ADVERTISEMENT

ಇನ್ಮುಂದೆ ಎಟಿಎಂಗಳಲ್ಲಿ ದಿನದ 24 ಗಂಟೆ ಹಣ ಸಿಗಲ್ಲ!

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2017, 7:01 IST
Last Updated 13 ಅಕ್ಟೋಬರ್ 2017, 7:01 IST
ದೇಶಪಾಂಡೆನಗರದಲ್ಲಿರುವ ಎಟಿಎಂವೊಂದು ಬಂದ್‌ ಆಗಿರುವುದು
ದೇಶಪಾಂಡೆನಗರದಲ್ಲಿರುವ ಎಟಿಎಂವೊಂದು ಬಂದ್‌ ಆಗಿರುವುದು   

ಹುಬ್ಬಳ್ಳಿ: ಇನ್ಮುಂದೆ ಎಟಿಎಂ ಕೇಂದ್ರಗಳಲ್ಲಿ ದಿನದ 24 ಗಂಟೆ ಗ್ರಾಹಕರಿಗೆ ಹಣ ಸಿಗುವುದಿಲ್ಲ. ಕಾರಣ, ಭದ್ರತಾ ಸಿಬ್ಬಂದಿ ನಿಯೋಜಿಸದ ಎಟಿಎಂ ಕೇಂದ್ರಗಳನ್ನು ಕಡ್ಡಾಯವಾಗಿ ಮುಚ್ಚುವಂತೆ ಹುಬ್ಬಳ್ಳಿ–ಧಾರವಾಡ ಪೊಲೀಸರು ಬ್ಯಾಂಕ್‌ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದಾರೆ. ಹೀಗಾಗಿ, ತುರ್ತಾಗಿ ಹಣ ಬೇಕಿರುವ ಗ್ರಾಹಕರು ಎಟಿಎಂನಿಂದ ಹಣ ಡ್ರಾ ಮಾಡಲು ಪರದಾಡುವ ಪರಿಸ್ಥಿತಿ ಎದುರಾಗಲಿದೆ.

ದೇಶಪಾಂಡೆನಗರದ ರೋಟರಿ ಶಾಲೆ ಎದುರಿನ ಎಸ್‌ಬಿಐ ಬ್ಯಾಂಕಿಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಈಚೆಗೆ ₹ 20 ಲಕ್ಷ ನಗದು ಕಳವು ಪ್ರಕರಣ ನಡೆದ ಬೆನ್ನ ಹಿಂದೆಯೇ ಎಚ್ಚೆತ್ತ ಅವಳಿ ನಗರ ಪೊಲೀಸರು ಭದ್ರತಾ ಸಿಬ್ಬಂದಿ ಇರದ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸದ ಎಟಿಎಂ ಕೇಂದ್ರಗಳನ್ನು ಮುಚ್ಚುವ ಜೊತೆಗೆ ಸುರಕ್ಷತಾ ಕ್ರಮಗಳನ್ನು ಪಾಲಿಸಲು ಅ.30 ರವರೆಗೆ ಗಡುವು ನೀಡಿದ್ದಾರೆ.

ಅವಳಿ ನಗರದಲ್ಲಿ ರಾಷ್ಟ್ರೀಕೃತ ಮತ್ತು ಖಾಸಗಿ ಸೇರಿದಂತೆ ಒಟ್ಟು 47 ಬ್ಯಾಂಕುಗಳು, 351 ಶಾಖೆಗಳು ಹಾಗೂ 450 ಎಟಿಎಂ ಕೇಂದ್ರಗಳು ಇವೆ. ಈ ಪೈಕಿ 270 ಎಟಿಎಂ ಕೇಂದ್ರಗಳಿಗೆ ಭದ್ರತಾ ಸಿಬ್ಬಂದಿ ನಿಯೋಜಿಸಿಲ್ಲ ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹೀಗಾಗಿ, ಬ್ಯಾಂಕ್‌ ಅಧಿಕಾರಿಗಳೊಂದಿಗೆ ಸೆ. 30ರಂದು ಸಭೆ ನಡೆಸಿರುವ ಪೊಲೀಸ್‌ ಕಮಿಷನರ್‌ ‘ಸುರಕ್ಷತಾ ಕ್ರಮಗಳನ್ನು ಪಾಲಿಸದ ಎಟಿಎಂ ಕೇಂದ್ರಗಳನ್ನು ನ.1ರ ನಂತರ ಕಡ್ಡಾಯವಾಗಿ ಬಂದ್ ಮಾಡಿಸುತ್ತೇವೆ’ ಎಂಬ ಕಡಕ್‌ ಸಂದೇಶ ನೀಡಿದ್ದಾರೆ.

