾನ (ಎಡಚಿತ್ರ). ಉದ್ಯಾನದ ದ್ವಾರ ಗಿಡಗಂಟಿಯಿಂದ ಆವೃತವಾಗಿರುವ ದೃಶ್ಯ 									ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್
ನಿರ್ವಹಣೆ ಇಲ್ಲದೆ ಪಾಳು ಬಿದ್ದಿರುವ ಹುಬ್ಬಳ್ಳಿಯ ವಿದ್ಯಾನಗರದ ಚಿಕ್ಕವೀರಯ್ಯನವರ ಉದ್ಯಾನ (ಎಡಚಿತ್ರ). ಉದ್ಯಾನದ ದ್ವಾರ ಗಿಡಗಂಟಿಯಿಂದ ಆವೃತವಾಗಿರುವ ದೃಶ್ಯ ಪ್ರಜಾವಾಣಿ ಚಿತ್ರಗಳು: ತಾಜುದ್ದೀನ್ ಆಜಾದ್   

ಹುಬ್ಬಳ್ಳಿ: ಸಾರ್ವಜನಿಕರಿಂದ ತುಂಬಿರು­ತ್ತಿದ್ದ ಆ ಉದ್ಯಾನವೀಗ ಹಸು ಮತ್ತು ಹಂದಿಗಳ ತಾಣವಾಗಿದೆ. ಇಲ್ಲಿದ್ದ ಸಿಮೆಂಟ್ ಶಿಲ್ಪ ಕಲಾಕೃತಿಗಳು ಬಹುತೇಕ ನೆಲ ಕಚ್ಚಿವೆ. ಮಕ್ಕಳ ಆಟಿಕೆಗಳು ತುಕ್ಕು ಹಿಡಿದಿವೆ. ಸಿಮೆಂಟ್ ಕುರ್ಚಿಗಳ ಮೇಲೆ ಕುಳಿತರೆ ಕುಸಿಯುವಂತಿವೆ. ಉದ್ಯಾನದ ಅಂದ ಹೆಚ್ಚಿಸಿದ್ದ ನೀರಿನ ಕಾರಂಜಿಯ ತೊಟ್ಟಿ ಕಸದ ಗುಂಡಿಯಾಗಿದೆ. ಇಡೀ ಉದ್ಯಾನವನ್ನು ಪಾರ್ಥೇನಿಯಂ ಗಿಡಗಳು ಆವರಿಸಿವೆ.

ವಿದ್ಯಾನಗರ(ವಾರ್ಡ್ 34)ದಲ್ಲಿ­ರುವ ಮಹಾನಗರ ಪಾಲಿಕೆಯ ಚಿಕ್ಕವೀರಯ್ಯನವರ ಉದ್ಯಾನದ ಸ್ಥಿತಿ ಇದು. ಹುಬ್ಬಳ್ಳಿ–ಧಾರವಾಡ ಮುಖ್ಯರಸ್ತೆ­ಯಲ್ಲಿ ಸುಮಾರು ಒಂದೂಮುಕ್ಕಾಲು ಎಕರೆಯಲ್ಲಿ ಹರಡಿಕೊಂಡಿರುವ ಈ ಉದ್ಯಾನ, ಎಲ್ಲಾ ವಯೋಮಾನದವರ ಪ್ರಮುಖ ಆಕರ್ಷಕ ಕೇಂದ್ರವಾಗಿತ್ತು. ಮಹಾನಗರದ ನಂ.1 ಉದ್ಯಾನ ಎನಿಸಿಕೊಂಡಿದ್ದ ಈ ಉದ್ಯಾನ, ಎರಡು ವರ್ಷಗಳಿಂದೀಚೆಗೆ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ.

ಹಳೆಯ ಆರ್ಟ್‌ ಗ್ಯಾಲರಿ ಕಟ್ಟಡಕ್ಕೆ ಹೊಂದಿಕೊಂಡಂತಿರುವ ಉದ್ಯಾನದ ನಿರ್ವಹಣೆಯನ್ನು ನಾಲ್ಕೈದು ವರ್ಷದ ಹಿಂದೆ ಖಾಸಗಿಯವರಿಗೆ ವಹಿಸಲಾಗಿತ್ತು. ಆಗ ಉದ್ಯಾನದ ಸ್ವಚ್ಛತೆಗೆ ಹೆಚ್ಚು ಆದ್ಯತೆ ಕೊಡಲಾಗಿತ್ತಲ್ಲದೆ, ನಿರ್ವಹಣೆಯೂ ಉತ್­ತಮ­ವಾಗಿತ್ತು ಎನ್ನುತ್ತಾರೆ ಸ್ಥಳೀಯರು.

ADVERTISEMENT

ಹಣ ಎಲ್ಲಿ ಹೋಗುತ್ತದೆ: ‘ಉದ್ಯಾನ ಸೇರಿದಂತೆ ಅಭಿವೃದ್ಧಿ ಕೆಲಸಗಳಿಗಾಗಿ ಪಾಲಿಕೆಯ ಬಜೆಟ್‌ನಲ್ಲಿ ಇಂತಿಷ್ಟು ಹಣ ತೆಗೆದಿಡಲಾಗುತ್ತದೆ. ಸಾಲದ್ದಕ್ಕೆ ಪ್ರತಿ ವಾರ್ಡ್‌ಗೆ ₹ 50 ಲಕ್ಷ ಬಿಡುಗಡೆ ಮಾಡಲಾಗುತ್ತದೆ. ಆದರೆ, ನಮ್ಮ ವಾರ್ಡ್‌ನ ಸದಸ್ಯರು ಆ ಹಣದಲ್ಲಿ ಅದ್ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೊ ಗೊತ್ತಿಲ್ಲ. ಜನಪ್ರತಿನಿಧಿಯ ಬೇಜವಾಬ್ದಾರಿ ಉದ್ಯಾನವೊಂದು ಪಾಳು ಬೀಳುವುದಕ್ಕೆ ಕಾರಣವಾಗಿದೆ’ ಎಂದು ಖಾಸಗಿ ಕಂಪೆನಿ ಉದ್ಯೋಗಿ ಅನುಪಮಾ ಆಕ್ರೋಶ ವ್ಯಕ್ತಪಡಿಸುತ್ತಾರೆ.

‘ನಗರಕ್ಕೀಗ ಸ್ಮಾರ್ಟ್‌ ಸಿಟಿಯ ಗರಿ ಬಂದಿದೆ. ಆದರೆ, ಮೂಲಸೌಕರ್ಯ­ಗಳನ್ನು ಸಹ ಸರಿಯಾಗಿ ಒದಗಿಸಲಾಗದ ಸ್ಥಿತಿಯಲ್ಲಿದೆ ನಮ್ಮ ಪಾಲಿಕೆ. ಇನ್ನಾದರೂ, ನಾಗರಿಕರ ತೆರಿಗೆ ಹಣವನ್ನು ಅನಾವಶ್ಯಕವಾಗಿ ಪೋಲು ಮಾಡದೆ, ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ಆ ಮೂಲಕ ನಗರದ ಅಂದವನ್ನು ಹೆಚ್ಚಿಸಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

‘ಹಿತಾಸಕ್ತಿಯ ಕೊರತೆ’: ‘ವಿದ್ಯಾನಗರದ ಚಿಕ್ಕವೀರಯ್ಯನವರ ಉದ್ಯಾನವೊಂದೇ ಅಲ್ಲ. ಪಾಲಿಕೆ ವ್ಯಾಪ್ತಿಯ ಬಹುತೇಕ ಉದ್ಯಾನಗಳು ನಿರ್ವಹಣೆಯ ಕೊರತೆ­ಯಿಂದ ಬಳಲುತ್ತಿವೆ. ಇವುಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಯೋಜನೆ ತಯಾರಾಗಿದ್ದರೂ, ಆಯುಕ್ತರು ಆ ಕುರಿತು ಮುತುವರ್ಜಿ ವಹಿಸುತ್ತಿಲ್ಲ’ ಎಂದು ಆರೋಪಿಸುತ್ತಾರೆ ವಾರ್ಡ್ ಸಂಖ್ಯೆ–34ರ (ವಿದ್ಯಾನಗರ) ಸದಸ್ಯೆ ಲಕ್ಷ್ಮಿ ಉಪ್ಪಾರ.

‘ಹಿಂದಿನ ಆಯುಕ್ತ ಸಿ.ಎಂ. ನೂರ್ ಮನ್ಸೂರ್ ಅವರ ಅವಧಿಯಲ್ಲಿ ಈ ಉದ್ಯಾನದ ಅಭಿವೃದ್ಧಿಗಾಗಿ ₹ 25 ಲಕ್ಷದ ಕ್ರಿಯಾಯೋಜನೆ ಸಿದ್ದಪಡಿಸಲಾಗಿತ್ತು. ಬಳಿಕ, ಆ ಜಾಗಕ್ಕೆ ಬಂದ ಹಿರೇಮಠ ಅವರು ಕಡತವನ್ನು ಕಣ್ತೆರೆದು ಸಹ ನೋಡಿಲ್ಲ. ಅವರು ಆಸಕ್ತಿ ತೋರಿದರೆ, ಉದ್ಯಾನದ ಅಭಿವೃದ್ಧಿ ದೊಡ್ಡ ಸಮಸ್ಯೆಯೇನಲ್ಲ’ ಎಂದು ಉಪ್ಪಾರ  ಹೇಳುತ್ತಾರೆ.

