ADVERTISEMENT

ಆಟೊ ಎಲ್‌ಪಿಜಿ ದರ ಏರಿಕೆ: ಚಾಲಕರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 7:51 IST
Last Updated 3 ಜನವರಿ 2014, 7:51 IST

ಹುಬ್ಬಳ್ಳಿ: ಆಟೊಗಳಿಗೆ ಬಳಸುವ ಎಲ್‌ಪಿಜಿ ಸಿಲಿಂಡರ್‌ ದರವನ್ನು ದಿಢೀರ್‌ ಆಗಿ ಪ್ರತಿ ಲೀಟರಿಗೆ ₨ 11.50ರಷ್ಟು ಏರಿಸಿರುವ ಕೇಂದ್ರ ಸರ್ಕಾರದ ಕ್ರಮ ದಿನದ ದುಡಿಮೆ ನಂಬಿದ ಆಟೊ ಚಾಲಕರ ಬದುಕಿನಲ್ಲಿ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹುಬ್ಬಳ್ಳಿ ಆಟೊ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘ ಆರೋಪಿಸಿದೆ.

ದರ ಏರಿಕೆ ವಿರೋಧಿಸಿ ಸಂಘದ ವತಿಯಿಂದ ಗುರುವಾರ ನಗರದಲ್ಲಿ ನಡೆದ ಪ್ರತಿಭಟನೆಯ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನೆಕಾರರು, ಕೇಂದ್ರ ಇಂಧನ ಸಚಿವ ವೀರಪ್ಪ ಮೊಯಿಲಿ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ನೂತನ ಆಟೊಗಳ ಬೆಲೆ ಗಗನಕ್ಕೇರಿದೆ. ಬಿಡಿಭಾಗಗಳ ಬೆಲೆಯೂ ದುಪ್ಪಟ್ಟಾಗಿದೆ. ಒಂದು ದಿನಕ್ಕೆ ಆಟೊ ಚಾಲಕ ಕೇವಲ ₨ 200ರಿಂದ 300 ಸಂಪಾದಿಸಬೇಕಾದರೆ ಹರಸಾಹಸ ಪಡಬೇಕಿದೆ. ಈ ವೇಳೆ ಆಟೊ ಎಲ್‌ಪಿಜಿ ದರ ಏರಿಸಿರುವುದು ಸರಿಯಲ್ಲ. ಆಟೊರಿಕ್ಷಾವನ್ನೇ ನಂಬಿದ ದೊಡ್ಡ ಸಮುದಾಯದ ಬದುಕು ಇದರಿಂದ ಇನ್ನಷ್ಟು ದುಸ್ತರವಾಗಲಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಹೇಳಿದರು. 

ಆಟೊ ಎಲ್‌ಪಿಜಿ ದರ ಇಳಿಸಬೇಕು, ಆಟೋ ಚಾಲಕರಿಗೆ ಪೆಟ್ರೋಲ್‌ ಮತ್ತು ಆಟೊ ಎಲ್‌ಪಿಜಿ ಸಬ್ಸಿಡಿ ದರದಲ್ಲಿ ನೀಡಬೇಕು, ಆಟೊ ರಿಕ್ಷಾ ಕನಿಷ್ಠ ಬಾಡಿಗೆ ₨ 30 ನಿಗದಿಪಡಿಸಬೇಕು, ಆಟೊ ರಿಕ್ಷಾ ವಿಮೆ ಇಳಿಸಬೇಕು, ಪ್ರತಿ ಲೀಟರಿಗೆ ಪ್ರತಿ ತಿಂಗಳು ಡೀಸೆಲ್‌ ಬೆಲೆ 50 ಪೈಸೆ ಏರಿಸುವು­ದನ್ನು ನಿಲ್ಲಿಸಬೇಕು ಎಂದೂ ಪ್ರತಿಭಟನೆಕಾರರು ಆಗ್ರಹಿಸಿದರು.

ಆಟೊ ಸಂಚಾರ ಬಂದ್‌ ಕರೆ
ಧಾರವಾಡ:
ಕೇಂದ್ರ ಸರ್ಕಾರ ಎಲ್‌ಪಿಜಿ ಬೆಲೆ ಏರಿಕೆ ಮಾಡಿದ ಕ್ರಮವನ್ನು ಖಂಡಿಸಿ ‘ಆಟೊ ರಿಕ್ಷಾ ಚಾಲಕರ ಮತ್ತು ಮಾಲಕರ ಕ್ಷೇಮಾಭಿವೃದ್ಧಿ ಅಸೋಸಿಯೇಷನ್‌’ ಸದಸ್ಯರು ಇದೇ 3ರಂದು ಆಟೊ ರಿಕ್ಷಾ ಬಂದ್‌ಗೆ ನೀಡಿದ್ದಾರೆ. ಆಟೊ ಎಲ್‌ಪಿಜಿ ದರವನ್ನು ಏರಿಸಿದ್ದರಿಂದ ಬಡ ಆಟೊ ರಿಕ್ಷಾ ಚಾಲಕರು ಆತಂಕಗೊಂಡಿದ್ದಾರೆ.

ಕೇಂದ್ರ ಸರ್ಕಾರ ಪದೇ ಪದೇ ಎಲ್‌ಪಿಜಿ ದರಗಳನ್ನು ಏರಿಸುವ ಮೂಲಕ ಬಡಜನರ ರಕ್ತವನ್ನು ಹೀರುತ್ತಿದೆ. ಆಟೊ ಚಾಲಕರು ಜೀವನ ಸಾಗಿಸುವುದೇ ಕಷ್ಟವಾಗಿದೆ. ಆದ್ದರಿಂದ ದರ ಏರಿಕೆ ಖಂಡಿಸಿ ನಗರದಲ್ಲಿ ಆಟೊಗಳ ಸಂಚಾರವನ್ನು ಬಂದ್‌ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು. ಅಂದು ಬೆಳಿಗ್ಗೆ ಎಲ್ಲ ಆಟೊ ಚಾಲಕರು ಕಲಾಭವನ ಮೈದಾನದಲ್ಲಿ ಸೇರಲಿದ್ದು, ಅಲ್ಲಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಸಂಘಟನೆಯ ಅಧ್ಯಕ್ಷ ಜೀವನ ಹುತ್ಕುರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT