ADVERTISEMENT

ಅವಳಿನಗರ ಆಸ್ಪತ್ರೆ ಸುಧಾರಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 7:30 IST
Last Updated 25 ಫೆಬ್ರುವರಿ 2011, 7:30 IST

ಹುಬ್ಬಳ್ಳಿ: ಅವಳಿ ನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ ನಡೆಸಲಾಗುವ ಹತ್ತು ಆಸ್ಪತ್ರೆಗಳಿಗೆ ಮೂಲಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿ ಪಾಲಿಕೆ ಸದಸ್ಯ ಹಾಗೂ ಜೆಡಿಎಸ್ ಪಕ್ಷದ ಮುಖಂಡ ರಾಜಣ್ಣ ಎಸ್. ಕೊರವಿ ಅವರು ಈಚೆಗೆ ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಆರೋಗ್ಯ ಖಾತೆ ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು.

ಅವಳಿ ನಗರಗಳಲ್ಲಿರುವ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ 1961ರ ಜನಸಂಖ್ಯೆಗೆ ಅನುಗುಣವಾಗಿದೆ. ಆದರೆ ಈಗ ಅವಳಿ ನಗರದ ಜನಸಂಖ್ಯೆ ಹೆಚ್ಚಾಗಿದ್ದು ಸಿಬ್ಬಂದಿ ಸಂಖ್ಯೆ ಅದಕ್ಕನುಗುಣವಾಗಿ ಹೆಚ್ಚಾಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಚಿಟಗುಪ್ಪಿ ಆಸ್ಪತ್ರೆಯ ಹೆರಿಗೆ ವಿಭಾಗಕ್ಕೆ ಹೊಸರೂಪ ನೀಡಲಾಗುತ್ತಿದ್ದು ಅದನ್ನು ಪೂರ್ಣಗೊಳಿಸಲು ಹಾಗೂ ಪಾಲಿಕೆಯ ಇತರ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲು ಸುಮಾರು ಎರಡು ಕೋಟಿ ರೂಪಾಯಿಗಳ ಅಗತ್ಯವಿದ್ದು ಅದನ್ನು ಶೀಘ್ರ ಬಿಡುಗಡೆ ಮಾಡಬೇಕು, ಪಾಲಿಕೆಯ ಆಸ್ಪತ್ರೆಗಳಿಗೆ ತುರ್ತು ಬೇಕಾಗಿರುವ ಪೀಠೋಪಕರಣಗಳುಹಾಗೂ ಇತರ ಉಪಕರಣಗಳನ್ನು ಖರೀದಿಸಲು 70 ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆ ಮಾಡಬೇಕು ಎಂದು ಕೂಡ ಮನವಿಯಲ್ಲಿ ಕೋರಲಾಗಿದೆ.

ಪಾಲಿಕೆ ವ್ಯಾಪ್ತಿಯ ಭೈರಿದೇವರಕೊಪ್ಪದಲ್ಲಿ ಆರಂಭಿಸಲಾಗಿರುವ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಹಾಗೂ ಇತರ ಕೆಲಸಗಳಿಗೆ 36 ಲಕ್ಷ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು, ಚಿಟಗುಪ್ಪಿ ಆಸ್ಪತ್ರೆ, ಹಳೇಹುಬ್ಬಳ್ಳಿಯಲ್ಲಿರುವ ಆಸ್ಪತ್ರೆ ಹಾಗೂ ಧಾರವಾಡದ ಬಸ್ ಸ್ಟ್ಯಾಂಡ್ ಬಳಿ ಇರುವ ಹೆರಿಗೆ ಆಸ್ಪತ್ರೆಗೆ ತಲಾ ಒಂದೊಂದು ಆ್ಯಂಬುಲೆನ್ಸ್ ಅನ್ನು ಒದಗಿಸಬೇಕು ಎಂದು ಮನವಿ ಮಾಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.