ADVERTISEMENT

ಕರ್ತವ್ಯ ಲೋಪ: 16 ಶಿಕ್ಷಕರ ಅಮಾನತು

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 6:56 IST
Last Updated 19 ಜೂನ್ 2013, 6:56 IST

ಧಾರವಾಡ: ಕಳೆದ ಮೇ 30ರಿಂದ ಜೂನ್ 8ರವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳ ತಂಡ ವಿವಿಧ ಶಾಲೆಗಳಿಗೆ ಮಿಂಚಿನ ಸಂಚಾರ ನಡೆಸಿ, ಕರ್ತವ್ಯ ಲೋಪ ಎಸಗಿದ ಮೂರು ಜನ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಹಾಗೂ 13 ಪ್ರಾಥಮಿಕ ಶಾಲಾ ಸಹಶಿಕ್ಷಕರನ್ನು ಅಮಾನತುಗೊಳಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಆದೇಶಿಸಿದೆ.

9 ತಂಡಗಳಲ್ಲಿ ಒಟ್ಟು 40 ಅಧಿಕಾರಿಗಳು ಜಿಲ್ಲೆಯ 593 ಪ್ರಾಥಮಿಕ ಮತ್ತು 169 ಪ್ರೌಢಶಾಲೆಗಳಿಗೆ ಈ ಅವಧಿಯಲ್ಲಿ ಭೇಟಿ ನೀಡಿದ್ದರು. ಈ ಅವಧಿಯಲ್ಲಿ ಕರ್ತವ್ಯಲೋಪ ಎಸಗಿದ್ದನ್ನು ಪತ್ತೆಹಚ್ಚಿ ಅಮಾನತು ಶಿಕ್ಷೆ ವಿಧಿಸಲಾಗಿದೆ ಎಂದು ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್ ತಿಳಿಸಿದ್ದಾರೆ.

ಅಲ್ಲದೇ, 21 ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ಇಬ್ಬರು ಪ್ರೌಢಶಾಲಾ ಮುಖ್ಯ ಶಿಕ್ಷಕರಿಗೆ, 3 ಪ್ರೌಢ ಶಾಲಾ ಸಹ ಶಿಕ್ಷಕರಿಗೆ ಶಿಸ್ತುಕ್ರಮಕ್ಕೆ ಒಳಪಡಿಸಲು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲು ಸೂಚಿಸಿದೆ.

ಈ ಶಿಕ್ಷಕರು ಶೈಕ್ಷಣಿಕ  ವರ್ಷದ ಪ್ರಾರಂಭ ದಿನಗಳಲ್ಲಿಯೇ ಈ ರೀತಿ ಶಾಲೆಗೆ ಗೈರು ಉಳಿದು ಸೂಕ್ತ ಪೂರ್ವತಯಾರಿ ಮಾಡಿಕೊಳ್ಳದೇ ಕರ್ತವ್ಯ ಲೋಪ ಎಸಗಿದ್ದಾರೆ. ವಾರ್ಷಿಕ ಅಂದಾಜು ಪತ್ರಿಕೆ ಬರೆಯದೇ, ಪಾಠದ ಟಿಪ್ಪಣಿ ತಯಾರಿಸಿಕೊಳ್ಳದಿರುವುದು ಪತ್ತೆಯಾಗಿದೆ. ಈ ರೀತಿ ಕರ್ತವ್ಯ ಲೋಪ ಎಸಗಿದ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಗುಣಾತ್ಮಕ ಶಿಕ್ಷಣ ಸಾಧನೆಗೆ ನಿರ್ಲಕ್ಷ್ಯ ತೋರಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮ ಕೈಗೊಂಡಿದೆ. ಇತ್ತೀಚೆಗೆ ಜನಪ್ರತಿನಿಧಿಗಳು,ಉನ್ನತ ಅಧಿಕಾರಿಗಳು ಜಿಲ್ಲೆಯ ಶಿಕ್ಷಣದ ಗುಣಮಟ್ಟ ಕುಸಿತವಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಸಂದರ್ಭಗಳೂ ಇವೆ. ಇದನ್ನು ಇಲಾಖೆಯ ಗಂಭೀರವಾಗಿ ಪರಿಗಣಿಸಿದೆ ಎಂದು ಡಾ.ವರ್ಧನ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.