ADVERTISEMENT

ಕಸಾಯಿಖಾನೆ ನಿರ್ವಹಣೆ: ಮಿತ್ತಲ್‌ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2013, 4:27 IST
Last Updated 18 ಡಿಸೆಂಬರ್ 2013, 4:27 IST

ಧಾರವಾಡ: ನಗರದ ಮಣಕಿಲ್ಲಾ ಬಳಿಯ ಕಸಾಯಿಖಾನೆಗೆ ಮಂಗಳವಾರ ಬೆಳಿಗ್ಗೆ ದಿಢೀರ್‌ ಭೇಟಿ ನೀಡಿದ ಗೋವಾ ಸೇವಾ ಆಯೋಗದ ಸದಸ್ಯ ಡಾ.ಎಸ್‌.ಕೆ.ಮಿತ್ತಲ್‌ ಕಸಾಯಿಖಾನೆ ನಿರ್ವಹಣೆ ಬಗ್ಗೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

‘ರಾಜ್ಯದಾದ್ಯಂತ ನಾನು ಹಲವು ಕಸಾಯಿಖಾನೆಗಳಿಗೆ ಭೇಟಿ ನೀಡಿದ್ದೇನೆ. ಆದರೆ, ಎಲ್ಲಿಯೂ ಹಲವು ದನಗಳನ್ನು ಮುಂಚೆಯೇ ಕೂಡಿ ಹಾಕುವುದನ್ನು ನೋಡಿಲ್ಲ. ಅಲ್ಲದೇ, ದನಗಳು ರೋಗಮುಕ್ತವಾಗಿವೆ ಎಂದು ಪಶು­ವೈದ್ಯರು ನೀಡಿದ ಪ್ರಮಾಣಪತ್ರವನ್ನೂ ಕಸಾಯಿ­ಖಾನೆಗಳವರು ತೋರಿಸಲಿಲ್ಲ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹುಬ್ಬಳ್ಳಿ–ಧಾರವಾಡ ಪೊಲೀಸ್‌ ಕಮಿಷನರ್‌ ಹಾಗೂ ಮಹಾನಗರ ಪಾಲಿಕೆಯ ಆಯುಕ್ತರ ಗಮನಕ್ಕೆ ತರುತ್ತೇನೆ’ ಎಂದು ಹೇಳಿದರು.

ಕಸಾಯಿಖಾನೆಯಲ್ಲಿರುವ ಸಿಬ್ಬಂದಿಯೊಂದಿಗೆ ಚರ್ಚೆ ನಡೆಸಿದ ಅವರು, ಪ್ರತಿಯೊಂದು ದನ­ವನ್ನು ವಧೆ ಮಾಡುವಾಗಲೂ ನಿಗದಿತ ಪ್ರಮಾಣ­ಪತ್ರ ಪಡೆಯುತ್ತೀರೋ ಇಲ್ಲವೋ ಎಂದರು.

ಒಬ್ಬರು ಹೌದು. ದನದ ಡಾಕ್ಟರ್‌ ಬಂದು ಸೀಲ್‌ ಹಾಕುತ್ತಾರೆ ಎಂದರೆ, ಮತ್ತೊಬ್ಬರು ಡಾಕ್ಟರ್‌ ಬಂದು ಎರಡು ತಿಂಗಳಾಯಿತು ಎಂದರು.

ಇದರಿಂದ ಗೊಂದಲಕ್ಕೆ ಒಳಗಾದ ಮಿತ್ತಲ್‌, ‘ಯಾರು ಹೇಳುವುದು ಸರಿ’ ಎಂದು ಪಾಲಿಕೆ ಹಾಗೂ ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಪ್ರಶ್ನಿಸಿದರು.

