ADVERTISEMENT

ಕೊಲೆಗಡುಕರನ್ನು ಜೈಲಿಗಟ್ಟದಿದ್ದರೆ ಯಡಿಯೂರಪ್ಪ ಅನ್ನಬೇಡಿ

ಸಚಿವ ವಿನಯ ಕುಲಕರ್ಣಿ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಆಕ್ರೋಶ; ಅಮೃತ ದೇಸಾಯಿ ಪರ ಪ್ರಚಾರ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2018, 10:44 IST
Last Updated 13 ಏಪ್ರಿಲ್ 2018, 10:44 IST
ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಕ್ಷೇತ್ರದಲ್ಲಿ ಮಾತಿನ ವೇಳೆ ಎರಡೂ ಕೈ ಎತ್ತಿ ಬೆಂಬಲ ಕೋರಿದ ಪ್ರಹ್ಲಾದ ಜೋಶಿ, ಅಮಿತ್ ಶಾ, ಅಮೃತ ದೇಸಾಯಿ
ಧಾರವಾಡ ತಾಲ್ಲೂಕಿನ ಹೆಬ್ಬಳ್ಳಿ ಕ್ಷೇತ್ರದಲ್ಲಿ ಮಾತಿನ ವೇಳೆ ಎರಡೂ ಕೈ ಎತ್ತಿ ಬೆಂಬಲ ಕೋರಿದ ಪ್ರಹ್ಲಾದ ಜೋಶಿ, ಅಮಿತ್ ಶಾ, ಅಮೃತ ದೇಸಾಯಿ   

ಧಾರವಾಡ: ‘ಕೊಲೆಗೀಡಾದ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶಗೌಡ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ಜೈಲಿಗಟ್ಟದಿದ್ದರೆ, ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಪರ ಗ್ರಾಮದಲ್ಲಿ ಗುರುವಾರ ಪ್ರಚಾರ ಭಾಷಣ ಮಾಡಿದ ಅವರು, ‘ಕ್ಷೇತ್ರದಲ್ಲಿ ಗೂಂಡಾಗಿರಿ ಹಾಗೂ ಭ್ರಷ್ಟಾಚಾರ ನಡೆಸುತ್ತಿರುವ ವಿನಯ ಕುಲಕರ್ಣಿಗೆ ಇನ್ನು 30 ದಿನಗಳು ಬಾಕಿ ಉಳಿದಿವೆ. ಹಣಬಲ, ತೋಳ್ಬಲ, ಜಾತಿ ಹಾಗೂ ಧರ್ಮ ಒಡೆದು ರಾಜಕಾರಣ ಮಾಡುತ್ತಿರುವ ಅವರಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

‘ಮಗನನ್ನು ಕಳೆದುಕೊಂಡ ತಾಯಿ ತುಂಗಮ್ಮನ ಕಣ್ಣೀರಿಗೆ ನ್ಯಾಯ ದೊರಕಿಸಬೇಕಾದ್ದು ನಮ್ಮೆಲ್ಲರ ಜವಾಬ್ದಾರಿ. ಭ್ರಷ್ಟ ಸಚಿವ ವಿನಯ ಕುಲಕರ್ಣಿಯನ್ನು ಮನೆಗೆ ಕಳುಹಿಸದಿದ್ದರೆ. ಈ ಭಾಗದಲ್ಲಿ ಯಾರೂ ನೆಮ್ಮದಿಯಿಂದ ಬದುಕು ನಡೆಸಲು ಸಾಧ್ಯವಿಲ್ಲ’ ಎಂದರು.

