ADVERTISEMENT

ಅವ್ಯವಹಾರ ನಡೆದಿಲ್ಲ: ಮುನವಳ್ಳಿ ಸ್ಪಷ್ಟನೆ

ಗುರುಸಿದ್ಧೇಶ್ವರ ಬ್ಯಾಂಕಿನ 34ನೇ ವಾರ್ಷಿಕ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 8:37 IST
Last Updated 26 ಸೆಪ್ಟೆಂಬರ್ 2013, 8:37 IST
ಹುಬ್ಬಳ್ಳಿಯ ಬ್ಯಾಂಕಿನ ಸಭಾಂಗಣದಲ್ಲಿ ಬುಧವಾರ ನಡೆದ 34ನೇ ವಾರ್ಷಿಕ ಮಹಾಸಭೆಯ ಸಾನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು. ಬ್ಯಾಂಕಿನ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಉಪಾಧ್ಯಕ್ಷ ಚಿನ್ನಪ್ಪಗೌಡ ಬ.ಪಾಟೀಲ, ನಿರ್ದೇಶಕರಾದ ಮಹೇಶ ಟೆಂಗಿನಕಾಯಿ,  ವೀರಣ್ಣ ಬ.ಕಲ್ಲೂರ, ಫಕ್ಕೀರಪ್ಪ ಚಂ.ಭೂಸದ ಮತ್ತಿತರರು ಚಿತ್ರದಲ್ಲಿದ್ದಾರೆ.
ಹುಬ್ಬಳ್ಳಿಯ ಬ್ಯಾಂಕಿನ ಸಭಾಂಗಣದಲ್ಲಿ ಬುಧವಾರ ನಡೆದ 34ನೇ ವಾರ್ಷಿಕ ಮಹಾಸಭೆಯ ಸಾನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಮಾತನಾಡಿದರು. ಬ್ಯಾಂಕಿನ ಅಧ್ಯಕ್ಷ ಶಂಕರಣ್ಣ ಮುನವಳ್ಳಿ, ಉಪಾಧ್ಯಕ್ಷ ಚಿನ್ನಪ್ಪಗೌಡ ಬ.ಪಾಟೀಲ, ನಿರ್ದೇಶಕರಾದ ಮಹೇಶ ಟೆಂಗಿನಕಾಯಿ, ವೀರಣ್ಣ ಬ.ಕಲ್ಲೂರ, ಫಕ್ಕೀರಪ್ಪ ಚಂ.ಭೂಸದ ಮತ್ತಿತರರು ಚಿತ್ರದಲ್ಲಿದ್ದಾರೆ.   

ಹುಬ್ಬಳ್ಳಿ: ಗುರುಸಿದ್ಧೇಶ್ವರ ಬ್ಯಾಂಕಿನಲ್ಲಿ ಒಂದು ರೂಪಾಯಿ ಕೂಡ ಅವ್ಯವಹಾರ ನಡೆದಿಲ್ಲ. ಬ್ಯಾಂಕಿನ ಕಾರ್ಯ ವೈಖರಿ ಕಂಡು ಸ್ವತಃ ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾ (ಆರ್ ಬಿಐ) ಬೆನ್ನು ತಟ್ಟಿದೆ ಎಂದು ಬ್ಯಾಂಕಿನ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಹೇಳಿದರು.

ಬ್ಯಾಂಕಿನ ಸಭಾಂಗಣದಲ್ಲಿ ಬುಧವಾರ ನಡೆದ 34ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಲೆಕ್ಕಪತ್ರ ಸಿಬ್ಬಂದಿಯ ಕೆಲವು ತಪ್ಪುಗಳಿಂದ ಹಾಗೂ ನಿಯಮಾವಳಿ ಪಾಲನೆ­ಯಲ್ಲಿ ಆದ ಕೆಲವು ಲೋಪಗಳಿಂದ ಮಾಡದ ತಪ್ಪಿಗೆ ತಲೆ ಕೊಡಬೇಕಾಯಿತು ಎಂದು ಬೇಸರ ವ್ಯಕ್ತಪಡಿಸಿದರು.

ಆರ್‌ಬಿಐ ಮಾರ್ಗದರ್ಶನದಂತೆ ಹಣ ವಾಪಸ್‌ ತುಂಬಿದ್ದೇವೆ ಎಂದ ಅವರು, ಬ್ಯಾಂಕಿನ ಹಿಂದಿನ ಮ್ಯಾನೇಜರ್ ಹಲವು ಅಕ್ರಮಗಳನ್ನು ನಡೆಸಿ ಬಹಳಷ್ಟು ಠೇವಣಿ ಖಾತೆಗಳನ್ನು ರದ್ದುಪ­ಡಿಸಿದ್ದರು. ಅದು ಪತ್ತೆಯಾದಾಗ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಕೆಲವರು ಸಲಹೆ ನೀಡಿದ್ದರು. ಆದರೆ ಅವರ ಬಗ್ಗೆ ಕನಿಕರ ತೋರಿದ್ದಕ್ಕೆ ಇಂದು ನಮಗೆ ತೊಂದರೆ­ಯಾಯಿತು ಎಂದರು.

