ADVERTISEMENT

ಕೆಯುಐಡಿಎಫ್‌ಸಿ ಕಾರ್ಯವೈಖರಿಗೆ ಕಿಡಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 10:26 IST
Last Updated 1 ಜೂನ್ 2013, 10:26 IST

ಹುಬ್ಬಳ್ಳಿ: ಅವಳಿ ನಗರದಲ್ಲಿ ಒಳಚರಂಡಿ ಪೈಪ್‌ಲೈನ್ ಕಾಮಗಾರಿ ಕೈಗೊಂಡಿರುವ ಕಂಪೆನಿ ನಿಯಮಾವಳಿಯಂತೆ ಕೆಲಸ ಮಾಡುತ್ತಿದೆಯೇ?, ನಿಯಮ ಉಲ್ಲಂಘನೆಗೆ ಎರಡು ವರ್ಷದಲ್ಲಿ ಎಷ್ಟು ಬಾರಿ ದಂಡ ವಿಧಿಸಿದ್ದೀರಿ, ದಂಡದ ಮೊತ್ತವೆಷ್ಟು?...

ಹೀಗೆ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಶುಕ್ರವಾರ ಕೆಯುಐಡಿಎಫ್‌ಸಿ ಯೋಜನೆಯಡಿ ಕೈಗೆತ್ತಿಕೊಂಡಿರುವ ಒಳಚರಂಡಿ ಕಾಮಗಾರಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪ್ರಶ್ನೆಗಳ ಮಳೆಗೆರೆಯುತ್ತಿದ್ದರೆ ಅಧಿಕಾರಿಗಳು ಬೆವರ ತೊಡಗಿದ್ದರು.

ವಾಸ್ತವವಾಗಿ ನಿಯಮ ಪಾಲನೆ ಮಾಡ ದಿದ್ದಲ್ಲಿ ಕಾಮಗಾರಿ ಕೈಗೊಂಡಿರುವ ಕಂಪೆನಿಗೆ ವಿಧಿಸಬಹುದಾದ ದಂಡದ ಮೊತ್ತದ ಬಗ್ಗೆಯೇ ಕೆಯುಐಡಿಎಫ್‌ಸಿ ಅಧಿಕಾರಿಗಳಿಗೆ ಮಾಹಿತಿಯೇ ಇರಲಿಲ್ಲ. ಇದರಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿ, ಹೀಗೆಯೇ ಬೇಜವಾಬ್ದಾರಿ ಮುಂದುವರೆಸಿದಲ್ಲಿ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಕಳುಹಿಸುವುದಾಗಿ ಎಚ್ಚರಿಕೆ ನೀಡಿದರು.

ಗುತ್ತಿಗೆದಾರರಿಗೂ ಎಚ್ಚರಿಕೆ: ಕೆಲಸ ವಿಳಂಬವಾಗಿ ರುವುದಕ್ಕೆ ಕೆಯುಐಡಿಎಫ್‌ಸಿಯಿಂದ ಹಣ ಬಿಡುಗಡೆ ತಡವಾಗಿದ್ದೇ ಕಾರಣ ಎಂದು ಕಾಮ ಗಾರಿ ಕೈಗೆತ್ತಿಕೊಂಡಿರುವ ಈಗಲ್ ಕನ್‌ಸ್ಟ್ರಕ್ಷನ್ ಕಂಪೆನಿಯ ಅಧಿಕಾರಿಗಳು ಹೇಳಿದಾಗ ಕೆಂಡಾ ಮಂಡಲವಾದ ಜಿಲ್ಲಾಧಿಕಾರಿ, ವಾರದ ಹಿಂದಷ್ಟೇ ಹಣ ಬಿಡುಗಡೆಯಾಗಿರುವ ಬಗ್ಗೆ ಪ್ರಸ್ತಾಪಿಸಿ ಸಭೆಗೆ ಸುಳ್ಳು ಮಾಹಿತಿ ನೀಡದಂತೆ ಕಂಪೆನಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

