ADVERTISEMENT

ಇನ್ನೂ ಮುಗಿಯದ ಹಳೆಯ ಕಾಮಗಾರಿ

ಪ್ರಜಾವಾಣಿ ವಿಶೇಷ
Published 19 ಅಕ್ಟೋಬರ್ 2011, 9:25 IST
Last Updated 19 ಅಕ್ಟೋಬರ್ 2011, 9:25 IST

ಹುಬ್ಬಳ್ಳಿ: ಅವಳಿನಗರದಲ್ಲಿ ಈಗ ರಾಜ್ಯ ಸರ್ಕಾರ ಮಹಾನಗರ ಪಾಲಿಕೆಗೆ ನೀಡಲಿರುವ ಎರಡನೇ ಹಂತದ ರೂ 100 ಕೋಟಿ ವಿಶೇಷ ಅನುದಾನದ ಅಭಿವೃದ್ಧಿ ಕೆಲಸಗಳದ್ದೇ ಸದ್ದು. ಆದರೆ, ಮೊದಲ ರೂ 100 ಕೋಟಿ ವಿಶೇಷ ಅನುದಾನಲ್ಲಿ ಕೈಗೆತ್ತಿಕೊಂಡ ಹಲವು ಮಹತ್ವದ ಯೋಜನೆಗಳು ಇನ್ನೂ ಪೂರ್ಣ ಗೊಂಡಿಲ್ಲ ಎಂಬುದು ಬಹುತೇಕರಿಗೆ ಗೊತ್ತೇ ಇಲ್ಲ.

ರಾಜ್ಯ ಸರ್ಕಾರ 2008-09ರಿಂದ 2010-11ರ ಮೂರು ವರ್ಷಗಳ ಅವಧಿಗೆ ಮೊದಲ ಹಂತದಲ್ಲಿ ರೂ 100 ಕೋಟಿಯನ್ನು ಪಾಲಿಕೆಗೆ ಅನುದಾನ ನೀಡಿತ್ತು. ಈಗ ಎರಡನೇ ಹಂತದಲ್ಲಿ 2011- 12ರಿಂದ 2013-14ರ ಅವಧಿಗೆ ಬಿಡುಗಡೆಯಾದ ಎರಡನೇ ಕಂತಿನ ಅನುದಾನದ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ.
 
ಆದರೆ, ಮೊದಲ ಕಂತಿನ ಕಾಮಗಾರಿಗಳಾದ ಉಣಕಲ್ ಕೆರೆ, ತೋಳನ ಕೆರೆಗಳ ಅಭಿವೃದ್ಧಿ, ವಿವಿಧೊದ್ದೇಶಿತ ಸಭಾಂಗಣ ಹಾಗೂ ಕನ್ನಡ ಭವನ ನಿರ್ಮಾಣದಂತಹ ಮಹತ್ವದ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ.

ಉಣಕಲ್ ಕೆರೆಯಲ್ಲಿ ಎರಡೂವರೆ ವರ್ಷಗಳ ಹಿಂದೆಯೇ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳ ಲಾಗಿದ್ದು, ಸದ್ಯ ಮುಕ್ತಾಯದ ಹಂತದಲ್ಲಿದೆ. ಡಿಸೆಂಬರ್ ವೇಳೆಗೆ ಸಾರ್ವಜನಿಕರ ಉಪಯೋಗಕ್ಕೆ ನವೀಕೃತ ಉಣಕಲ್ ಕೆರೆ ಸನ್ನದ್ಧವಾಗಲಿದೆ. ಒಟ್ಟಾರೆ ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಕೆರೆ ಹಾಗೂ ಅದರ ಉದ್ಯಾನದ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ.
 
ಮೂರು ಕಿ.ಮೀಗೂ ಅಧಿಕ ಉದ್ದದ ವಾಕಿಂಗ್ ಪಾತ್, ಹುಲ್ಲಿನ ಹಾಸು ನಿರ್ಮಾಣ ಸೇರಿದಂತೆ ಬಹು ತೇಕ ಕಾಮಗಾರಿಗಳು ಮುಗಿದಿದೆ. ಕೆರೆ ಸೌಂದರ್ಯ ವನ್ನು ಆಸ್ವಾದಿಸಲು ಎರಡು ಡೆಕ್ ಪೆವಿಲಿಯನ್‌ಗಳನ್ನು ನಿರ್ಮಿಸಲಾಗಿದೆ. ಬಟ್ಟೆ ಹಾಗೂ ದನಕರು ತೊಳೆಯಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ರಾಮಲಿಂಗೇಶ್ವರನಗರದ ತೋಳನಕೆರೆ ಅಭಿವೃದ್ಧಿ ಕಾರ್ಯವನ್ನು ಕಳೆದ ವರ್ಷವೇ ಆರಂಭಿಸಲಾಗಿದೆ. ಈ ಮಿನಿ ಪಕ್ಷಿಧಾಮಕ್ಕಾಗಿ ರೂ 2.5 ಕೋಟಿ ವೆಚ್ಚ ಮಾಡಲಾಗುತ್ತಿದ್ದು, ಸಾಕಷ್ಟು ಕೆಲಸಗಳು ಇನ್ನೂ ಬಾಕಿ ಉಳಿದಿವೆ. ಮುಂದಿನ ಮಳೆಗಾಲದ ಮುನ್ನ ಕೆಲಸ ಮುಗಿಯುವ ಯಾವುದೇ ಸಾಧ್ಯತೆ ಇಲ್ಲವಾ ಗಿದೆ. ಮಳೆಯಿಂದ ಉಣಕಲ್ ಮತ್ತು ತೋಳನ ಕೆರೆ ಅಭಿವೃದ್ಧಿ ಕೆಲಸಗಳು ಕುಂಠಿತಗೊಂಡವು ಎಂದು ಅಧಿಕಾರಿಗಳು ಹೇಳುತ್ತಾರೆ.

`ಕೆರೆಗಳ ಅಭಿವೃದ್ಧಿ ಇತರ ಕೆಲಸಗಳಂತೆ ಸುಲಭವಾ ದುದಲ್ಲ. ವರ್ಷದ ನಾಲ್ಕೈದು ತಿಂಗಳಲ್ಲಿ ಮಾತ್ರ ನಾವಿಲ್ಲಿ ಕಾಮಗಾರಿ ನಡೆಸಲು ಸಾಧ್ಯ. ಕೆರೆಗಳ ಏರಿ ಯನ್ನು ಬಲಪಡಿಸುವುದು, ಉದ್ಯಾನವನ್ನು ಅಭಿವೃ ದ್ಧಿಪಡಿಸಲು ಸಾಕಷ್ಟು ಕಾಲಾವಕಾಶ ಬೇಕಾಗುತ್ತದೆ~ ಎಂದು ಹೇಳುತ್ತಾರೆ ಜಿಲ್ಲಾಧಿಕಾರಿ ದರ್ಪಣ ಜೈನ್.

ಆದರ್ಶನಗರದ ಸಂತೆ ಮೈದಾನದಲ್ಲಿ ನಿರ್ಮಾಣ ವಾಗುತ್ತಿರುವ ಕನ್ನಡ ಭವನದ ಕಥೆಯೂ ಕೆರೆಗಳ ವ್ಯಥೆಗಿಂತ ಹೊರತೇನಲ್ಲ. ಮೊದಲು ಕಾರವಾರ ರಸ್ತೆ ಯಲ್ಲಿ ಈ ಕಟ್ಟಡವನ್ನು ನಿರ್ಮಿಸಲು ಉದ್ದೇಶಿ ಸಲಾಗಿತ್ತು. ಆಮೇಲೆ ಆದರ್ಶನಗರಕ್ಕೆ ಸ್ಥಳಾಂತರ ಮಾಡಲಾಯಿತು. ಆಮೇಲೆ ಕಟ್ಟಡ ನಿರ್ಮಾಣದ ಕೆಲಸ ತೆವಳುತ್ತಾ ಸಾಗಿತು.

`ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರೇ ಕಾರಣವಾಗಿದ್ದು, ಅವರಿಗೆ ನೋಟಿಸ್ ನೀಡಲಾಗಿದೆ. ಕಟ್ಟಡಕ್ಕೆ ರೂ 1.8 ಕೋಟಿ ಎತ್ತಿಡಲಾಗಿದ್ದು, ಇನ್ನು ಆರು ತಿಂಗಳಲ್ಲಿ ಕನ್ನಡ ಭವನ ಉಪಯೋಗಕ್ಕೆ ಸನ್ನದ್ಧವಾಗಲಿದೆ~ ಎಂದು ಜೈನ್ ವಿವರಿಸುತ್ತಾರೆ.

ಮೊದಲ ಕಂತಿನ ಅನುದಾನದಲ್ಲಿ ಕೈಗೊಂಡ ಮತ್ತೊಂದು ಮಹತ್ವದ ಯೋಜನೆ ವಿವಿಧೋದ್ದೇಶದ ಸಭಾಂಗಣ ನಿರ್ಮಾಣ. 5.5 ಕೋಟಿ ವೆಚ್ಚದ ಈ ಕಟ್ಟಡ ಈಗಷ್ಟೇ ನೆಲಬಿಟ್ಟು ಮೇಲೇಳುತ್ತಿದೆ. ಕಟ್ಟಡ ಬಳಕೆಗೆ ಸಿದ್ಧವಾಗಲು ಇನ್ನೂ ಎರಡು ವರ್ಷ ಬೇಕಾ ಗಬಹುದು ಎಂದು ಜಿಲ್ಲಾಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.