ADVERTISEMENT

ಅವಳಿನಗರಕ್ಕೆ ಮಲೆನಾಡಿನ ಸ್ವರೂಪ

​ಪ್ರಜಾವಾಣಿ ವಾರ್ತೆ
Published 7 ಜೂನ್ 2011, 10:00 IST
Last Updated 7 ಜೂನ್ 2011, 10:00 IST
ಅವಳಿನಗರಕ್ಕೆ ಮಲೆನಾಡಿನ ಸ್ವರೂಪ
ಅವಳಿನಗರಕ್ಕೆ ಮಲೆನಾಡಿನ ಸ್ವರೂಪ   

ಹುಬ್ಬಳ್ಳಿ: ಹಗ್ಗದ ಮೇಲೆ ಹಾಕಿದ ಬಟ್ಟೆಗಳು ಮೂರು ದಿನವಾದರೂ ಒಣಗಿಲ್ಲ; ಮನೆಯಿಂದ ಹೊರಬಿದ್ದರೆ ಸಾಕು, ಸೋನೆಯ ರಾಗ ಯಾವಾಗ ಆರಂಭವಾಗುವುದೋ ಎಳ್ಳಷ್ಟೂ ಗೊತ್ತಿಲ್ಲ; ಪಾದಚಾರಿ ಮಾರ್ಗದಲ್ಲಿ ಹೊರಟರೆ ಏಕಾಏಕಿ ಕೆಸರಿನ ಬಣ್ಣದೋಕುಳಿ...

ಸುರಿಯುವ ಮಳೆಯಲ್ಲಿ ಮತ್ತದೇ ಗೋಳಾಟ. ಕಳೆದ ಒಂದು ವಾರದಿಂದ ಮುಂಗಾರು ಅವಳಿನಗರದ ಮೇಲೆ ಮುರಿದುಕೊಂಡು ಬಿದ್ದಿದೆ. ಬಿಟ್ಟೂ ಬಿಡದೆ ಜನರನ್ನು ಕಾಡುತ್ತಿದೆ. ಸೋಮವಾರ ಜೋರಾಗಿಯೇ ಸುರಿದ ಸೋನೆಗೆ ಜನ ಮೆತ್ತಗಾಗಿದ್ದಾರೆ. ಮಳೆಯಿಂದ ವ್ಯಾಪಾರದ ಮೇಲೆ ವಿಶೇಷವಾಗಿ ಕಾಯಿಪಲ್ಯೆ ವಹಿವಾಟಿನ ಮೇಲೆ ಏಟು ಬಿದ್ದಿದೆ.

ಮಾವಿನ ಹಣ್ಣಿನ ಬೆಲೆಯೂ ಸರ‌್ರನೇ ಜಾರಿದೆ. ರೂ. 180ಕ್ಕೆ ಒಂದು ಡಜನ್ ಸಿಗುತ್ತಿದ್ದ ಮಲ್ಲಿಕಾ, ಈಗ ರೂ. 100ಕ್ಕೇ ಸಿಕ್ಕುಬಿಡುತ್ತದೆ. ಮಿಕ್ಕ ವಿವಿಧ ಮಾವಿನ ಹಣ್ಣು ರೂ. 40ರಿಂದ 100ರ ಮೌಲ್ಯದಲ್ಲಿ ಡಜನ್‌ಗಟ್ಟಲೆ ಬಿಕರಿಯಾಗುತ್ತಿವೆ. ಕಾಲಿಡಲು ಜಾಗ ಇಲ್ಲದಂತೆ ಈದ್ಗಾ ಮೈದಾನ ಕಿಚಿ-ಕಿಚಿ ಎನ್ನುತ್ತಿದೆ.

ನಗರದ ಯಾವುದೇ ಆಸ್ಪತ್ರೆಗೆ ಹೋಗಿ ಹಾಸಿಗೆಗಳೆಲ್ಲ ರೋಗಿಗಳಿಂದ ತುಂಬಿ ತುಳುಕುತ್ತಿವೆ. ವೈದ್ಯರೆಲ್ಲ ಈಗ ತಮ್ಮ ಆರೋಗ್ಯದ ಕಡೆಗೂ ಗಮನಕೊಡಲು ಆಗದಷ್ಟು `ಬ್ಯೂಜಿ~ ಆಗಿದ್ದಾರೆ.  ನೆಗಡಿ-ಕೆಮ್ಮು ಪ್ರತಿ ಮನೆಯಲ್ಲಿ ಸಾಮಾನ್ಯವಾಗಿದೆ. ಔಷಧ ಅಂಗಡಿಗಳಲ್ಲೂ ಭರ್ಜರಿ ವ್ಯಾಪಾರ ನಡೆದಿದೆ. ಚಹಾದ ಅಂಗಡಿಗಳಲ್ಲಿ ಭಜಿ-ಮಿರ್ಚಿಗಳ ಘಮ-ಘಮ ಪರಿಮಳವೇ ಪರಿಮಳ.