`ನೆಪಗಳನ್ನು ಹೇಳುತ್ತಾ ಕಾಲತಳ್ಳುವುದನ್ನು ಸಹಿಸುವುದಿಲ್ಲ. ನಿಗದಿತ ಅವಧಿಯಂತೆ 2012ರ ಸೆಪ್ಟಂಬರ್ ತಿಂಗಳಿಗೆ ಕಾಮಗಾರಿ ಮುಗಿಯಬೇಕಿತ್ತು. ಇಲ್ಲಿಯವರೆಗೆ ಶೇ 50ರಷ್ಟು ಕಾಮಗಾರಿ ಮುಗಿಸಿಲ್ಲ. ಈಗ ಮಳೆಗಾಲದ ನೆಪ ಹೇಳಿ ಮತ್ತೆ ಕಾಲಹರಣ ಮಾಡುತ್ತೀರಿ. ಇನ್ನು ಮುಂದೆ ಜಿಲ್ಲಾಡಳಿತ ಅದನ್ನು ಸಹಿಸುವುದಿಲ್ಲ ಮುಂದಿನ ಮೂರು ತಿಂಗಳಲ್ಲಿ ನಾಲ್ಕು ಕಿ.ಮೀ ಕಾಮಗಾರಿ ಮುಕ್ತಾಯಗೊಳಿಸಬೇಕು' ಎಂದು ಗುತ್ತಿಗೆದಾರ ಕಂಪೆನಿಗೆ ತಾಕೀತು ಮಾಡಿದರು.

ಇನ್ನು ಮುಂದೆ ಕಾಮಗಾರಿ ವಿಳಂಬವಾದರೆ ದಿನದ ಲೆಕ್ಕದಲ್ಲಿ ದಂಡ ವಿಧಿಸುವಂತೆ ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುರಕ್ಷತಾ ಕ್ರಮ ಉಲ್ಲಂಘನೆ: `ಕಾಮಗಾರಿ ನಡೆಸುವಾಗ ಜನ ಹಾಗೂ ಜಾನುವಾರುಗಳಿಗೆ ತೊಂದರೆಯಾಗದಂತೆ ಸುತ್ತಲೂ ಬ್ಯಾರಿಕೇಡ್ ಹಾಕಬೇಕು. ಕೆಂಪು ದೀಪಗಳನ್ನು ಅಳವಡಿಸಬೇಕು. ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗೆ ಕ್ಷಮೆ ಕೋರಿ ಫಲಕ ಹಾಕಬೇಕು. ಕಾಮಗಾರಿ ಆರಂಭವಾದ ದಿನ, ಮುಕ್ತಾಯದ ದಿನ, ಗುತ್ತಿಗೆದಾರರ ಹೆಸರು, ದೂರವಾಣಿ ಸಂಖ್ಯೆ ಹಾಗೂ ಖರ್ಚು-ವೆಚ್ಚದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ಫಲಕ ಅಳವಡಿಸಬೇಕಿದೆ ಈ ನಿಯಮಾವಳಿಗಳನ್ನು ಕಂಪೆನಿ ಪಾಲಿಸುತ್ತಿದೆಯೇ' ಎಂದು ಜಿಲ್ಲಾಧಿಕಾರಿ ಕೇಳಿದಾಗ ಅಧಿಕಾರಿಗಳ ಬಳಿ ಉತ್ತರ ಇರಲಿಲ್ಲ.