ADVERTISEMENT

ಬಹುತೇಕ ಎಟಿಎಂಗಳು ಬಂದ್‌: ಅವಳಿ ನಗರದ ಬಹುತೇಕ ಎಟಿಎಂ ಕೇಂದ್ರಗಳನ್ನು ಈಗಾಗಲೇ ಮುಚ್ಚಲಾಗಿದೆ. ಗ್ರಾಹಕರು ಹಣ ಡ್ರಾ ಮಾಡಲು ಹೋದರೆ ಎಟಿಎಂ ಕೇಂದ್ರಗಳು ಮುಚ್ಚಿರುತ್ತವೆ. ಇಲ್ಲ ‘ನೋ ಕ್ಯಾಷ್‌’ ಎಂಬ ನಾಮಫಲಕ ತೂಗು ಹಾಕಲಾಗಿರುತ್ತದೆ.

ಇದರಿಂದ ಸಕಾಲಕ್ಕೆ ಹಣ ಸಿಗದೆ ಗ್ರಾಹಕರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಹಣ ಡ್ರಾ ಮಾಡಲು ಬ್ಯಾಂಕುಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ. ಸಾಲು ಸಾಲು ಸರ್ಕಾರಿ ರಜೆಗಳು ಬಂದರಂತೂ ಗ್ರಾಹಕರ ಪರದಾಟ ಹೇಳತೀರದಾಗಿದೆ. ಅತ್ತ ಬ್ಯಾಂಕುಗಳು ಮುಚ್ಚಿರುತ್ತವೆ. ಇತ್ತ ಎಟಿಎಂ ಕೇಂದ್ರಗಳಲ್ಲೂ ಹಣ ಇರುವುದಿಲ್ಲ.

‘ಗ್ರಾಹಕರ ಅನುಕೂಲಕ್ಕಾಗಿ ಎಲ್ಲ ಬ್ಯಾಂಕುಗಳು ಎಟಿಎಂ ಸೇವೆ ನೀಡುತ್ತಿವೆ. ಇದಕ್ಕೆ ಬ್ಯಾಂಕುಗಳು ಸೇವಾ ಶುಲ್ಕ ಪಡೆಯುತ್ತಿಲ್ಲ. ಹಣಕಾಸಿನ ತೊಂದರೆ ಎದುರಿಸುತ್ತಿರುವ ಬ್ಯಾಂಕುಗಳು ಎಟಿಎಂ ಕೇಂದ್ರಗಳಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಲ್ಲ.

ಹೀಗಾಗಿ, ಬಹುತೇಕ ಎಟಿಎಂಗಳು ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ. ದಿನದ 24 ಗಂಟೆ ಭದ್ರತಾ ಸಿಬ್ಬಂದಿ ನಿಯೋಜಿಸಬೇಕು ಎಂದು ಪೊಲೀಸರು ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ಕುರಿತು ಶೀಘ್ರವೇ ಎಲ್ಲ ಬ್ಯಾಂಕುಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು’ ಎಂದು ಲೀಡ್‌ ಬ್ಯಾಂಕ್‌ ಮುಖ್ಯ ವ್ಯವಸ್ಥಾಪಕ ಕೆ. ಈಶ್ವರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.