ADVERTISEMENT

ಕಿಮ್ಸ್‌ನಲ್ಲಿ ಬರಲಿದೆ ಓ.ಟಿ. ಸಂಕೀರ್ಣ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 9:35 IST
Last Updated 25 ಫೆಬ್ರುವರಿ 2011, 9:35 IST

ವಿಶೇಷ ವರದಿ
ಹುಬ್ಬಳ್ಳಿ:
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ಮಂಡಿಸಿದ ರಾಜ್ಯ ಬಜೆಟ್‌ನಲ್ಲಿ ನಗರದ ಕರ್ನಾಟಕ ವೈದ್ಯಕೀಯ ಸಂಸ್ಥೆ (ಕಿಮ್ಸ್) ರೂ. 25 ಕೋಟಿಗಳ ಬಂಪರ್ ಅನುದಾನ ಪಡೆದಿದೆ. ನೆನೆಗುದಿಗೆ ಬಿದ್ದಿದ್ದ ಸಂಸ್ಥೆಯ ಹಲವು ಯೋಜನೆಗಳನ್ನು ಶೀಘ್ರ ಅನುಷ್ಠಾನಕ್ಕೆ ತರಲು ಇದದಿಂದ ಸಾಧ್ಯವಾಗಲಿದೆ ಎಂದು ಈ ಭಾಗದ ವೈದ್ಯಕೀಯ ವಲಯ ಸಂತಸ ವ್ಯಕ್ತಪಡಿಸಿದೆ.

ಒಂದೇ ಸಲಕ್ಕೆ ರೂ. 25 ಕೋಟಿಗಳಷ್ಟು ಅನುದಾನ ಸಿಕ್ಕಿದ್ದಕ್ಕೆ ಕಿಮ್ಸ್‌ನಲ್ಲಿ ಹರ್ಷದ ವಾತಾವರಣ ಎದ್ದು ಕಾಣುತ್ತಿದೆ. ಸ್ವತಃ ಕಿಮ್ಸ್ ನಿರ್ದೇಶಕ ಡಾ.ಬಿ.ಎಸ್. ಮದಕಟ್ಟಿ ಕೂಡ ಬಜೆಟ್‌ನ ಕೊಡುಗೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

‘ನಮ್ಮ ಸಂಸ್ಥೆಯ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ದೊಡ್ಡ ಮೊತ್ತದ ನೆರವು ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅದಕ್ಕೆ ಸಹಕಾರ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ. ರಾಮದಾಸ್ ಹಾಗೂ ಈ ಭಾಗದ ಎಲ್ಲ ಪ್ರಭಾವಿ ಧುರೀಣರು ಮತ್ತು ಜನಪ್ರತಿನಿಧಿಗಳಿಗೆ ಸಂಸ್ಥೆಯ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ’ ಎಂದು ಅವರು ಹರ್ಷದಿಂದಲೇ ತಿಳಿಸಿದರು.

‘ರೂ. 6 ಕೋಟಿ ವೆಚ್ಚದಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಮಷಿನ್, ರೂ. 10 ಕೋಟಿ ವೆಚ್ಚದಲ್ಲಿ ಆಡಳಿತ ಬ್ಲಾಕ್ ಕಟ್ಟಡ ನಿರ್ಮಾಣ, ಮಿಕ್ಕ ಹಣದಲ್ಲಿ ಆಧುನಿಕ ಹಾಗೂ ಸುಸಜ್ಜಿತವಾದ ಶಸ್ತ್ರ ಚಿಕಿತ್ಸಾ (ಓ.ಟಿ) ಸಂಕೀರ್ಣ ಸ್ಥಾಪನೆ ಮತ್ತು ವಿವಿಧ ವಿಭಾಗಗಳ ಆಧುನೀಕರಣ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಮದಕಟ್ಟಿ ಹೇಳಿದರು.

‘ಆಸ್ಪತ್ರೆ ಹಾಸಿಗೆ ಸಾಮರ್ಥ್ಯವನ್ನು ಈಗಾಗಲೇ 1200ಕ್ಕೆ ಹೆಚ್ಚಿಸಲಾಗಿದ್ದು, ಅಗತ್ಯ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದೆ. 150 ವಿದ್ಯಾರ್ಥಿಗಳ ಪ್ರವೇಶಕ್ಕೆ ಭಾರತೀಯ ವೈದ್ಯಕೀಯ ಪರಿಷತ್ತು (ಎಂಸಿಐ) ಅನುಮತಿ ನೀಡಿದೆ. ಇನ್ನು ಎರಡು ವರ್ಷ ಇದೇ ಸಾಮರ್ಥ್ಯವನ್ನು ನಾವು ಉಳಿಸಿಕೊಂಡರೆ ಪ್ರವೇಶ ಸಂಖ್ಯೆಯನ್ನು 250ಕ್ಕೆ ಏರಿಸುವ ಅವಕಾ ಶವಿದೆ. ಸರ್ಕಾರಕ್ಕೂ ಈ ಕುರಿತು ಅರಿವಿದೆ. ಆದ್ದ ರಿಂದಲೇ ಕಿಮ್ಸ್ ಸೌಲಭ್ಯಗಳನ್ನು ಉನ್ನತದರ್ಜೆಗೆ ಏರಿಸಲು ಮುಖ್ಯಮಂತ್ರಿಗಳು ಉತ್ಸುಕವಾಗಿದ್ದಾರೆ’ ಎಂದು ಅವರು ವಿವರಿಸಿದರು.