`ಕೆಲಸ ಮಾಡುವ ಸ್ಥಳದಲ್ಲಿ ಕಾರ್ಮಿಕರ ಸುರಕ್ಷತೆಗೂ ಒತ್ತು ನೀಡಬೇಕು. ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಪ್ರಥಮ ಚಿಕಿತ್ಸೆ ವ್ಯವಸ್ಥೆ ಲಭ್ಯವಿರಬೇಕು ಈ ಕ್ರಮ ಅನುಸರಿಸಲಾ ಗುತ್ತಿದೆಯೇ' ಎಂದು ಕೇಳಿದ ಜಿಲ್ಲಾಧಿಕಾರಿ `ಕಾಮಗಾರಿ ಸ್ಥಳದಲ್ಲಿ ನಾನು ಖುದ್ದಾಗಿ ಪರಿಶೀಲನೆ ನಡೆಸಿದ್ದು ನಿಯಮಾವಳಿ ಉಲ್ಲಂಘನೆ ಮಾಡಿದ್ದಾರೆ. ಕಂಪೆನಿ ವಿರುದ್ಧ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲವೇಕೆ' ಎಂದು ಸಮೀರ್ ಶುಕ್ಲಾ ಸಭೆಯಲ್ಲಿದ್ದ ಅಧಿಕಾರಿಗಳನ್ನು ಪ್ರಶ್ನಿಸಿದರು. ಈ ಲೋಪಗಳನ್ನು ಸರಿಪಡಿಸಿ ಕೊಂಡು ತಕ್ಷಣ ಕಂಪೆನಿ ಕಾಮಗಾರಿಯನ್ನು ಪೂರ್ಣಗೊಳಿಸಲಿ ತಪ್ಪಿದಲ್ಲಿ  ಸಂಬಂಧಿಸಿದ ಅಧಿಕಾರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ರಸ್ತೆಗಳ ಸರಿಪಡಿಸಲು ಆಗ್ರಹ: ಒಳಚರಂಡಿ ಕಾಮಗಾರಿಗಾಗಿ ರಸ್ತೆಗಳನ್ನು ಅಗೆಯಲಾಗಿದ್ದು ಮತ್ತೆ ಅವುಗಳನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ. ಕೆಲವು ಕಡೆ ರಸ್ತೆ ದುರಸ್ತಿ ಮಾಡಲಾಗಿದ್ದರೂ ವೈಜ್ಞಾನಿಕವಾಗಿ ಮಾಡಿಲ್ಲ ಎಂದು ಸಭೆಯಲ್ಲಿ ಹಾಜರಿದ್ದ ಮಹಾನಗರ ಪಾಲಿಕೆ ಸದಸ್ಯ ಲಕ್ಷ್ಮಣ ಗಂಡಗಾಳೇಕರ ಆರೋಪಿಸಿದರು.

ರಸ್ತೆಗಳ ದುರಾವಸ್ಥಿಯಿಂದಾಗಿ ವಾಹನಗಳು ಇರಲಿ ಪಾದಚಾರಿಗಳು ಅಡ್ಡಾಡುವುದು ಕಷ್ಟವಾಗಿದೆ. ಅಪಘಾತಗಳು ಸಾಮಾನ್ಯ ಎನಿಸಿವೆ. ಸಾರ್ವಜನಿಕರು ಪಾಲಿಕೆಗೆ ಹಿಡಿಶಾಪ ಹಾಕು ತ್ತಿದ್ದಾರೆ ಎಂದು ಗಂಡಗಾಳೇಕರ ಹೇಳಿ ದಾಗ ಸಂಸದ ಪ್ರಹ್ಲಾದ ಜೋಶಿ ಅದನ್ನು ಅನುಮೋದಿ ಸಿದರು. ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ರಸ್ತೆ ರಿಪೇರಿ ಸೇರಿದಂತೆ ಇತರೆ ಕಾಮಗಾರಿಗಳಿಗೆ ಯೋಜನೆ ರೂಪಿಸುವಾಗಲೇ ಹೆಚ್ಚುವರಿಯಾಗಿ ಹಣ ನೀಡಿರಲಾಗಿರುತ್ತದೆ. ಗುತ್ತಿಗೆದಾರರು ಯಾವುದೇ ನಿಯಮಾವಳಿ ಪಾಲಿಸುತ್ತಿಲ್ಲ ಎಂದರು.

ಸಭೆಯಲ್ಲಿ  ಪಾಲಿಕೆ ಆಯುಕ್ತ ವೈ.ಎಸ್. ಪಾಟೀಲ, ಸದಸ್ಯರಾದ ಡಾ.ಪಾಂಡುರಂಗ ಪಾಟೀಲ, ಸುಧೀರ ಸರಾಫ್,  ಬಿಜೆಪಿ ಮುಖಂಡ ವೀರೇಶ ಸಂಗಳದ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.