ದನಗಳ ಆರೋಗ್ಯ ತಪಾಸಣೆ ಮಾಡದ ಪಶು ವೈದ್ಯ ಡಾ.ಎಸ್‌.ಎಸ್‌.ಬೆಣ್ಣೂರ ಅವರನ್ನು ಒಂದು ಹಂತದಲ್ಲಿ ತೀವ್ರ ತರಾಟೆಗೆ ತೆಗೆದು­ಕೊಂಡ ಮಿತ್ತಲ್‌, ನಿಮ್ಮ ಅಮಾನತಿಗೆ ಶಿಫಾ­ರಸು ಮಾಡಬೇಕಾಗುತ್ತದೆ. ನಿಯಮಿತ­ವಾಗಿ ಬಂದು ಇಲ್ಲಿನ ದನಗಳ ಆರೋಗ್ಯ ಪರೀಕ್ಷಿಸ­ಬೇಕು. ಇಲ್ಲದಿದ್ದರೆ ರೋಗವಿರುವ ದನ ಜನಗಳ ಆಹಾರವಾಗುತ್ತದೆ. ಅದರಿಂದಾಗಿ ಅವರೂ ಅನಾರೋಗ್ಯಕ್ಕೀಡಾಗುತ್ತಾರೆ’ ಎಂದು ಎಚ್ಚರಿಸಿದರು.

ಸರ್ಕಾರಿ ವೈದ್ಯರು ಲಭ್ಯವಿಲ್ಲದಿದ್ದಾಗ ಖಾಸಗಿ ವೈದ್ಯರಿಂದ ದನಗಳು ಆರೋಗ್ಯದಿಂದ ಇರುವ ಬಗ್ಗೆ ಪ್ರಮಾಣಪತ್ರ ಪಡೆಯಲೇಬೇಕು ಎಂದು ಕಸಾಯಿಖಾನೆ ಮಾಲೀಕರಿಗೆ ತಾಕೀತು ಮಾಡಿದರು.

ರಾಜ್ಯದಲ್ಲಿ ಶಿವಮೊಗ್ಗ ಹಾಗೂ ಹುಬ್ಬಳ್ಳಿ-–ಧಾರವಾಡ ಅವಳಿ ನಗರಕ್ಕೆ ಯಾಂತ್ರೀಕೃತ ಕಸಾಯಿಖಾನೆ ಮಂಜೂರಾಗಿದ್ದು, ಒಮ್ಮೆ ಸ್ಥಾಪನೆಯಾದರೆ, ಕಸಾಯಿ ಖಾನೆಯ ಬಹುಮಟ್ಟಿನ ಸಮಸ್ಯೆಗಳು ಬಗೆ ಹರಿಯುತ್ತವೆ. ಆದರೆ ಕಸಾಯಿ ಖಾನೆಗೆ ಅಕ್ರಮವಾಗಿ ಗೋವು, ಹಾಲು ಹಿಂಡುವ ಎಮ್ಮೆ, ಕರುಗಳನ್ನು ತರುವುದು ಕಾನೂನು ಪ್ರಕಾರ ನಿಷಿದ್ಧವಾಗಿದ್ದು, ಪೊಲೀಸರು ಈ ಅಕ್ರಮ ಸಾಗಣೆ ತಡೆಗಟ್ಟಬೇಕು ಎಂದು ಸೂಚಿಸಿದರು.

ಪಶುಸಂಗೋಪನಾ ಇಲಾಖೆಯ ಉಪ­ನಿರ್ದೇಶಕ ಡಾ.ತಿಪ್ಪೇಸ್ವಾಮಿ ತಿಳಿಸಿದರು. ಬೆಂಗಳೂರಿನ ಸರ್ಕಾರೇತರ ಸಂಸ್ಥೆ
ಗೋಗ್ಯಾನ್ ಫೌಂಡೇಶನ್‌ನ ಜೋಶೈನ್ ಆಂಟೋನಿ, ಪಶುವೈದ್ಯ ಆಸ್ಪತ್ರೆಯ
ಸಹಾಯಕ ನಿರ್ದೆೇಶಕ ಡಾ.ಎಂ.ಎಲ್.ಬಾಡಗೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.