ADVERTISEMENT

‘ಲೋಕಾಯುಕ್ತವನ್ನು ದುರ್ಬಲಗೊಳಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಪಾಪದ ಕೊಡ ತುಂಬಿದೆ. ಹೀಗಾಗಿ, ಪ್ರತಿ ಬೂತ್‌ನಿಂದ ಶೇ 70ರಷ್ಟು ಮತ ಬಿಜೆಪಿಗೆ ಬರುವಂತೆ ಮಾಡಬೇಕು’ ಎಂದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿದ್ದಾರೆ. ಭ್ರಷ್ಟರಿಗೆ ಟಿಕೆಟ್‌ ನೀಡಬೇಡಿ ಎಂದು ಮಲ್ಲಿಕಾರ್ಜುನ ಖರ್ಗೆ ಖಾರವಾಗಿ ಪ್ರತಿಕ್ರಿಯಿಸಿರುವುದನ್ನು ನೋಡಿದರೆ ಕಾಂಗ್ರೆಸ್ ಒಡೆದ ಮನೆಯಾಗಿದೆ. ಇಂಥ ಸರ್ಕಾರವನ್ನು ಕಿತ್ತೊಗೆದು ನರೇಂದ್ರ ಮೋದಿ ಅಭಿವೃದ್ಧಿ ಚಿಂತನೆಯ ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಅಸ್ಥಿತ್ವಕ್ಕೆ ತರಬೇಕು’ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡಿ, ‘ವಿನಯ ಕುಲಕರ್ಣಿ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದೇ ಯೋಗೀಶಗೌಡ ಗೌಡರ ಅಪರಾಧ. ಹೀಗಾಗಿ, ಅವರ ಕೊಲೆಯಾಗಿದೆ. ಇಷ್ಟು ಮಾತ್ರವಲ್ಲ 24 ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಬಿಜೆಪಿ ಸರ್ಕಾರ ರಚನೆಯಾದ ಮರುಕ್ಷಣದಲ್ಲೇ ಇಂಥ ಕೃತ್ಯ ಎಸಗಿದವರು ಪಾತಾಳದಲ್ಲೇ ಅಡಗಿರಲಿ. ಅವರನ್ನು ಜೈಲಿನ ಕಂಬಿ ಎಣಿಸುವಂತೆ ಮಾಡುವುದೇ ನಮ್ಮ ಧ್ಯೇಯ’ ಎಂದರು.

‘ಬಿಜೆಪಿ ಅಧಿಕಾರದಲ್ಲಿರುವ 22 ರಾಜ್ಯಗಳಲ್ಲಿ ರೈತ ಆತ್ಮಹತ್ಯೆ ಪ್ರಕರಣ ಇಳಿಮುಖವಾಗಿದೆ. ಕಾಂಗ್ರೆಸ್ ಈ ದೇಶವನ್ನು ಆಳಿದ 55 ವರ್ಷಗಳಲ್ಲಿ ಮಾಡದ ಅಭಿವೃದ್ಧಿಯನ್ನು ಕಳೆದ ನಾಲ್ಕು ವರ್ಷಗಳಲ್ಲಿ ಮಾಡಲಾಗಿದೆ’ ಎಂದರು.ಶಾಸಕ ಅರವಿಂದ ಬೆಲ್ಲದ, ಅಭ್ಯರ್ಥಿ ಅಮೃತ ದೇಸಾಯಿ ಇದ್ದರು.

ಅವಳಿ ನಗರದಲ್ಲಿ 29 ಕೊಲೆ

‘ರಾಜ್ಯದ 224 ಕ್ಷೇತ್ರಗಳಲ್ಲಿ ಗೂಂಡಾ ನಂ. 1 ಎಂದು ಧಾರವಾಡ ಕ್ಷೇತ್ರ ಎನಿಸಿಕೊಂಡಿದೆ. ಅವಳಿ ನಗರದಲ್ಲಿ 29 ಕೊಲೆಗಳು ನಡೆದಿವೆ. ಮಟ್ಕಾ, ಜೂಜು ಹಾಗೂ ಇನ್ನಿತರ ಅಪರಾಧ ಕೃತ್ಯಗಳು ಹೆಚ್ಚಾಗಿವೆ. ಗೂಂಡಾಗಳಿಗೆ ಸುಲಭದ ರಕ್ಷಣೆ ಸಿಗುತ್ತಿದೆ. ಬಿಹಾರ ಆಗುತ್ತಿರುವ ಈ ಕ್ಷೇತ್ರವನ್ನು ರಕ್ಷಿಸುವ ಅಗತ್ಯವಿದೆ. ಅದಕ್ಕಾಗಿ ಕ್ಷಣಿಕ ಸುಖಕ್ಕಾಗಿ ಮತಗಳನ್ನು ಮಾರಿಕೊಂಡು ಕಾಂಗ್ರೆಸ್‌ಗೆ ಮತ ಹಾಕಬೇಡಿ’ ಎಂದು ಬಿಜೆಪಿಯ ತವನಪ್ಪ ಅಷ್ಟಗಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.