ADVERTISEMENT

ಎಸ್‌ಯುಸಿಐ(ಸಿ) ಅಭ್ಯರ್ಥಿಯಿಂದ ನಾಮಪತ್ರ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 6:35 IST
Last Updated 20 ಮಾರ್ಚ್ 2014, 6:35 IST

ಧಾರವಾಡ: ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಕಮ್ಯುನಿಸ್ಟ್ ಪಕ್ಷದ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಯುವ ಕಾರ್ಮಿಕ ಮುಖಂಡ, ಪಕ್ಷದ ಪೂರ್ಣಾವಧಿ ಕಾರ್ಯಕರ್ತ ಗಂಗಾಧರ ಬಡಿಗೇರ ಬುಧವಾರ ತಮ್ಮ ನಾಮಪತ್ರವನ್ನು ಚುನಾವಣಾಧಿಕಾರಿ ಸಮೀರ್ ಶುಕ್ಲಾ ಅವರಿಗೆ ಸಲ್ಲಿಸಿದರು.

ಮಧ್ಯಾಹ್ನ ನಾಮಪತ್ರ ಸಲ್ಲಿಸಿದ ಬಡಿಗೇರ ಅವರೊಂದಿಗೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ರಾಮಾಂಜನಪ್ಪ ಆಲ್ದಳ್ಳಿ, ಸಾಹಿತಿ ಮಹಾಂತೇಶ ನವಲಕಲ್, ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾದ ಎಚ್.ಜಿ.ದೇಸಾಯಿ, ಮಲ್ಲು ಹುಡೇದ ಇದ್ದರು.

ಇದಕ್ಕೂ ಮುನ್ನ ಪಕ್ಷದ ಕಚೇರಿ ಇರುವ ಸನ್ಮತಿ ರಸ್ತೆಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಸಲಾಯಿತು.
‘ಬಂಡವಾಳಗಾರರ ಪರ ಇರುವ ಪಕ್ಷಗಳನ್ನು ಸೋಲಿಸಿ, ನೈಜ ಹೋರಾಟಗಳಿಗಾಗಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಿ’ ಎಂಬ ಘೋಷಣೆಗಳನ್ನು ಹಾಕಲಾಯಿತು.

ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಮಾಂಜನಪ್ಪ ಆಲ್ದಳ್ಳಿ, ‘ಜನಗಳು ಎದುರಿಸುತ್ತಿರುವ ಸಮಸ್ಯೆಗಳೇ ನಮ್ಮ ಚುನಾವಣಾ ವಿಷಯಗಳು. ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ತಾವು ಅಧಿಕಾರಕ್ಕೆ ಬಂದರೆ ಅದನ್ನು ಮಾಡುತ್ತೇವೆ, ಇದನ್ನು ಮಾಡುತ್ತೇವೆ ಎಂದು ಜನರನ್ನು ಭ್ರಮೆಯನ್ನು ತೇಲಿಸುತ್ತಿವೆ. ಅಲ್ಲದೇ, ಬಿಜೆಪಿ, ಕಾಂಗ್ರೆಸ್‌, ಎಎಪಿ ಪಕ್ಷಗಳಷ್ಟೇ ಜನಗಳ ಸಮಸ್ಯೆ ನಿವಾರಿಸಿಬಲ್ಲವು ಎಂಬಂತೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ತಾವು ಬಂಡವಾಳಶಾಹಿಗಳ ವಿರುದ್ಧವಲ್ಲ ಎಂದು ಆಪ್‌ ಪಕ್ಷದ ಮುಖಂಡ ಅರವಿಂದ ಕೇಜ್ರಿವಾಲ್ ಹೇಳಿಕೆ ನೀಡುವ ಮೂಲಕ ತಾವು ಯಾರ ಪರ ಇದ್ದೇವೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ. ಹಾಗಾಗಿ ಜನತೆ ಈ ಎಲ್ಲ ಬಂಡವಾಳಶಾಹಿ ಪಕ್ಷಗಳನ್ನು ತಿರಸ್ಕರಿಸಬೇಕು’ ಎಂದರು.

‘ನಮ್ಮ ಪಕ್ಷದ ಅಭ್ಯರ್ಥಿ ಜನ ಹೋರಾಟದಿಂದಲೇ ಬಂದಿದ್ದಾರೆ. ಹಾಗಾಗಿ ಚುನಾವಣಾ ವೆಚ್ಚವನ್ನು ಮನೆ ಮನೆಗೆ ತೆರಳಿ ಸಾರ್ವಜನಿಕರಿಂದ ಸಂಗ್ರಹಿಸಲಿದ್ದೇವೆ’ ಎಂದು ಹೇಳಿದರು.

ಗಂಗಾಧರ ಬಡಿಗೇರ ಹೆಸರಲ್ಲಿ ಏನೂ ಇಲ್ಲ!
ಧಾರವಾಡ: ಜಮೀನು, ಮನೆ, ನಿವೇಶನ, ಕಾರು, ಷೇರು­ಗಳು, ಡಿಬೆಂಚರುಗಳು, ಜೀವವಿಮಾ ಪಾಲಿಸಿ­... ಊಹೂಂ ಇವಾವುವೂ ಎಸ್‌ಯುಸಿಐ ಕಮ್ಯು­­­ನಿಸ್ಟ್ ಪಕ್ಷದ ಅಭ್ಯರ್ಥಿ ಗಂಗಾಧರ ಬಡಿಗೇರ ಅವರ ಹೆಸರಿನಲ್ಲಿ ಇಲ್ಲ.

ಬುಧವಾರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮ­ಪತ್ರ­­ದೊಂದಿಗೆ ಸಲ್ಲಿಸಿದ ಆಸ್ತಿವಿವರದ ಇಡೀ ಅಫಿಡವಿಟ್‌ನ ತುಂಬ ‘ಇಲ್ಲ’ ಎಂಬ ಶಬ್ದಗಳೇ ತುಂಬಿ ಹೋಗಿವೆ. ಕೈಯಲ್ಲಿ ₨ 25 ಸಾವಿರ ನಗದು ಹೊಂದಿ­ದ್ದು, ಶಿವಾನಂದ ನಗರದ ಕರ್ಣಾಟಕ ಬ್ಯಾಂಕ್‌­­­ನ ತಮ್ಮ ಖಾತೆಯಲ್ಲಿ ₨ 35 ಸಾವಿರ ನಗದು ಇದೆ. ಇದನ್ನು ಹೊರತುಪಡಿಸಿ ಯಾವುದೇ ಆಸ್ತಿ  ಇಲ್ಲ ಎಂದು ಅಫಿಡವಿಟ್‌ನಲ್ಲಿ ಘೋಷಿಸಿ­ದ್ದಾರೆ.

ಕಳೆದ 13 ವರ್ಷಗಳಿಂದ ಪಕ್ಷದ ಸಕ್ರಿಯ ಕಾರ್ಯ­­­ಕರ್ತರಾಗಿರುವ ಗಂಗಾಧರ ತಮ್ಮ ಮನೆ­ಯಿಂದಲೂ ಯಾವುದೇ ಆಸ್ತಿ ಪಡೆದಿಲ್ಲ. ಪಕ್ಷದ ಜಿಲ್ಲಾ ಸಂಘಟನಾ ಸಮಿತಿ ಸದಸ್ಯರಾಗಿರುವ ಅವ­ರು, ಆಲ್‌ ಇಂಡಿಯಾ ಯುಟಿಯುಸಿ ಕಾರ್ಮಿಕ ಸಂಘ­ಟನೆಯ ಜಿಲ್ಲಾ ಸಂಘಟನಾಕಾ­ರರಾಗಿ, ಕರ್ನಾ­ಟಕ ಸಂಯುಕ್ತ ಆಶಾ ಕಾರ್ಯ­ಕರ್ತೆಯರ ಸಂಘ­ಟನೆಯ  ಜಿಲ್ಲಾ ಅಧ್ಯಕ್ಷ­ರಾಗಿ ಕೆಲಸ ಮಾಡು­ತ್ತಿ­ದ್ದಾರೆ. ಪತ್ನಿ ಎ.­ಭುವನೇಶ್ವರಿ  ಪಕ್ಷದ ಪೂರ್ಣಾ­ವಧಿ ಕಾರ್ಯಕರ್ತೆ­ಯಾಗಿದ್ದು ಮಹಿಳಾ ಸಂಘಟನೆ­ಯ  ಜಿಲ್ಲಾ ಘಟಕದ ಅಧ್ಯಕ್ಷೆಯಾಗಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.