ADVERTISEMENT

ಕ್ರಿಕೆಟ್ ಸಂಭ್ರಮ, ಅಕಾಡೆಮಿ ಉದ್ಘಾಟನೆ ಇಂದು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2012, 6:25 IST
Last Updated 22 ಡಿಸೆಂಬರ್ 2012, 6:25 IST

ಹುಬ್ಬಳ್ಳಿ: ಎರಡು ದಶಕಗಳ ಬರಕ್ಕೆ ಶನಿವಾರ ವಿದಾಯ. ವಿಘ್ನಗಳು ನೀಗಿ ಅನುಕೂಲಕರ ವಾತಾವರಣ ನಿರ್ಮಾಣವಾ ಗಿದೆ. ಉತ್ತರ ಕರ್ನಾಟಕಕ್ಕೇ ಹೆಮ್ಮೆ ಎನಿಸಿದ ಕೆಎಸ್‌ಸಿಎ ಕ್ರಿಕೆಟ್ ಮೈದಾನದ ಉದ್ಘಾಟನೆ ಇದೇ 22ರಂದು ನಡೆಯಲಿದೆ. ಮೈದಾನದ ಪೆವಿಲಿಯನ್, ಇಲ್ಲೇ ಆರಂಭಗೊಂಡಿರುವ ಆರ್‌ಸಿ-ಕೆಎಸ್‌ಸಿಎ ಕ್ರಿಕೆಟ್ ಅಕಾಡೆಮಿ ಉದ್ಘಾಟನೆಯೂ ಅಂದೇ ನಡೆಯಲಿದೆ.

ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಕೆಎಸ್‌ಸಿಎ ಅಧ್ಯಕ್ಷ ಹಾಗೂ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಮತ್ತಿತರರು ಸಮಾರಂಭಕ್ಕೆ ಕಳೆ ತರಲಿದ್ದಾರೆ. ಬೆಳಿಗ್ಗೆ 8.30ಕ್ಕೆ ನಡೆಯಲಿರುವ ಉದ್ಘಾಟನಾ ಸಮಾ ರಂಭದ ನಂತರ ಕರ್ನಾಟಕ ಹಾಗೂ ಹರಿಯಾಣ ತಂಡಗಳ ರಣಜಿ ಪಂದ್ಯದೊಂದಿಗೆ ಮೈದಾನದಲ್ಲಿ ಬ್ಯಾಟ್-ಚೆಂಡಿನ ಕಾರುಬಾರು ನಡೆಯಲಿದೆ. ಪಂದ್ಯದ ಮೊದಲ ದಿನದ ಭೋಜನ ವಿರಾಮದ ಸಂದರ್ಭದಲ್ಲಿ ಈ ಭಾಗದ ಮಾಜಿ ರಣಜಿ ಆಟಗಾರರು ಹಾಗೂ ಹಿರಿಯರ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಉತ್ತರ ಕರ್ನಾಟಕದ ಮಾಜಿ ರಣಜಿ ಆಟಗಾರರು ಹಾಗೂ ಕ್ರಿಕೆಟ್ ಬೆಳಗವಣಿಗೆಗೆ ಶ್ರಮಿಸಿದ ಹಿರಿಯರನ್ನು ಹೊಸ ಮೈದಾನದ ಉದ್ಘಾಟನೆಯ ಅಂಗವಾಗಿ ಶನಿವಾರ ಸನ್ಮಾನಿಸಲಾಗುವುದು. ಮಾಜಿ ರಣಜಿ ಆಟಗಾರರಾದ ಸುನಿಲ್ ಜೋಶಿ, ಅವಿನಾಶ ವೈದ್ಯ, ರಾಜೇಶ ಕಾಮತ್, ಸುರೇಶ ಶಾನಬಾಳ, ಆನಂದ ಕಟ್ಟಿ ಹಾಗೂ ಸೋಮಶೇಖರ ಶಿರಗುಪ್ಪಿ ಅವರೊಂದಿಗೆ ಕೆಎಸ್‌ಸಿಎ ಆಜೀವ ಸದಸ್ಯರಾದ ಭರತ್ ಖಿಮ್ಜಿ, ಸುನಿಲ್ ಕಠಾರೆ, ಹಿರಿಯ ಕ್ರೀಡಾ ಪತ್ರಕರ್ತ ಶಿವಾನಂದ ಜೋಶಿ ಅವರನ್ನು ಕೂಡ ಗೌರವಿಸಲಾಗುತ್ತದೆ.

ಕೆಎಸ್‌ಸಿಗೆ ಮೈದಾನಗಳನ್ನು ಒದಗಿಸಿದ ಡಾ. ಅಶೋಕ ಶೆಟ್ಟರ, ರಾಜು ಮಹಾಲಿಂಗಶೆಟ್ಟಿ, ವಿವಿಧ ಕ್ರಿಕೆಟ್ ಸಂಸ್ಥೆಗಳಾದ ಧಾರವಾಡದ ಸಿಸಿಕೆ, ಹುಬ್ಬಳ್ಳಿಯ ಎಚ್‌ಎಸ್‌ಸಿ, ಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್, ಬೆಳಗಾವಿಯ ಯೂನಿಯನ್ ಜಿಮ್ಖಾನಾ, ಬೆಳಗಾವಿ ಸ್ಪೋರ್ಟ್ಸ್ ಕ್ಲಬ್‌ಗಳ ಪ್ರತಿನಿಧಿಗಳು, ಕೆಎಸ್‌ಸಿಎ ವಲಯ ಅಧ್ಯಕ್ಷ ವೀರಣ್ಣ ಸವಡಿ ಹಾಗೂ ಸಂಚಾಲಕ ಬಾಬಾ ಬೂಸದ ಅವರನ್ನು ಸನ್ಮಾನಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.