ADVERTISEMENT

ಕಾರಿನ ಶೆಡ್ ತೊರೆದ ರಂಗಕಲಾವಿದೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 6:53 IST
Last Updated 15 ಡಿಸೆಂಬರ್ 2012, 6:53 IST

ಹುಬ್ಬಳ್ಳಿ: ಕಳೆದ ಐದು ವರ್ಷಗಳಿಂದ ಹಳೆಬಾದಾಮಿನಗರದ ಮೊದಲ ಕ್ರಾಸಿನ ಮನೆಯೊಂದರ ಕಾರಿನ ಶೆಡ್‌ನಲ್ಲಿ ವಾಸವಿದ್ದ ರಂಗ ಕಲಾವಿದೆ ಶಕುಂತಮ್ಮ ಜವಳಿಮಠ ಅವರು ಶುಕ್ರವಾರ ನಾಗಶೆಟ್ಟಿಕೊಪ್ಪದಲ್ಲಿಯ ಬಾಡಿಗೆ ಮನೆ ಯೊಂದಕ್ಕೆ ಸ್ಥಳಾಂತರ ಗೊಂಡಿದ್ದಾರೆ.

ಶಕುಂತಲಮ್ಮ ವಾಸಿಸುತ್ತಿದ್ದ ಕಾರಿನ ಶೆಡ್‌ನ ಮನೆ ಸುರೇಶ್‌ಕುಮಾರ್ ಅವರಿಗೆ ಸೇರಿದ್ದು ಆ ಮನೆಯನ್ನು  ಅವರು 6-7 ತಿಂಗಳು ಹಿಂದೆ ಕೊಂಡರು. ಕಾರಿನ ಶೆಡ್ಡನ್ನು ಇದೇ 15ಕ್ಕೆ ತೆರವುಗೊಳಿಸಬೇಕೆಂದು ಮನೆಯ ಮಾಲೀಕರು ಗಡುವು ನೀಡಿದ ಪರಿಣಾಮ ಶಕುಂತಲಾ ಅವರು ಕಂಗಾ ಲಾಗಿದ್ದರು. ವಿಷಯವನ್ನು ಅರಿತ ಅವರ ಪುತ್ರಿಯರಾದ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ವಾಸಿಸುವ ಸರ್ವ ಮಂಗಳಾ ಹಾಗೂ ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ವಾಸಿಸುವ ಅನ್ನಪೂರ್ಣ ನಗರಕ್ಕೆ ಬಂದು ಗುರುವಾರದಿಂದಲೇ ಬಾಡಿಗೆ ಮನೆಗಾಗಿ ಹುಡುಕಾಡಿದರು. ಕೊನೆಗೂ ನಾಗಶೆಟ್ಟಿಕೊಪ್ಪದ ಮಹಿಳಾ ಸಮಾಜದ ಹತ್ತಿರ 1500 ರೂಪಾಯಿ ಬಾಡಿಗೆ ಮನೆಯನ್ನು ಹುಡುಕಿದರು.

ಬುದ್ಧಿಮಾಂದ್ಯ ಪುತ್ರ ಪ್ರಕಾಶನೊಟ್ಟಿಗೆ ಕಾರಿನ ಶೆಡ್‌ನಲ್ಲಿರುತ್ತಿದ್ದ ಶಕುಂತಲಮ್ಮ ಅವರಿಗೆ ರಂಗ ಕಲಾವಿದೆಯೆಂದು ರಾಜ್ಯ ಸರ್ಕಾರದ ಒಂದು ಸಾವಿರ ರೂಪಾಯಿ ಮಾಸಾಶನ ಸಿಗುತ್ತಿದೆ. ಇದುವರೆಗೆ  ವಿದ್ಯುತ್ ಬಿಲ್ಲು ಹಾಗೂ ನೀರಿನ ಕರವಿಲ್ಲದೆ ಜೊತೆಗೆ ಬಾಡಿಗೆಯನ್ನು ಕೊಡದೆ ವಾಸಿಸುತ್ತಿದ್ದರು. ಇನ್ನು ಮುಂದೆ 1500 ರೂಪಾಯಿ ಬಾಡಿಗೆ ಹೊಂದಿಸುವ ಕಷ್ಟಕ್ಕೆ ಅವರ ಮೊಮ್ಮಗಳು ಜ್ಯೋತಿ ನೆರವಿಗೆ ಬಂದಿದ್ದಾರೆ. ಬಿಸಿಎ ಓದಿ ಬೆಂಗಳೂರಿನಲ್ಲಿ ಐ.ಟಿ. ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ಅವರು ಅಜ್ಜಿಗೆ ಪ್ರತಿ ತಿಂಗಳು ಧನಸಹಾಯ ನೀಡಲಿದ್ದಾರೆ. ಪತಿ ಬಸವರಾಜ ಜವಳಿಮಠ ಐದು ವರ್ಷಗಳ ಹಿಂದೆ ತೀರಿಕೊಂಡ ನಂತರ ಬಾಡಿಗೆ ಮನೆಗೆ ಹೋಗಲಾಗದೆ ಕಾರಿನ ಶೆಡ್‌ನಲ್ಲಿ ವಾಸಿಸುತ್ತಿದ್ದ ಶಕುಂತಲಮ್ಮ 13 ವರ್ಷದವರಿದ್ದಾಗ ರಂಗಭೂಮಿ ಪ್ರವೇಶಿಸಿದರು. ಗೋಕಾಕ ನಾಟಕ ಕಂಪನಿಯಲ್ದ್ದ್‌ದರು. ನಂತರ ಸಿಂಧನೂರಿನ ಮುರಡಯ್ಯ ಅವರ ಕಂಪನಿಯ ನಾಟಕಕ್ಕೆ ಬಣ್ಣ ಹಚ್ಚಿದರು.  ಬಸವರಾಜ ಅವರನ್ನು ಮದುವೆಯಾದ ನಂತರ ಮೃತ್ಯುಂಜಯ ನಾಟ್ಯ ಸಂಘ ಕಟ್ಟಿದರು. ಒಂದು ವರ್ಷವಷ್ಟೇ ಕಂಪನಿ ನಡೆಸಿದರು. ನಷ್ಟ ಅನುಭವಿಸಿದ ಪರಿಣಾಮ ಬಂದ್ ಮಾಡಿದರು. ಪುಂಡಲೀಕಪ್ಪ ಧುತ್ತರಗಿ ಅವರೊಂದಿಗೆ ಪಾಲುದಾರಿಕೆ ಯಲ್ಲಿ ಎರಡು ವರ್ಷ ಕಂಪನಿ ನಡೆಸಿ ಮುಚ್ಚಿದರು.

ಮುಖ್ಯಮಂತ್ರಿಗೆ ಮನವಿ: ಕೇಂದ್ರ ಸರ್ಕಾರದ ನಾಲ್ಕು ಸಾವಿರ ರೂಪಾಯಿ ಮಾಸಾಶನ ಕೊಡಿಸಬೇಕು ಎಂದು  70 ವರ್ಷ ವಯಸ್ಸಿನ ಶಕುಂತಲಮ್ಮ ಅವರು ಎರಡು ತಿಂಗಳ ಹಿಂದೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.