ADVERTISEMENT

ಉಳವಿಗೆ ಬಸವಣ್ಣನಿಗೆ ಉಣಕಲ್ಲ ಹೆಬ್ಬಾಗಿಲು!

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2011, 8:10 IST
Last Updated 3 ಮಾರ್ಚ್ 2011, 8:10 IST

ಹುಬ್ಬಳ್ಳಿ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಉಳವಿಗೆ ಹುಬ್ಬಳ್ಳಿಯ ಉಣಕಲ್ಲ ಗ್ರಾಮ ಮಹಾದ್ವಾರವಂತೆ! ಹೌದು; ಉಣಕಲ್ಲ ಕೆರೆಯ ದಂಡೆಯ (ರಾಷ್ಟ್ರೀಯ ಹೆದ್ದಾರಿ 4ರ ಪಕ್ಕ) ಮೇಲಿರುವ ಉಳವಿ ಚನ್ನಬಸವೇಶ್ವರ ದೇವಸ್ಥಾನವೇ ಇದಕ್ಕೆ ಸಾಕ್ಷಿ.

ದೇವಾಲಯದ ಕಮಿಟಿಯ ಅಧ್ಯಕ್ಷ ರೇವಣೆಪ್ಪ ಸೋಮಲಿಂಗಪ್ಪ ಮುತ್ತೂರ ಅವರು ಹೇಳುವಂತೆ, ‘ಚನ್ನಬಸವಣ್ಣ ಉಳವಿಗೆ ಹೋಗುವ ಹಾದಿಯಲ್ಲಿ ಧಾರವಾಡದ ಉಳವಿ ಬಸವೇಶ್ವರನ ಮೂರ್ತಿಯನ್ನು ಸ್ಥಾಪಿಸಿದರು. ನಂತರ ಇಲ್ಲಿಗೂ ಬಂದು ತಂಗಿದ್ದರು. ಅವರ ಪೂಜೆಗಾಗಿ ಇಲ್ಲಿಯೂ ಶಿವನ ಆತ್ಮಲಿಂಗವನ್ನು ಪ್ರತಿಷ್ಠಾಪಿಸಿದರು. ಜೊತೆಗೆ ನಂದಿಯನ್ನೂ ಪ್ರತಿಷ್ಠಾಪನೆ ಮಾಡಿದರು’.

ಈ ಗುಡಿಯ ಮತ್ತೊಂದು ವೈಶಿಷ್ಟ್ಯವೆಂದರೆ ಇಲ್ಲಿ ಎರಡು ಶಿವಲಿಂಗಗಳು ಒಂದೇ ಗರ್ಭಗುಡಿಯಲ್ಲಿವೆ. ನಂದಿಯ ಮೂರ್ತಿಯೂ ಆತ್ಮಲಿಂಗದ ತೀರಾ ಸನಿಹದಲ್ಲಿಯೇ ಇದೆ. ಇನ್ನೊಂದು ನಂದಿಯು ಗುಡಿಯ ದ್ವಾರಬಾಗಿಲಲ್ಲಿದೆ. ಈ ಗುಡಿಯಲ್ಲಿರುವ ಇನ್ನೊಂದು ಶಿವಲಿಂಗದ ಪ್ರತಿಷ್ಠಾಪನೆಯ ಕುರಿತು ಯಾವುದೇ ಉಲ್ಲೇಖಗಳು ಲಭ್ಯವಿಲ್ಲ. ದಾನಿಗಳ ಸಹಾಯದಿಂದ ಗುಡಿಯನ್ನು ನವೀಕರಣ ಮಾಡಲಾಗಿದೆ. ಗುಡಿಯ ಆವರಣದಲ್ಲಿ ಗಣೇಶ ಮತ್ತು ನಾಗದೇವತೆಯ ಮೂರ್ತಿಗಳನ್ನೂ ಪ್ರತಿಷ್ಠಾಪಿಸಲಾಗಿದೆ. ಕೆರೆಯ ಅಂಗಳದ ಪ್ರಶಾಂತ ವಾತಾವರಣದಲ್ಲಿ ಈ ಗುಡಿಯಲ್ಲಿ ಈಗ ಶಿವರಾತ್ರಿ ಸಂಭ್ರಮ ಗರಿಗೆದರಿದೆ.

ಉಣಕಲ್ಲಿನಲ್ಲಿರುವ ಚಂದ್ರಮೌಳೀಶ್ವರ ದೇವಸ್ಥಾನವು ಅವಳಿನಗರದಲ್ಲಿರುವ ಅತ್ಯಂತ ಪುರಾತನ ದೇವಸ್ಥಾನವೆನ್ನುವ ಮುತ್ತೂರ ಅವರು, ‘ಚನ್ನಬಸವಣ್ಣನ ದೇವಸ್ಥಾನಕ್ಕೆ ಐದನೂರು ವರ್ಷಗಳಷ್ಟು ಹಳೆಯ ಇತಿಹಾಸವಿದೆ’ ಎನ್ನುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.