ADVERTISEMENT

ಕೊಲೆಯಾದಾಗ ಪತ್ನಿ ಮನೆಯಲ್ಲೇ ಇದ್ದರು!

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 10:08 IST
Last Updated 16 ಮಾರ್ಚ್ 2018, 10:08 IST

ಹುಬ್ಬಳ್ಳಿ: ಸುಶ್ರುತ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಸಂಸ್ಥಾಪಕ ನಿರ್ದೇಶಕ, ಎಲುಬು, ಕೀಲು ತಜ್ಞ ಡಾ.ಬಾಬು ಹುಂಡೇಕಾರ ಅವರ ಕೊಲೆ ನಡೆದ ವೇಳೆ ಪತ್ನಿ ಶಶಿಕಲಾ ಅಲ್ಲೇ ಇದ್ದರು. ಅವರೇ ಕೊಲೆಗೆ ಕುಮ್ಮಕ್ಕು ನೀಡಿದ್ದರೇ ಎಂಬುದರ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ಅವರ ವಿಚಾರಣೆ ಮುಂದುವರಿಸಿದ್ದಾರೆ.

ಬೆಡ್‌ರೂಮ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಬಾಬು ಅವರನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು, ಚಾಕುವಿನಿಂದ ಇರಿದು ಕೊಲೆ ಮಾಡಿದ್ದನ್ನು ಪ್ರತ್ಯಕ್ಷವಾಗಿ ನೋಡಿದ್ದರೂ ದೂರು ನೀಡದಿರುವುದು ಅನುಮಾನಗಳಿಗೆ ಕಾರಣವಾಗಿದೆ. ಅದೇ ಆಧಾರದ ಮೇಲೆ ತನಿಖೆ ಮಾಡಲಾಗುತ್ತಿದೆ.

ಅಕ್ರಮ ಸಂಬಂಧಗಳ ಹಿನ್ನೆಲೆಯಲ್ಲೂ ಕೊಲೆ ನಡೆದಿರುವ ಸಾಧ್ಯತೆ ಇದ್ದು, ಆ ನಿಟ್ಟಿನಲ್ಲೂ ತನಿಖೆ ಮಾಡುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ವಶಕ್ಕೆ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನವೀನ ಮುಲ್ಕಿಗೌಡರ, ನಂದೀಶ ಬೆಟಗೇರಿ ಹಾಗೂ ರಾಕೇಶ ಅವರನ್ನು ಗುರುವಾರ ಪೊಲೀಸರು ಬಂಧಿಸಿ, ನಗರದ ಒಂದನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಅವರನ್ನು ಮೂರು ದಿನಗಳವರೆಗೆ ಪೊಲೀಸ್‌ ವಶಕ್ಕೆ ನೀಡಲಾಗಿದೆ. ಮತ್ತೊಬ್ಬ ಆರೋಪಿ ಇಸ್ಮಾಯಿಲ್‌ ತಲೆಮರೆಸಿಕೊಂಡಿದ್ದಾನೆ.

ಹೆಚ್ಚಿನ ಹಣಕ್ಕೆ ಒತ್ತಾಯ: ಬಾಬು ಅವರು ಆಗಸ್ಟ್‌ನಲ್ಲಿ ಹೊಸದಾಗಿ ಶಿವಶಕ್ತಿ ಆಸ್ಪತ್ರೆ ಆರಂಭಿಸಿದ್ದರು. ಖರ್ಚು ಹೆಚ್ಚಾದ ಹಿನ್ನೆಲೆಯಲ್ಲಿ ಪತ್ನಿಯ ತಮ್ಮ ನವೀನಗೆ ನೀಡಿದ್ದ ಹಣವನ್ನು ಮರಳಿ ಕೇಳಿದ್ದರು. ಹಣ ನೀಡುವ ಬದಲು, ಮತ್ತಷ್ಟು ಹಣಕ್ಕೆ ನವೀನ ಬೇಡಿಕೆ ಇಟ್ಟಿದ್ದ. ಈ ವಿಷಯದಲ್ಲಿ ಇಬ್ಬರ ನಡುವೆಯೂ ಆಗಾಗ್ಗೆ ಗಲಾಟೆ ಆಗುತ್ತಿತ್ತು ಎಂಬುದನ್ನು ಪೊಲೀಸರು ತಿಳಿಸಿದ್ದಾರೆ.

ಮನೆಗೆ ಬಂದೋಬಸ್ತ್‌: ವಿದ್ಯಾನಗರ ಬಡಾವಣೆಯ ಜಯನಗರದಲ್ಲಿರುವ ಬಾಬು ಅವರ ಮನೆಗೆ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.