‘ಕಿಮ್ಸ್‌ನಲ್ಲಿ ರೂ. 60 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸೂಪರ್ ಸ್ಪೇಶಾಲಿಟಿ ಆಸ್ಪತ್ರೆಗೆ ಇನ್ನೂ ಹಸಿರು ನಿಶಾನೆ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಒಪ್ಪಿಗೆ ದೊರೆಯುವ ವಿಶ್ವಾಸವಿದೆ’ ಎಂದು ಹೇಳಿದರು. ‘ಸಂಸ್ಥೆಗೆ ಸಿಕ್ಕ ಅನುದಾನದ ಪ್ರತಿ ಪೈಸೆಯೂ ಸದುಪಯೋಗವಾಗುವ ರೀತಿ ಜಾಗೃತಿ ವಹಿಸಲಾಗುವುದು. ನಯಾಪೈಸೆಯೂ ದುರು ಪಯೋಗವಾಗದು ಎಂಬ ಭರವಸೆ ನೀಡುತ್ತೇನೆ’ ಎಂದು ಮದಕಟ್ಟಿ ಹೇಳಿದರು.

‘ರಾಜ್ಯದ ಬೇರೆ ಯಾವ ಕಾಲೇಜು ಇಲ್ಲವೆ ಶಿಕ್ಷಣ ಸಂಸ್ಥೆಗೆ ಈ ಪ್ರಮಾಣದ ಅನುದಾನ ದೊರೆತಿಲ್ಲ’ ಎಂದು ಅವರು ಹೆಮ್ಮೆಯಿಂದಲೇ ತಿಳಿಸಿದರು.ಕಿಮ್ಸ್‌ನ ಪೂರ್ಣಾವಧಿ ನಿರ್ದೇಶಕರು ಮಾರ್ಚ್ ಮೊದಲ ವಾರದಲ್ಲಿ ಬರುವುದು ನಿಶ್ಚಿತ ಎಂದು ಸಚಿವ ಎಸ್.ಎ. ರಾಮದಾಸ್ ಮತ್ತೆ ಸ್ಪಷ್ಟಪಡಿಸಿದ್ದಾರೆ. ಕಿಮ್ಸ್ ನಿರ್ದೇಶಕರ ಹುದ್ದೆಗೆ ಒಟ್ಟಾರೆ 14 ಅರ್ಜಿಗಳು ಬಂದಿದ್ದು, ಮೈಸೂರಿನ ಮೂವರು ವೈದ್ಯರೂ ಈ ಪ್ರತಿಷ್ಠಿತ ಸಂಸ್ಥೆಯ ನಿರ್ದೇಶಕರ ಹುದ್ದೆ ಮೇಲೆ ಕಣ್ಣಿಟ್ಟಿದ್ದಾರೆ. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ (ಡಿಎಂಇ) ಅಂತಿಮಗೊಳಿಸುತ್ತಿರುವ ಪಟ್ಟಿಯಲ್ಲಿ ಹುಬ್ಬಳ್ಳಿಯ ಮೂವರ ಹೆಸರೂ ಇದೆ ಎಂದು ತಿಳಿದುಬಂದಿದೆ.

ಈ ಮಧ್ಯೆ ಧಾರವಾಡದ ನರರೋಗ ಹಾಗೂ ಮಾನಸಿಕ ಆರೋಗ್ಯ ಆಸ್ಪತ್ರೆಗೆ ರೂ. 5 ಕೋಟಿ ಅನುದಾನ ನೀಡಲಾಗಿದೆ. ತೆವಳುತ್ತಾ ಸಾಗಿದ್ದ ಸಂಸ್ಥೆಗೆ ಇದರಿಂದ ಸ್ಫೂರ್ತಿ ಸಿಕ್ಕಿದ್ದು, ಚೆನ್ನಾಗಿ ಬೆಳೆಯಲು ಪೂರಕ ವಾತಾವರಣ ನಿರ್ಮಾಣವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.