‘ನಾನು ಸಾಯುವವರೆಗೂ ತಪ್ಪು ಮಾಡೊಲ್ಲ. ಶೀಘ್ರ ಎಲ್ಲಾ ಆರೋಪಗಳಿಂದ ಮುಕ್ತ­ರಾಗಲಿದ್ದೇವೆ. ಸಮಾಜ ಸೇವೆ ಮಾಡಲು ಬಂದು ಮೈಮೇಲೆ ತೊಂದರೆ ಎಳೆದುಕೊಳ್ಳ­ಬೇಕಾಯಿತು. ಆದರೂ ಎದೆಗುಂದುವುದಿಲ್ಲ. ಈಗಾಗಲೇ ಮಾಧ್ಯಮಗಳ ಮೂಲಕ ಬ್ಯಾಂಕಿನಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ ಎಂಬುದನ್ನು ಸ್ಪಷ್ಟಪಡಿಸಿ­ದ್ದೇನೆ. ಹಾಲಿ ಲಾಭದ ಹಾದಿಯ­ಲ್ಲಿರುವ ಬ್ಯಾಂಕನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಒಯ್ಯುವುದಾಗಿ’ ಹೇಳಿದರು.

ಸ್ವಾಮೀಜಿ ಪ್ರಶಂಸೆ: ಬ್ಯಾಂಕಿನ ಈಗಿನ ಆಡಳಿತ ವರ್ಗವನ್ನು ಆರಿಸಿ ತರುವ ಮೂಲಕ ಷೇರು­ದಾರರು ಪುಣ್ಯ ಮಾಡಿದ್ದೀರಿ ಎಂದು ಸಭೆಯ ಸಾನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಗುರುಸಿದ್ಧ­ರಾಜ­ಯೋಗೀಂದ್ರ ಸ್ವಾಮೀಜಿ ಪ್ರಶಂಸೆ ವ್ಯಕ್ತಪಡಿಸಿದರು.

ನಷ್ಟದಿಂದ ಅವಸಾನದ ಅಂಚಿನಲ್ಲಿದ್ದ ಬ್ಯಾಂಕನ್ನು ಲಾಭದಾಯಕವಾಗಿಸಲು ಬ್ಯಾಂಕಿನ ಆಡಳಿತ ವರ್ಗದ ಪ್ರಾಮಾಣಿಕತೆ ಹಾಗೂ ಪರಿಶ್ರಮ ಕಾರಣ ಎಂದು ಹೇಳಿದ ಅವರು, ಯಾರ ಮಾತಿಗೂ ಲಕ್ಷ್ಯ ಕೊಡದೆ ಸಮಾಜ ಸೇವೆ ಮಾಡಿಕೊಂಡು ಹೋಗುವಂತೆ ಬ್ಯಾಂಕಿನ ಆಡಳಿತ ವರ್ಗಕ್ಕೆ ಸಲಹೆ ನೀಡಿದರು.

ಬ್ಯಾಂಕಿನ ದೈನಂದಿನ ವ್ಯವಹಾರದಲ್ಲಿ ಕೆಲವು ವ್ಯತ್ಯಾಸ, ಅಚಾತುರ್ಯ ಆಗಿರಬಹುದು. ಹಾಗೆಂದು ಯಾರ ವಿರುದ್ಧವೂ ಅಪವಾದ ಹೊರಿ­ಸಲು ಹೋಗುವುದಿಲ್ಲ. ಎಲ್ಲರಿಂದಲೂ ಒಳ್ಳೆಯವರು ಎನಿಸಿಕೊಂಡು ಸಮಾಜಸೇವೆ ಮಾಡಲು ಆಗುವುದಿಲ್ಲ ಹಾಗೆಂದು
ಸಮಾಜ­ಸೇವೆ­ಯಿಂದ ವಿಮುಖರಾಗದಿರಿ ಎಂದರು.

ಬ್ಯಾಂಕಿನ ಸಹಾಯಕ ಲೆಕ್ಕಾಧಿಕಾರಿ ವಿನೋದ ಎಸ್ ವಾಲಿ, ಸಭೆಯಲ್ಲಿ 24 ವಿವಿಧ ವಿಷಯಗಳನ್ನು ಪ್ರಸ್ತಾಪಿಸಿ ಸದಸ್ಯರಿಂದ ಅನುಮೋದನೆ ಪಡೆದರು. ಬ್ಯಾಂಕಿನ ನಿರ್ದೇಶಕ ಮಹೇಶ ಟೆಂಗಿನಕಾಯಿ ಸ್ವಾಗತಿಸಿದರು.

ನಾಟಕೀಯ ಬೆಳವಣಿಗೆಗೆ ಸಾಕ್ಷಿ...
ಬ್ಯಾಂಕಿನ ವಾರ್ಷಿಕ ಮಹಾಸಭೆ ಕೇವಲ 36 ನಿಮಿಷಗಳಲ್ಲಿ ಮುಕ್ತಾಯವಾಯಿತು. ನಾಲ್ಕು ಗಂಟೆಗೆ ಆರಂಭವಾದ ಸಭೆ 4.36ಕ್ಕೆ  ಅಂತ್ಯ ಕಂಡಿತು. ಸಭೆಯಲ್ಲಿ ಸದಸ್ಯರೊಬ್ಬರು ಪ್ರಶ್ನೆ ಕೇಳಲು ಮುಂದಾದಾಗ ಮಹಾನಗರ ಪಾಲಿಕೆ ಮಾಜಿ ಸದಸ್ಯ ಚೆನ್ನಬಸಪ್ಪ ಹಳ್ಯಾಳ ಜೋರು ಮಾಡಿ ಸುಮ್ಮನಾಗಿಸಿದರು. ಈಗಾಗಲೇ ವಂದನಾರ್ಪಣೆ ಮಾಡಿರುವುದರಿಂದ ಸ್ವಾಮೀಜಿ ಮಾತನಾಡಬೇಕಿದೆ ಯಾರೂ ಪ್ರಶ್ನೆ ಕೇಳುವಂತಿಲ್ಲ ಎಂದರು.

ಇದರಿಂದ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ‘ಎಲ್ಲಾ ಪೂರ್ವಸಿದ್ಧತೆ ಮಾಡಿಕೊಂಡು, ಗಲಾಟೆ ಮಾಡಲು ತಮ್ಮವರನ್ನು ಕರೆತಂದು ಮುಂದೆ ಕೂರಿಸಿಕೊಂಡಿದ್ದಾರೆ. ನಮ್ಮ ಧ್ವನಿಗೆ ಬೆಲೆಯೇ ಇಲ್ಲ’ ಎಂದು ಹಿಂದಿನ ಸಾಲಿನಲ್ಲಿ ಕುಳಿತಿದ್ದ ಷೇರುದಾರರೊಬ್ಬರು ಬೇಸರ ವ್ಯಕ್ತಪಡಿಸಿದರು.

‘ಅನರ್ಹತೆ’ಯ ತೂಗುಗತ್ತಿ
ಹಣ ದುರುಪಯೋಗದ ಹಿನ್ನೆಲೆಯಲ್ಲಿ  ಸಹಕಾರ ಕಾಯ್ದೆ 1959ಕಲಂ 29–ಸಿ(8)(ಬಿ) ಮತ್ತು 29–ಸಿ(ಕೆ) ಅನ್ವಯ ‘ನಿಮ್ಮ ಸದಸ್ಯತ್ವ ರದ್ದುಪಡಿಸಬಾರದೇಕೆ’ ಎಂದು ಪ್ರಶ್ನಿಸಿ ನಗರದ ಗುರುಸಿದ್ಧೇಶ್ವರ ಬ್ಯಾಂಕಿನ ಆಡಳಿತ ಮಂಡಳಿಯ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ಸೇರಿದಂತೆ 11 ಮಂದಿ ಸದಸ್ಯರಿಗೆ ಸಹಕಾರ ಸಂಘಗಳ ಜಂಟಿ ನಿಬಂಧ­ಕರು ಇತ್ತೀಚೆಗೆ ನೊಟೀಸ್ ನೀಡಿದ್ದಾರೆ.

ಬ್ಯಾಂಕಿನ ಷೇರುದಾರರಾದ ಎಸ್.ಜಿ.­ಟೆಂಗಿನ­­ಕಾಯಿ ಹಾಗೂ ಮುತ್ತಣ್ಣ ಬತ್ಲಿ ನೀಡಿದ ದೂರು ಆಧರಿಸಿ ಸೆಪ್ಟೆಂಬರ್ 6ರಂದು ನೊಟೀಸ್ ನೀಡಿ 20ರಂದು ವಿವರಣೆ ನೀಡಲು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ ದೂರುದಾರರು ಹಾಜರಾಗಿ ಅಗತ್ಯ ದಾಖಲೆಗಳನ್ನು ಸಲ್ಲಿಸಿದರು. ನೊಟೀಸ್ ಪಡೆದವರು ಹಾಜರಾಗಿಲ್ಲ. ವಿಚಾರಣೆ ಪೂರ್ಣಗೊಳಿಸಿರುವ ಜಂಟಿ ನಿಬಂಧಕರು ಅಕ್ಟೋಬರ್ 7ರಂದು ‘ಅನರ್ಹತೆ’ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.