ಮಳೆಯಲ್ಲಿ ಸೋಮವಾರ ಕಿಮ್ಸನಲ್ಲಿ ಕಂಡ ಬಿಂಬಗಳು ಭಲೆ ಮಜಬೂತಾಗಿದ್ದವು. ಮಲೆನಾಡಿನ ಯಾವುದೋ ಪ್ರದೇಶದಲ್ಲಿ ನಾವಿದ್ದೇವೆ ಎಂಬ ಭ್ರಮೆ ಉಂಟಾಗುತ್ತಿತ್ತು. ಇದ್ದ ಮೂರ‌್ನಾಲ್ಕು ಛತ್ರಿಗಳಲ್ಲಿ ಮಳೆ ನೀರಿನಲ್ಲಿ ತೊಯ್ಯದಂತೆ ನರ್ಸಿಂಗ್ ವಿದ್ಯಾರ್ಥಿನಿಯರು ಒದ್ದಾಡುತ್ತಿದ್ದರು. ಸೋನೆಗೆ ಅಂಜಿ ರೋಗಿಗಳೂ ಓಟಕಿತ್ತರು. ಮಳೆ ಬಂದು ಹೋದ ಮೇಲೆ ಅದರ ನೀರಿನಲ್ಲಿ ಕಿಮ್ಸ ಪ್ರಧಾನ ಕಟ್ಟಡದ ಪ್ರತಿಬಿಂಬ ಸುಂದರವಾಗಿ ಕಂಗೊಳಿಸುತ್ತಿತ್ತು.

ಪಾಲಿಕೆ ನೂರು ಕೋಟಿ ರೂಪಾಯಿಯ ವಿಶೇಷ ಅನುದಾನದಲ್ಲಿ ದುರಸ್ತಿ ಕಂಡಿದ್ದ ರಸ್ತೆಗಳ ಮೇಲೆಲ್ಲಾ ಈಗ ಎಲ್ಲಿ ನೋಡಿದಲ್ಲಿ ಕೆಂಪು ನೀರು. ರಸ್ತೆ ಬದಿ ಹೊರಟ ಪಾದಚಾರಿಗಳ ಜತೆ ವಾಹನಗಳು ರಂಗಿನಾಟ ಆಡುತ್ತವೆ.ಸಣ್ಣಗೆ ಮಳೆ ಹನಿಯುತ್ತಿರುವ ಕಾರಣ ಪಕ್ಕದ ರಾಡಿ ರಸ್ತೆ ಮೇಲೆಯೇ ನಿಂತಿದೆ. ನೀರಿನ ಪ್ರವಾಹ ಇಲ್ಲದಿರುವುದರಿಂದ ರಾಡಿ ಮುಂದೆ ಹರಿಯದೆ ವಾಹನ ಸವಾರರಿಗೆ ಸವಾಲು ಒಡ್ಡುತ್ತಿದೆ. ರಸ್ತೆ ಮೇಲಿನ ಗುಂಡಿಗಳಲ್ಲೂ ರಾಡಿ ನೀರು ತುಂಬಿಕೊಂಡಿದ್ದು, ವಾಹನಗಳು ಸಂಚರಿಸಲು ಒದ್ದಾಡುತ್ತಿವೆ.


ಕೆಂಪು ಬಣ್ಣ ತುಂಬಿಕೊಂಡು ಕಿಚಿ-ಕಿಚಿ ಎನ್ನುವ ರಸ್ತೆಗಳಲ್ಲಿ ಜನರು ಸಂಚರಿಸುವುದೇ ಪ್ರಯಾಸವಾಗಿದೆ. ಕೆಲವೆಡೆ ದ್ವಿಚಕ್ರ ವಾಹನಗಳು ಆಯತಪ್ಪಿ ಬಿದ್ದು, ವಾಹನ ಸವಾರರು ಪೆಟ್ಟು ಮಾಡಿಕೊಂಡಿದ್ದೂ ಇದೆ. ಗಾಡಿಗಳು ದೊಡ್ಡ ಸಂಖ್ಯೆಯಲ್ಲಿ ಗ್ಯಾರೇಜಿಗೆ ಓಡುತ್ತಿವೆ.

ಹೆಗ್ಗೇರಿ, ವಿಕಾಸನಗರ, ಸಿದ್ಧಲಿಂಗೇಶ್ವರ ಕಾಲೊನಿ, ಭಾರತ್ ಮಿಲ್ ರಸ್ತೆ, ಹಳೇ ಹುಬ್ಬಳ್ಳಿ, ಲಿಂಗರಾಜನಗರ ಮೊದಲಾದ ರಸ್ತೆಗಳಲ್ಲಿ ಓಡಾಡುವುದು ಹರಸಾಹಸವಾಗಿದೆ. ರಸ್ತೆ ಮೇಲೆ ನಿಂತಿರುವ ರಾಡಿಯಿಂದ ಕಪ್ಪು ರಸ್ತೆಗಳೆಲ್ಲ ಕೆಂಪು ದಿರಿಸು ತೊಟ್ಟುಕೊಂಡಿವೆ.

ಹುಬ್ಬಳ್ಳಿ-ಧಾರವಾಡದ ತಾಪಮಾನ ಷೇರು ಸೂಚ್ಯಂಕದಂತೆ ಸರ‌್ರನೇ ಜಾರಿ ಪಾತಾಳ ಕಂಡಿದೆ. ನಗರದ ಮಂದಿಗೆ ಏನೆಲ್ಲಾ ತೊಂದರೆಯಾದರೂ ಜಿಲ್ಲೆಯ ಜನಕ್ಕೆ ಈ ಮಳೆ ಖುಷಿಕೊಟ್ಟಿದೆ. ಮಾರುಕಟ್ಟೆಯಲ್ಲಿ ಬಡಿದಾಡಿ ಬೀಜ ತಂದಿದ್ದು ಎಷ್ಟೊಂದು ಒಳ್ಳೆಯದಾಯಿತು ಎಂಬ ಹರ್ಷ ಅವರ ಮೊಗದಲ್ಲಿ ಎದ್ದು ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT