ADVERTISEMENT

ಕಿಮ್ಸನಲ್ಲಿ ಈಗ `ವಯೋ ಸಮರ'

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 5:56 IST
Last Updated 18 ಜುಲೈ 2013, 5:56 IST

ಹುಬ್ಬಳ್ಳಿ: ಸಚಿವ ಸಂತೋಷ್ ಲಾಡ್ ಅವರ ಮಾತಿನ ದಾಳಿ ಮತ್ತು ಶಾಸಕ ವಿನಯ ಕುಲಕರ್ಣಿ ಅವರು ವೈದ್ಯರ ಮೇಲೆ ಹಲ್ಲೆ ಮಾಡಿದ ಪ್ರಸಂಗದ ನಂತರ ತಣ್ಣಗಾಗಿದ್ದ ನಗರದ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ) ಈಗ ಮತ್ತೆ ಸುದ್ದಿಯಲ್ಲಿದೆ.

ಕಳೆ ತಿಂಗಳ 15ರಂದು ಕಿಮ್ಸಗೆ ದಿಢೀರ್ ಭೇಟಿ ನೀಡಿದ್ದ ಸಂತೋಷ್ ಲಾಡ್ ಕ್ಷುಲ್ಲಕ ಕಾರಣಕ್ಕೆ ನಿರ್ದೇಶಕರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದರಿಂದ ಬೇಸರಗೊಂಡ ನಿರ್ದೇಶಕಿ ಡಾ. ವಸಂತಾ ಕಾಮತ್ ರಾಜೀನಾಮೆಗೆ ಮುಂದಾಗಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ರಾಜೀನಾಮೆ ನಿರ್ಧಾರವನ್ನು ವಾಪಸ್ ತೆಗೆದುಕೊಂಡಿದ್ದರು.

ಇದಾಗಿ ಎರಡು ವಾರಗಳ ನಂತರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ ನಿರ್ದೇಶಕರು ತಮಗೂ ಸಚಿವರಿಗೂ ಯಾವುದೇ ರೀತಿಯ ಮನಸ್ತಾಪ ಇಲ್ಲವೆಂದೂ ತಾವು ಕಿಮ್ಸನಲ್ಲಿಯೇ ಮುಂದುವರಿಯುವುದಾಗಿಯೂ ಹೇಳಿದ್ದರು.

ಈ ಪ್ರಸಂಗದ ನಂತರ ನಿರ್ದೇಶಕರ ಮೇಲೆ ಕಣ್ಣಿಟ್ಟಿದ್ದ ಸರ್ಕಾರ ಈಗ ವಯಸ್ಸಿನ ವಿಷಯವನ್ನು ಮುಂದಿಟ್ಟು ಅವರನ್ನು ಹುದ್ದೆಯಿಂದ ತೆಗೆದು ಹಾಕಲು ಮುಂದಾಗಿದೆ ಎಂದು ಹೇಳಲಾಗಿದೆ.

ಉನ್ನತ ಮೂಲಗಳ ಪ್ರಕಾರ 60 ವರ್ಷ ದಾಟಿದ್ದರಿಂದ ಡಾ. ವಸಂತಾ ಕಾಮತ್ ಅವರು ಹುದ್ದೆ ತೊರೆಯಬೇಕೆಂದು ಸರ್ಕಾರ ಸೂಚಿಸಿದೆ ಎನ್ನಲಾಗಿದೆ.

ಬುಧವಾರ ಬೆಳಿಗ್ಗೆ ಅವರಿಗೆ ಈ ಸೂಚನೆ ಬಂದಿದ್ದು ಇದಕ್ಕೆ ಸಂಬಂಧಪಟ್ಟ ಆದೇಶವನ್ನು ಫ್ಯಾಕ್ಸ್ ಮೂಲಕ ಕಳುಹಿಸಿಕೊಡಲಾಗುವುದು ಎಂದು ತಿಳಿಸಲಾಗಿತ್ತು. ಈ ಕಾರಣದಿಂದ ಸಂಜೆಯ ವರೆಗೂ ನಿರ್ದೇಶಕರು ಫ್ಯಾಕ್ಸ್ ಸಂದೇಶಕ್ಕಾಗಿ ಕಾದಿದ್ದರು. ಗುರುವಾರ ಸಂದೇಶ ಬರುವ ಎಲ್ಲ ಸಾಧ್ಯತೆಗಳೂ ಇವೆ ಎಂದು ಹೇಳಲಾಗಿದೆ.

ನಿರ್ದೇಶಕರ ಆಕ್ರೋಶ?: ಇದೇ ವೇಳೆ ಸರ್ಕಾರದ ನಿರ್ಧಾರದಿಂದ ವಸಂತಾ ಕಾಮತ್ ತೀವ್ರ ಬೇಸತ್ತಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ನಾಲ್ಕು ಸ್ವಾಯತ್ತ ಸಂಸ್ಥೆಗಳಲ್ಲಿ 60 ವರ್ಷ ದಾಟಿದವರು ಇದ್ದಾರೆ. ಅವರನ್ನು ಉಳಿಸಿಕೊಂಡು ತಮ್ಮನ್ನು ಮಾತ್ರ ಹೊರಗಟ್ಟುವುದರ ಹಿಂದೆ ರಾಜಕೀಯ ಪಿತೂರಿ ಇದೆ ಎಂದು ಅವರು ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ.

ಬೆಂಗಳೂರಿನ ನೆಫ್ರೋ ಯೂರಾಲಜಿ ಇನ್‌ಸ್ಟಿಟ್ಯೂಷನ್, ರಾಜೀವ ಗಾಂಧಿ ಹೃದ್ರೋಗ ಸಂಸ್ಥೆ, ಕರ್ನಾಟಕ ಇನ್‌ಸ್ಟಿಟ್ಯೂಷನ್, ಆಫ್ ಡಯಾಬಿಟಾಲಜಿ ಮತ್ತು ಸಂಜಯ ಗಾಂಧಿ ಟ್ರಾಮಾ ಕೇಂದ್ರ ಮುಂತಾದ ಕಡೆಗಳಲ್ಲೂ ವಯಸ್ಸಿಗೆ ಸಂಬಂಧಪಟ್ಟ ನಿಯಮವನ್ನು ಅನ್ವಯಿಸಬೇಕು. ಅದು ಬಿಟ್ಟು ಕಿಮ್ಸನಲ್ಲಿ ಮಾತ್ರ ಇದನ್ನು ಜಾರಿಗೆ ತರುವುದು ದುರುದ್ದೇಶದಿಂದ ಕೂಡಿದ ನಿರ್ಧಾರ ಎಂದು ಅವರು ಹೇಳಿಕೊಂಡಿದ್ದಾರೆ ಎನ್ನಲಾಗಿದೆ.

ಫ್ಯಾಕ್ಸ್ ಬಂದ ಕೂಡಲೇ ರಾಜೀನಾಮೆ ಕೊಟ್ಟು ತೆರಳುವುದಾಗಿ ಅವರು ಆಪ್ತರೊಂದಿಗೆ ಹೇಳಿಕೊಂಡಿದ್ದಾರೆ. ತಮ್ಮ ಯೋಜನೆಗಳು ಅನುಷ್ಠಾನಗೊಳ್ಳುವುದು ತಡವಾಗಲಿದೆ ಎಂಬ ಬೇಸರವನ್ನೂ ಅವರು ವ್ಯಕ್ತಪಡಿಸಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.