ADVERTISEMENT

ಕೋಟಿ ಸಸಿ ನೆಡುವ ಆಂದೋಲನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 6:50 IST
Last Updated 6 ಜೂನ್ 2017, 6:50 IST
ಹುಬ್ಬಳ್ಳಿಯ ಕೇಶವಕುಂಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ ಒಂದು ಕೋಟಿ ಗಿಡ ನೆಡುವ ಆಂದೋಲನಕ್ಕೆ ರುದ್ರಾಕ್ಷಿ ಮಠದ ಬಸವಲಿಂಗ ಶ್ರೀಗಳು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು
ಹುಬ್ಬಳ್ಳಿಯ ಕೇಶವಕುಂಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದಾದ್ಯಂತ ಒಂದು ಕೋಟಿ ಗಿಡ ನೆಡುವ ಆಂದೋಲನಕ್ಕೆ ರುದ್ರಾಕ್ಷಿ ಮಠದ ಬಸವಲಿಂಗ ಶ್ರೀಗಳು ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿದರು   

ಹುಬ್ಬಳ್ಳಿ: ಸಮರ್ಥ ಭಾರತ ಮತ್ತು ಲೋಕಹಿತ ಟ್ರಸ್ಟ್‌್ ಜಂಟಿಯಾಗಿ ರಾಜ್ಯದ ವಿವಿಧೆಡೆ ಒಟ್ಟು ಒಂದು ಕೋಟಿ ಗಿಡ ನೆಡುವ ಯೋಜನೆ ಹಮ್ಮಿಕೊಂಡಿವೆ. ಈ ಆಂದೋಲನಕ್ಕೆ ನಗರದಲ್ಲಿ ಸೋಮವಾರ ಚಾಲನೆ ಲಭಿಸಿತು.

ರುದ್ರಾಕ್ಷಿ ಮಠದ ಬಸವಲಿಂಗ ಶ್ರೀಗಳು ಆಂದೋಲನಕ್ಕೆ ಚಾಲನೆ ಕೊಟ್ಟರು. ಯೋಜನೆಯ ಮೊದಲ ಹೆಜ್ಜೆಯಾಗಿ ಕೇಶವಕುಂಜದಲ್ಲಿ ಕೆಲವು ಗಿಡಗಳನ್ನು ನೆಡಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಲೋಕಹಿತ ಟ್ರಸ್ಟ್‌ ಕಾರ್ಯದರ್ಶಿ ಶ್ರೀಧರ ನಾಡಿಗೇರ, ‘ಸಸಿ ನೆಡುವುದಷ್ಟೇ ಮುಖ್ಯವಲ್ಲ, ಕನಿಷ್ಠ 3 ವರ್ಷ ನೀರು ಹಾಕಿ ಪೋಷಿಸಬೇಕು. ಇಲ್ಲವಾದರೆ ನಮ್ಮ ಕೆಲಸಕ್ಕೆ ಅರ್ಥವೇ ಇರುವುದಿಲ್ಲ’ ಎಂದರು.

‘ಮಳೆಯ ಕೊರತೆ ಕಾಡುತ್ತಿದ್ದು ಬರವೇ ಹೆಚ್ಚಾಗಿದೆ. ನೈಸರ್ಗಿಕ ಸಂಪತ್ತನ್ನು ಅತಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ಮೊದಲಿನ ಹಾಗೆ ಕಾಲಕಾಲಕ್ಕೆ ಮಳೆಯಾಗಬೇಕು, ಕೆರೆ, ನದಿಗಳು ತುಂಬಬೇಕು ಎಂದರೆ ಗಿಡ ಬೆಳೆಸುವುದು ಅನಿವಾರ್ಯ.  ಇನ್ನು ಮುಂದಾದರೂ ಪಾಠ ಕಲಿಯದಿದ್ದರೆ ಸಂಕಷ್ಟ ತಪ್ಪಿದ್ದಲ್ಲ’ ಎಂದರು.

ADVERTISEMENT

‘ಒಂದು ಕೋಟಿ ಗಿಡಗಳನ್ನು ನೆಡುವ ಆಂದೋಲನ ಯಾವುದೇ ಸಂಘ, ಸಂಸ್ಥೆಗಳಿಗಷ್ಟೇ ಸೀಮಿತವಲ್ಲ. ಪ್ರತಿಯೊಬ್ಬರೂ ಈ ಆಂದೋಲನದಲ್ಲಿ ಪಾಲ್ಗೊಳ್ಳಬೇಕು. ರಾಜ್ಯವನ್ನು ಹಸಿರುಮಯ ಮಾಡಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಸಾನ್ನಿಧ್ಯ ವಹಿಸಿದ್ದ ಬಸವಲಿಂಗ ಶ್ರೀಗಳು ಮಾತನಾಡಿ ಪ್ರಕೃತಿ ದತ್ತವಾದ ಸಂಪತ್ತನ್ನು ಮನುಷ್ಯ ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾನೆ ಎನ್ನುವುದರ ಬಗ್ಗೆ ಹೇಳಿದರು.
‘ಎಲ್ಲಾ ಜೀವರಾಶಿಗಳಿಗಿಂತ ಮನುಷ್ಯ ಶ್ರೇಷ್ಠ ಜೀವಿ ಎಂದು ಭಾವಿಸಿದ್ದೇವೆ.

ಆದರೆ ಸಂಸ್ಕೃತಿ, ಸಂಸ್ಕಾರವನ್ನು ಮರೆತು ಮನುಷ್ಯ ವಿಕೃತಿಯಿಂದ ಬದುಕುತ್ತಿದ್ದಾನೆ. ಇದರಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ಪ್ರಕೃತಿಯನ್ನು ಉಳಿಸಬೇಕು. ಈ ವರ್ಷ ನೆಟ್ಟ ಸ್ಥಳದಲ್ಲಿಯೇ ಮುಂದಿನ ವರ್ಷವೂ ಗಿಡಗಳನ್ನು ನೆಡುವ ಪರಿಸ್ಥಿತಿ ಬರಬಾರದು. ಗಿಡ ನೆಡುವ ಜೊತೆಗೆ ಅವುಗಳನ್ನು ಪೋಷಿಸುವ ಕೆಲಸವಾಗಬೇಕು’ ಎಂದರು.

ಮರಗಳ ಉದ್ಯಾನ:  ಅಧ್ಯಕ್ಷತೆ ವಹಿಸಿದ್ದ ಮೇಯರ್‌ ಡಿ.ಕೆ. ಚವ್ಹಾಣ್, ‘ಪಾಲಿಕೆಯ ವ್ಯಾಪ್ತಿಯ ಪ್ರತಿ ವಾರ್ಡ್‌ನಲ್ಲಿ ತಲಾ 200 ಗಿಡಗಳನ್ನು ಬೆಳೆಸುವ ಯೋಜನೆ ರೂಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಮರಗಳ ಉದ್ಯಾನ ನಿರ್ಮಿಸಲಾಗುತ್ತದೆ’ ಎಂದು  ಭರವಸೆ ನೀಡಿದರು. ಪಾಲಿಕೆಯ ಸದಸ್ಯ ಪ್ರಕಾಶ ಕಾರಕಟ್ಟೆ, ಸಂಘಚಾಲಕ ಶಿವಾನಂದ ಅವಟೆ ಹಾಜರಿದ್ದರು.

ಮನೆಗೊಂದು ಮರ ಬೆಳೆಸಲು ಸಲಹೆ
ಹುಬ್ಬಳ್ಳಿ: ಅಖಿಲ ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ವತಿಯಿಂದ ನವನಗರದ ಗಾಮನಗಟ್ಟಿ ರೈತ ಕರಿಬಸಪ್ಪ ಅವರ ತೋಟದಲ್ಲಿ ಸಸಿಗಳನ್ನು ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಸೋಮವಾರ ಆಚರಿಸಲಾಯಿತು.

ಅರಣ್ಯ ನಾಶದಿಂದಾಗಿ ಇಂದು ಹವಮಾನದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಇದರ ಪರಿಣಾಮ ಮಳೆ ಕಡಿಮೆಯಾಗಿ, ಬಿಸಿಲಿ ತಾಪ ಅಧಿಕವಾಗಿದೆ ಎಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷೆ ಜಯಲಕ್ಷ್ಮಿ ಎಂ.ದೊಡ್ಡಮನಿ ಹೇಳಿದರು.

ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮನೆಗೊಂದು ಮರ ಬೆಳೆಸಬೇಕು ಎಂದು ಹೇಳಿದರು. ಶಾಲಾ, ಕಾಲೇಜು, ಸಂಘ, ಸಂಸ್ಥೆಗಳು ರಸ್ತೆ ಬದಿಗಳಲ್ಲಿ, ಉದ್ಯಾನಗಳಲ್ಲಿ ಗಿಡಗಳನ್ನು ನೆಡಲು ಆದ್ಯತೆ ನೀಡಬೇಕು ಎಂದರು.

ಉಪಾಧ್ಯಕ್ಷೆ ಪದ್ಮಾವತಿ ಎಂ.ರಾಠೋಡ, ಗೌರವ ಅಧ್ಯಕ್ಷ  ವಿಠಲ ಚವ್ಹಾಣ, ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಆರ್‌. ಲಮಾಣಿ, ಸಿ.ಡಿ.ಲಮಾಣಿ, ಅನ್ನಪೂರ್ಣ ಲಮಾಣಿ, ರುಕ್ಷ್ಮಿಣಿಬಾಯಿ ನಾಯಕ್‌, ಶೀಲಾ ಚವ್ಹಾಣ, ಲಲಿತಾ ನಾಯಕ್‌, ಧನಲಕ್ಷ್ಮಿ ನಾಯಕ್‌, ಶಾಂತಾ ಹೊಸಮನಿ, ಅನ್ನಪೂರ್ಣ ಎನ್‌., ಗಿರಿಜಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.