₹ 25 ಲಕ್ಷದ ಕ್ರಿಯಾಯೋಜನೆ: ‘ಚಿಕ್ಕವೀರಯ್ಯನವರ ಉದ್ಯಾನ ಅಭಿ­ವೃದ್ಧಿ­ಗಾಗಿ ಹಿಂದಿನ ಆಯುಕ್ತರ ಅವಧಿ­ಯಲ್ಲಿ ₹ 25 ಲಕ್ಷ ವೆಚ್ಚದ ಕ್ರಿಯಾ­ಯೋಜನೆ ತಯಾರಿಸಲಾಗಿತ್ತು. ಉದ್ಯಾ­ನದ ಸುತ್ತ ತಡೆಗೋಡೆ, ಸಿಮೆಂಟ್‌ ಕುರ್ಚಿಗಳು, ಸಿಮೆಂಟ್ ಕಲಾಕೃತಿಗಳ ಮರುಸ್ಥಾಪನೆ, ನೀರಿನ ಕಾರಂಜಿ ಆರಂಭ ಸೇರಿದಂತೆ ಹಲವು ಕೆಲಸಗಳು ಇದರಲ್ಲಿ ಸೇರಿದ್ದವು’ ಎಂದು ಉತ್ತರ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಮಹೇಶ್ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಿಂದೆ ಚೆನ್ನಾಗಿತ್ತು’
‘ಅತ್ಯಂತ ಸುಂದರವಾಗಿದ್ದ ಈ ಉದ್ಯಾನಕ್ಕೆ ಬೆಳಿಗ್ಗೆ ಮತ್ತು ಸಂಜೆ ಸುತ್ತಮುತ್ತಲಿನ ಜನರು  ವಾಯುವಿಹಾರಕ್ಕೆ ಬರುತ್ತಿದ್ದರು. ಮಕ್ಕಳ ಆಟಿಕೆಗಳು ಇದ್ದಿದ್ದರಿಂದ ಮಹಿಳೆಯರು ಸಹ ಮಕ್ಕಳೊಂದಿಗೆ ಬಂದು, ಕಾಲ ಕಳೆದು ಹೋಗುತ್ತಿದ್ದರು. ಖಾಸಗಿಯವರ ನಿರ್ವಹಣೆಯಲ್ಲಿ ಎಲ್ಲವೂ ಚನ್ನಾಗಿತ್ತು. ಆದರೆ, ಪಾಲಿಕೆಯವರು ವಹಿಸಿಕೊಂಡ ಬಳಿಕ ಉದ್ಯಾನದ ನಿರ್ವಹಣೆ ಅಧೋಗತಿ ತಲುಪಿತು’.
 ಸಂಗಪ್ಪ ಎಂ. ಗೌಡರ

‘ಪ್ರಯೋಜನ ಆಗಲಿಲ್ಲ’
‘ನಿರ್ವಹಣೆಯ ಕೊರತೆ­ಯಿಂದಾಗಿ, ಇಲ್ಲಿದ್ದ ಸಿಮೆಂಟ್ ಕಲಾಕೃತಿಗಳು ಶಿಥಿಲಗೊಂಡು ನೆಲ ಕಚ್ಚಿವೆ. ನೀರಿನ ಕಾರಂಜಿ ಕೆಟ್ಟು ಹೋಗಿದೆ. ಈ ಎಲ್ಲ ಸಮಸ್ಯೆಗಳನ್ನು ವಾರ್ಡ್‌ ಸದಸ್ಯರು ಮತ್ತು ಸಂಬಂಧಪಟ್ಟ ಅಧಿಕಾರಿ­ಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ­ವಾಗಲಿಲ್ಲ’.
 ಸುರೇಂದ್ರ

* * 

ಉದ್ಯಾನಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಅನುದಾನದ ಕೊರತೆ ಇದೆ. ಅಲ್ಲದೆ, ವಾರ್ಡ್‌ಗಳ ಸದಸ್ಯರು ತಮ್ಮ ಅನುದಾನದಲ್ಲೂ ಅಭಿವೃದ್ಧಿಪಡಿಸಬಹುದು
ಸಿದ್ಧಲಿಂಗಯ್ಯ ಹಿರೇಮಠ
ಆಯುಕ್ತ, ಮಹಾನಗರ ಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.