ಗೋಣಿಕೊಪ್ಪಲು: ಕುಟ್ಟ ತಾಲ್ಲೂಕು ಪಂಚಾಯಿತಿ ಕ್ಷೇತ್ರದಲ್ಲಿ ಭಾನುವಾರ ನಡೆದ ಉಪ ಚುನಾವಣೆಯಲ್ಲಿ ಶೇ 59.21 ಮತದಾನವಾಗಿದೆ.
ಒಟ್ಟು 7,059 ಮತದಾರರಲ್ಲಿ 4,177 ಮಂದಿ ಮತ ಚಲಾಯಿಸಿದರು. 2,182 ಪುರುಷರು, 1,995 ಮಹಿಳೆಯರು ಮತದಾನ ಮಾಡಿದರು. ಕೆಲ ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಉಳಿದಂತೆ ಮತದಾನ ಶಾಂತಿಯುತವಾಗಿ ಜರುಗಿತು. ಕಾರ್ಮಿಕರೇ ಹೆಚ್ಚಿನ ಪ್ರಮಾಣದಲ್ಲಿ ಇದ್ದ ಈ ಕ್ಷೇತ್ರದಲ್ಲಿ ಬೆಳಿಗ್ಗೆ ಮತದಾನ ಮಂದಗತಿಯಲ್ಲಿ ಸಾಗಿತು. 11 ಗಂಟೆ ವೇಳೆಗೆ ಚುರುಕಾಯಿತು. ಕುಟ್ಟ ಗಿರಿಜನ ಬಾಲಕಿಯರ ವಸತಿ ಗೃಹ, ಗ್ರಾಮ ಪಂಚಾಯಿತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಗಿರಿಜನ ಬಾಲಕರ ವಸತಿ ಗೃಹ, ನಾಲ್ಕೇರಿ ಸರ್ಕಾರಿ ಪ್ರಾಥಮಿಕ ಶಾಲೆ, ನಾಗರಹೊಳೆ, ಬಾಡಗರ ಕೇರಿ, ನಾಣಚಿ ಸರ್ಕಾರಿ ಪ್ರಾಥಮಿಕ ಶಾಲೆ, ಬೊಮ್ಮೋಡು ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಕಾಂಗ್ರೆಸ್ ಪಕ್ಷದ ಸದಸ್ಯೆ ಜೆ.ಕೆ.ಮುತ್ತಮ್ಮ ಅವರ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಎಂಬ ಹಟದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ಮತದಾನದ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಉಭಯ ಪಕ್ಷದವರು ವಾಹನಗಳಲ್ಲಿ ಮತದಾರರನ್ನು ಕರೆ ತರುತ್ತಿದ್ದ ದೃಶ್ಯ ಕಂಡು ಬಂದಿತು.
ಪೊನ್ನಂಪೇಟೆ ವಲಯ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ ಹಾಗೂ ಬಿಜೆಪಿ ಮುಖಂಡರಾದ ಅಜ್ಜಾಮಾಡ ಜಯ, ಶರೀನ್ ಸುಬ್ಬಯ್ಯ ಅವರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು. ಡಿವೈಎಸ್‌ಪಿ ಅಣ್ಣಪ್ಪ ನಾಯಕ, ಸರ್ಕಲ್ ಇನ್‌ಸ್ಪೆಕ್ಟರ್ ಶಿವಶಂಕರ್, ವಿರಾಜಪೇಟೆ ಸಬ್ ಇನ್‌ಸ್ಪೆಕ್ಟರ್ ಅನೂಪ್ ಮಾದಪ್ಪ, ಕುಟ್ಟ ಸಬ್ ಇನ್‌ಸ್ಪೆಕ್ಟರ್ ಬಸವರಾಜು, ಶ್ರೀಮಂಗಲ ಸಬ್ ಇನ್‌ಸ್ಪೆಕ್ಟರ್ ಪ್ರಕಾಶ್ ಬಂದೋಬಸ್ತ್ ಏರ್ಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.