ADVERTISEMENT

ಕುಮಾರಪಟ್ಟಣಂನಲ್ಲಿ ಕಲಾಂ ಆಗಮನ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2012, 5:55 IST
Last Updated 18 ಮಾರ್ಚ್ 2012, 5:55 IST

ದಾವಣಗೆರೆ: ಅದೊಂದು ಅಪೂರ್ವ ಕ್ಷಣಕ್ಕಾಗಿ ಎಲ್ಲರೂ ಕಾಯುತ್ತಿದ್ದರು. ಕುಮಾರಪಟ್ಟಣಂನ ಹೆಲಿಪ್ಯಾಡ್‌ನಲ್ಲಿ ಬರಲಿರುವ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆಗಮನಕ್ಕೆ ಎಲ್ಲರ ನಿರೀಕ್ಷೆಯಿತ್ತು.

ಶನಿವಾರ ನಗರದ ಬಾಪೂಜಿ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಆಗಮಿಸಿದ ಅವರನ್ನು ಹಾರ್ದಿಕವಾಗಿ ಸ್ವಾಗತಿಸಲಾಯಿತು. ಹುಬ್ಬಳ್ಳಿಯಿಂದ ಶಾಮನೂರು ಸಮೂಹದ ವಿಶೇಷ ವಿಮಾನದಲ್ಲಿ ಅವರು ಸಂಜೆ 5.10 ನಿಮಿಷಕ್ಕೆ ಸರಿಯಾಗಿ ಆಗಮಿಸಿದರು.

ಕಲಾಂ ಅವರು ವಿಮಾನದಿಂದ ಇಳಿದ ತಕ್ಷಣ ಸುತ್ತುವರಿದ ಮಕ್ಕಳು ಅವರ ಹಸ್ತಾಕ್ಷರ ಪಡೆಯಲು ಮುಗಿಬಿದ್ದರು. ಎಲ್ಲರಿಗೂ ತಾಳ್ಮೆಯಿಂದಲೇ ಹಸ್ತಾಕ್ಷರ ನೀಡಿದ ಕಲಾಂ, ಶಿಷ್ಟಾಚಾರದಂತೆ ತಮಗಾಗಿ ನಿಗದಿಪಡಿಸಲಾದ ಕಾರಿನಲ್ಲಿ ದಾವಣಗೆರೆಯ ಸರ್ಕಿಟ್ ಹೌಸ್‌ನತ್ತ ಪ್ರಯಾಣ ಬೆಳೆಸಿದರು.

ವಿಮಾನದಲ್ಲಿ ಕಲಾಂ ಅವರೊಂದಿಗೆ ಬಿಐಇಟಿ ಪ್ರಾಧ್ಯಾಪಕ ಡಾ.ಬಿ.ಇ. ರಂಗಸ್ವಾಮಿ ಇದ್ದರು. ತಿಳಿಬಣ್ಣದ ಸೂಟು ಧರಿಸಿದ್ದ ಕಲಾಂ ಅವರನ್ನು ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಪೂರ್ವವಲಯ ಐಜಿಪಿ ಸಂಜಯ್ ಸಹಾಯ್, ಪ್ರಭಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ. ಚವಾಣ್, ಜಿಲ್ಲಾ ಪಂಚಾಯ್ತಿ ಸಿಇಒ ಗುತ್ತಿ ಜಂಬುನಾಥ್, ತಹಶೀಲ್ದಾರ್ ನಜ್ಮಾ, ಗ್ರಾಸಿಂ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಪ್ರಕಾಶ್ ಕಟ್ಟಿ, ವೇಲು, ಸುದರ್ಶನ ರಾವ್, ನಾರಾಯಣ ರಾವ್, ಭದ್ರತಾ ಮುಖ್ಯಸ್ಥ ದಿವಾಕರ ನಾಯ್ಡು, ಶಾಮನೂರು ಕುಟುಂಬದ ಪರವಾಗಿ ಎಸ್.ಎಸ್. ಗಣೇಶ್, ಬಿಐಇಟಿ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಎ.ಸಿ. ಜಯಣ್ಣ ಮತ್ತಿತರರು ಪುಷ್ಪಗುಚ್ಛ ನೀಡಿ ಸ್ವಾಗತಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.