ನವಲಗುಂದ: ಬೇಡಿದ ವರವನ್ನು ದಯಪಾಲಿಸುವ ಕಾಮಣ್ಣನೆಂದು ಖ್ಯಾತಿ ಪಡೆದಿರುವ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ.
ಸಂತಾನವಿಲ್ಲದ ದಂಪತಿಗೆ ಸಂತಾನ ಭಾಗ್ಯ ಕರುಣಿಸಲು ಬೆಳ್ಳಿಯ ತೊಟ್ಟಿಲು, ಕಂಕಣ ಭಾಗ್ಯಕ್ಕಾಗಿ ಬೆಳ್ಳಿಯ ಬಾಸಿಂಗ, ಅನಾರೋಗ್ಯ ನಿವಾರಣೆಗಾಗಿ ಬೆಳ್ಳಿ ಕುದುರೆ, ವಸತಿ ಇಲ್ಲದವರು ಛತ್ರಿ, ಚಾಮರ, ನಿರುದ್ಯೋಗ ನಿವಾರಣೆಗಾಗಿ ಬೆಳ್ಳೆ ಪಾದ, ಅನಾರೋಗ್ಯ ಪೀಡಿತ ಮಕ್ಕಳ ಆರೋಗ್ಯಕ್ಕಾಗಿ ಬೆಳ್ಳಿಯ ಕುದುರೆ ಅರ್ಪಿಸಿದರೆ ಇಷ್ಟಾರ್ಥ ಸಿದ್ದಿ ಕಲ್ಪಿಸುತ್ತಾನೆಂಬ ಪ್ರತೀತಿಯಿಂದಾಗಿ ಸಾವಿರಾರು ಭಕ್ತರು ಈ ಕಾಮನ ದರ್ಶನಕ್ಕೆ ಆಗಮಿಸುತ್ತಿದ್ದಾರೆ.
ಮಾ.12ರ ಏಕಾದಶಿಯಂದು ಕಾಮಣ್ಣ ಪ್ರತಿಷ್ಠಾಪನೆಗೊಂಡಿದ್ದು 17ರ ಸಾಯಂಕಾಲದ ವರೆಗೆ ದರ್ಶನ ಪಡೆದುಕೊಳ್ಳಬಹುದು. 17 ರಂದು ಓಕುಳಿ ಆಟ ಆಡಲಾಗುತ್ತದೆ. ಪಟ್ಟಣದಲ್ಲಿ ಒಟ್ಟು 14 ಕಾಮಣ್ಣನನ್ನು ಪ್ರತಿಷ್ಠಾಪಿಸಲಾಗಿದ್ದು, ಶಿಷ್ಟಾಚಾರದಂತೆಯೇ ಮಾ.17 ರಂದು ಮೆರವಣಿಗೆ ಮಾಡಿ ಕಾಮ ದಹನ ಮಾಡಲಾಗುತ್ತದೆ.
ಹೋಳಿ ಹುಣ್ಣಿಮೆಯ ದಿನ ದರ್ಶನಕ್ಕಾಗಿ ಸಾವಿರಾರು ಭಕ್ತರು ಆಗಮಿಸುವುದರಿಂದ ಕುಡಿಯುವ ನೀರು, ತಂಪು ಪಾನೀಯ ಸೌಕರ್ಯ ಮಾಡಲಾಗಿದೆ. ಸುಡು ಬಿಸಿಲು ಹೆಚ್ಚಾಗಿರುವುದರಿಂದ ಸರದಿ ಸಾಲಿನಲ್ಲಿ ನಿಂತುಕೊಳ್ಳುವ ಭಕ್ತರಿಗೆ ಪೆಂಡಾಲ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ವಾಹನಗಳ ದಟ್ಟಣೆ ತಡೆಗಟ್ಟಲು ಪೊಲೀಸರು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ವ್ಯವಸ್ಥಾಪಕರಾದ ಲಿಂಗರಾಜ ಶಿದ್ರಾಮಶೆಟ್ಟರ ಮೊ. 9448 221889 ಸಂಪರ್ಕಿಸಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.