ADVERTISEMENT

ಆದಿಬಣಜಿಗರನ್ನು ಹಿಂದುಳಿದ ವರ್ಗಕ್ಕೆ ಸೇರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 5:51 IST
Last Updated 18 ಜುಲೈ 2013, 5:51 IST

ಧಾರವಾಡ: ಆದಿಬಣಜಿಗ ಜನಾಂಗವನ್ನು ಪ್ರವರ್ಗ-2ಎ ಮೀಸಲಾತಿ ಅಡಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ವೀರಶೈವ ಆದಿಬಣಜಿಗರ ಸಂಘದ ಸದಸ್ಯರು ಬುಧವಾರ ಜಿಲ್ಲಾಧಿಕಾರಿ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಆದಿಬಣಜಿಗ ಪಂಗಡವನ್ನು ಪ್ರವರ್ಗ-2ಎ ಮೀಸಲಾತಿ ಅಡಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಒತ್ತಾಯಿಸಿ ಕಳೆದ 15 ವರ್ಷಗಳಿಂದ ಸರ್ಕಾರಕ್ಕೆ ಕಾನೂನಿನ ಚೌಕಟ್ಟಿನಲ್ಲಿ ಹಕ್ಕೊತ್ತಾಯ ಮಂಡಿಸುತ್ತಲೇ ಬರಲಾಗಿದೆ. ರಾಜ್ಯ ಸರ್ಕಾರ ಮತ್ತು ಹಿಂದುಳಿದ ವರ್ಗಗಳ ಆಯೋಗದ ಸೂಚನೆಯಂತೆ 2001ರಿಂದ ಇಲ್ಲಿಯವರೆಗೆ ಒಟ್ಟು 20 ಮನವಿ ಪತ್ರಗಳ ಮುಖಾಂತರ ವಿಧಾನಸಭೆ ಸಮಾಜ ಕಲ್ಯಾಣ ಇಲಾಖೆಯ ಸಚಿವಾಲಯದಲ್ಲಿ, ಜಿಲ್ಲಾ ಸ್ಥಳದ ಬಹಿರಂಗ ಸಭೆಗಳಲ್ಲಿ ಹಾಗೂ ಹಿಂದುಳಿದ ವರ್ಗದ ಆಯೋಗದ ಕಚೇರಿಯಲ್ಲಿ ಮುಖಾಮುಖಿ ಚರ್ಚೆ ನಡೆದಿದೆ.

ಆದಿಬಣಜಿಗ ಜನಾಂಗದ ಸಮಗ್ರ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಎಸ್.ಸಿದ್ಧಗಂಗಯ್ಯ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಆಯೋಗವು ರಚನೆಯಾಗಿತ್ತು. ಆ ಪ್ರಕಾರ ಆಯೋಗವು ರಾಜ್ಯದಾದ್ಯಂತ ಸಮೀಕ್ಷೆ ಮಾಡಿ ಆದಿಬಣಜಿಗ ಸಮುದಾಯ ಎಲ್ಲ ರಂಗಗಳಲ್ಲಿಯೂ ತೀರಾ ಹಿಂದುಳಿದುದರಿಂದ ಈ ಜನಾಂಗವನ್ನು ಪ್ರವರ್ಗ-2ಎ ಮೀಸಲಾತಿ ಅಡಿಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿಸಬಹುದು ಎಂದು ಶಿಫಾರಸು ಮಾಡಿ ಕಳೆದ 2005ನೇ ಇಸ್ವಿಯ ಜನೇವರಿ ತಿಂಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿತ್ತು.

ರಾಜ್ಯದಲ್ಲಿ ಸುಮಾರು 25 ಲಕ್ಷಕ್ಕಿಂತಲೂ ಅಧಿಕ ಜನಸಂಖ್ಯೆ ಹೊಂದಿರುವ ಈ ಸಮಾಜವನ್ನು, ಎಲ್ಲ ಸರ್ಕಾರಗಳು ಕಡೆಗಣಿಸಿವೆ. ಮುಂಬೈ ಕರ್ನಾಟಕ ಭಾಗದಲ್ಲಿ ವೀರಶೈವ ಆದಿಬಣಜಿಗ ಎಂದು, ಕರ್ನಾಟಕ ಮಹಾರಾಷ್ಟ್ರ ಗಡಿಭಾಗದಲ್ಲಿ ಚತುರ್ಥ ಲಿಂಗಾಯತರೆಂದು, ಹೈದರಾಬಾದ್ ಕರ್ನಾಟಕದಲ್ಲಿ ಆದಿ ವೀರಶೈವ ಎಂದು ಕರೆಯಲಾಗುವ ಈ ಸಮಾಜವನ್ನು ಕೂಡಲೇ ಹಿಂದುಳಿದ ವರ್ಗಕ್ಕೆ ಸೇರಿಸಬೇಕು ಎಂದು ಶೇಖಣ್ಣ ಹೈಬತ್ತಿ, ಚನ್ನಬಸವನಗೌಡ ಪಾಟೀಲ, ಅಶೋಕ ಸೋಮಾಪುರ, ಗುರುವನಗೌಡ ಬೂದಗಟ್ಟಿ, ಎಫ್.ಎನ್.ಕೋನಣ್ಣವರ ಮತ್ತಿತರರು ಮನವಿಯಲ್ಲಿ ಆಗ್ರಹಿಸಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.