ADVERTISEMENT

ಕಲೆ ಜೀವನದ ಪ್ರಮುಖ ಅಂಶ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 10:15 IST
Last Updated 12 ಮಾರ್ಚ್ 2012, 10:15 IST

ಧಾರವಾಡ: “ಕಲೆಯು ಜೀವನದ ಪ್ರಮುಖ ಅಂಶವಾಗಿದ್ದು, ಸಾರ್ವಜನಿಕವಾಗಿಯೂ ಕಲೆಯು ಅನಾವರಣಗೊಳ್ಳಲಿ” ಎಂದು ಜಿಲ್ಲಾಧಿಕಾರಿ ದರ್ಪಣ ಜೈನ್ ಹೇಳಿದರು.

ಇಲ್ಲಿನ ಜೆಎಸ್‌ಎಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್‌ನಲ್ಲಿ ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ (ಕಾವಾ) ಸಹಯೋಗದಲ್ಲಿ ಆಯೋಜಿಸಿರುವ ರಾಷ್ಟ್ರೀಯ ಶಿಲ್ಪಕಲಾ ಶಿಬಿರವನ್ನು ಶಿಲ್ಪ ಕೆತ್ತುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಯುವ ಕಲಾವಿದರಿಗೆ ಇಂದು ಸಾಕಷ್ಟು ಪ್ರೋತ್ಸಾಹಕರ ವಾತಾವರಣವಿದ್ದು, ಅದರ ಪ್ರಯೋಜನವನ್ನು ಯುವಜನತೆ ಪಡೆದುಕೊಳ್ಳಬೇಕು ಎಂದರು. 

ಕರ್ನಾಟಕ ವಿಶ್ವವಿದ್ಯಾಲಯದ ಪ್ರಾಚೀನ ಭಾರತ ಇತಿಹಾಸ ಮತ್ತು ಶಾಶನಶಾಸ್ತ್ರ ವಿಭಾಗದ ಅಧ್ಯಕ್ಷ ಡಾ. ಎಸ್.ವಿ.ಪಾಡಿಗಾರ ಮಾತನಾಡಿ, ಭಾರತೀಯ ನೆಲೆಯಲ್ಲಿ ಆಧುನಿಕತೆಯನ್ನು ಸ್ವೀಕರಿಸುವ ಮನೋಭಾವವನ್ನು ಹೊಂದಿದವರು ಬಹಳ ಕಡಿಮೆ. ಸರ್ಕಾರವು ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಕಲೆಯ ಕುರಿತಂತೆ ಶಿಕ್ಷಣವನ್ನು ನೀಡಬೇಕು ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಕಲಾವಿದ ಆರ್ಯ ಆಚಾರ್ಯ ಅವರನ್ನು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು ವತಿಯಿಂದ ಜಿಲ್ಲಾಧಿಕಾರಿ ದರ್ಪಣ ಜೈನ್ ಸನ್ಮಾನಿಸಿದರು. ಡಾ. ಎಸ್.ವಿ.ಪಾಡಿಗಾರ ಅವರನ್ನು ಜೆಎಸ್‌ಎಸ್ ಹಾಲಭಾವಿ ಸ್ಕೂಲ್ ಆಫ್ ಆರ್ಟ್ ಸಂಸ್ಥೆಯ ಆಡಳಿತಾಧಿಕಾರಿ ಸನ್ಮಾನಿಸಿದರು.

ಆರ್ಯ ಆಚಾರ್ಯ ಸನ್ಮಾನ ಸ್ವೀಕರಿಸಿ, ರಾಷ್ಟ್ರೀಯ ಶಿಲ್ಪಕಲೆಯ ಐತಿಹಾಸಿಕತೆಯನ್ನು ವಿವರಿಸಿ, ರಾಷ್ಟ್ರೀಯ ಶಿಲ್ಪಕಲಾ ಶಿಬಿರವು ಯಶಸ್ವಿಯಾಗಲೆಂದು ಹಾರೈಸಿದರು.ಮೈಸೂರು ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನ ಡೀನ್ ವಿ.ಎ.ದೇಶಪಾಂಡೆ ಅಧ್ಯಕ್ಷತೆ ವಹಿಸಿ, ನಗರದ ಸೌಂದರ್ಯದ ಅಭಿವೃದ್ಧಿ ಕುರಿತು ಕಲಾವಿದರ ಸಹಕಾರ ಸದಾ ಲಭ್ಯವಿದ್ದು, ಜಿಲ್ಲಾಧಿಕಾರಿಗಳು ಹಿಂದಿನಂತೆ ಪ್ರೋತ್ಸಾಹವನ್ನು ನೀಡಬೇಕು ಎಂದರು.

ಹಾಲಭಾವಿ ಸ್ಕೂಲ್ ಆಫ್ ಆರ್ಟ್ ನಿವೃತ್ತ ಪ್ರಾಚಾರ್ಯ ಸುರೇಶ ಹಾಲಭಾವಿ, ಜೆಎಸ್‌ಎಸ್ ಪಬ್ಲಿಕ್ ಸ್ಕೂಲ್‌ನ ಪ್ರಾಚಾರ್ಯೆ ಪ್ರತಿಭಾ ಜನಮಟ್ಟಿ, ಮಧು ದೇಸಾಯಿ, ಕಾವಾದ ಸಿಬ್ಬಂದಿ, ರಾಷ್ಟ್ರೀಯ ಶಿಲ್ಪಕಲಾ ಶಿಬಿರಾರ್ಥಿಗಳು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಗಾಯತ್ರಿ ಗೌಡರ ಸ್ವಾಗತಿಸಿದರು. ಬಿ.ಎಂ.ಪಾಟೀಲ ಪರಿಚಯಿಸಿದರು. ರೇಣುಕಾ ಮಾರ್ಕಂಡೆ ನಿರೂಪಿಸಿದರು. ಸಿ.ಜಿ.ಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.