ADVERTISEMENT

ಖಜಾನೆಗೆ ಹಣ ಪಾವತಿಗೆ ಒಂಬುಡ್ಸ್‌ಮನ್‌ ಆದೇಶ

ದೇವನೂರ ಗ್ರಾಮ ಪಂಚಾಯ್ತಿಯಲ್ಲಿ ಕಳೆದ ವರ್ಷ ನಡೆದಿದ್ದ ಅವ್ಯವಹಾರ ಪ್ರಕರಣ

ಅಶೋಕ ಘೋರ್ಪಡೆ
Published 23 ಮಾರ್ಚ್ 2018, 10:24 IST
Last Updated 23 ಮಾರ್ಚ್ 2018, 10:24 IST

ಕುಂದಗೋಳ: ದೇವನೂರ ಗ್ರಾಮ ಪಂಚಾಯ್ತಿಯಡಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅವ್ಯವಹಾರ ನಡೆದಿರುವುದು ಸಾಬೀತಾಗಿರುವುದರಿಂದ ₹4,69 ಲಕ್ಷ ಪಾವತಿಸುವಂತೆ ಜಿಲ್ಲಾ ಒಂಬುಡ್ಸ್‌ಮನ್‌ ಆದೇಶಿಸಿದೆ.

ಗ್ರಾಮ ಪಂಚಾಯ್ತಿ ಅಧ್ಯಕ್ಷೆ, ಪಿಡಿಒ ಹಾಗೂ ಗ್ರಾಮ ಪಂಚಾಯ್ತಿಯಲ್ಲಿ ಕಾಯಕಬಂಧು ಯೋಜನೆಯಡಿ ಕೆಲಸ ಮಾಡುವವರಿಂದ ಹಣ ವಸೂಲಿ ಮಾಡಲು ಆದೇಶಿಸಲಾಗಿದ್ದು ಮೂವರು ಸಿಬ್ಬಂದಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡಿ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಲಾಗಿದೆ.

ದೇವನೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಳೇಬಾಳ ಗ್ರಾಮದಲ್ಲಿ 2017–18ನೇ ಸಾಲಿನಲ್ಲಿ ಉದ್ಯೋಗ ಖಾತ್್ರಿ ಯೋಜನೆಯಡಿ ಕಳಪೆ ಕಾಮಗಾರಿ ಮಾಡಿ ಹಣ ಲಪಟಾಯಿಸಲಾಗಿದೆ ಎಂದು ದೂರಲಾಗಿತ್ತು. ಇದಲ್ಲದೇ ಇನ್ನೂ ಕೆಲವು ಕಾಮಗಾರಿಗಳನ್ನು ಮಾಡದೇ ಖೊಟ್ಟಿ ಜಾಬ್‌ ಕಾರ್ಡ್‌ ಸೃಷ್ಟಿಸಿ ಕೂಲಿಕಾರರ ಹೆಸರಿನಲ್ಲಿ ಹಣ
ಜಮಾ ಮಾಡಲಾಗಿತ್ತು ಎಂದು ದೂರಲಾಗಿತ್ತು.

ADVERTISEMENT

ದೇವನೂರ ಗ್ರಾಮದಲ್ಲಿ ರೈತರ ಹೊಲಗಳಲ್ಲಿ ಕೃಷಿ ಹೊಂಡ ನಿರ್ಮಾಣ ಹಾಗೂ ಹೊಳಗಟ್ಟಿ ನಿರ್ಮಾಣ, ಕೆಲವು ಓಣಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ಹಾಗೂ ಸಿ.ಡಿ ನಿರ್ಮಿಸಲಾಗಿದೆ ಎಂದು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಸುಮಾರು ₹53 ಲಕ್ಷ ಅವ್ಯವಹಾರ ಮಾಡಲಾಗಿದೆ ಎಂದು ಗ್ರಾಮಸ್ಥ ನಿಂಗನಗೌಡ ಪಾಟೀಲ ಎಂಬುವರು 2017ರ ಮಾರ್ಚ್ 3ರಂದು ಬೆಂಗಳೂರಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆಯುಕ್ತರು, ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ನೀಡಿದ್ದರು.

ಈ ದೂರಿನ ವಿಚಾರಣೆಗೆ ಜಿಲ್ಲಾ ಪಂಚಾಯ್ತಿಯಿಂದ ನಾಲ್ಕು ಜನ ಹಿರಿಯ ಅಧಿಕಾರಿಗಳ ತನಿಖಾ ತಂಡ ಮಾಡಲಾಗಿತ್ತು. ತಂಡವು ಒಂಬತ್ತು ತಿಂಗಳ ಕಾಲ ತನಿಖೆ ಮಾಡಿ ಜಿಲ್ಲಾ ಒಂಬುಡ್ಸ್‌ಮನ್‌ ಅವರಿಗೆ ವರದಿ ನೀಡಿತ್ತು.

ವರದಿ ಪರಿಶೀಲಿಸಿದ ಒಂಬುಡ್ಸ್‌ಮನ್‌ ಎಂ.ಎಚ್.ಚಿಕ್ಕರಡ್ಡಿ ಅವರು, 23–10–2017ರಂದು ಹಣ ದುರುಪಯೋಗಪಡಿಸಿಕೊಂಡ ಪಿಡಿಒ ಇಬ್ರಾಹಿಮ್ ದಾವಲಸಾಬ್ ಲಾಠಿ ₹2,02,822, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲಕ್ಷ್ಮವ್ವ ಶಿವಪ್ಪ ಮಜ್ಜಿಗುಡ್ಡ ₹1.39,056, ಗ್ರಾಮ ಪಂಚಾಯ್ತಿ ಕಾಯಕ ಬಂಧು ಎಂದು ನೇಮಕಗೊಂಡಿದ್ದ ಶರೀಫಸಾಬ್ ಆರ್. ನದಾಫ ₹63,766, ನಾಗರಾಜ ಜಯಪ್ಪ ಕೊಪ್ಪದ ₹63,766
ಹಣವನ್ನು ಸರ್ಕಾರಕ್ಕೆ ಮರು ಪಾವತಿ ಮಾಡುವಂತೆ ಆದೇಶವನ್ನು ಹೊರಡಿಸಿದ್ದಾರೆ.

ಅಲ್ಲದೇ ಗ್ರಾಮ ಪಂಚಾಯ್ತಿಯ ಕ್ಲರ್ಕ್‌ ಗದಿಗೆಪ್ಪ ರಾಮಪ್ಪ ಶಿಂಗಣ್ಣವರ, ಬಿಲ್ ಕಲೆಕ್ಟರ್ ವೀರಭದ್ರ ದುಂಡಪ್ಪನವರ, ವಾಟರಮನ್ ಯಲ್ಲಪ್ಪ ಸಣ್ಣಪ್ಪ ನಾಯ್ಕರ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಕೆಪಿಆರ್.ಕಾಯ್ದೆ 113ರಡಿ ಕ್ರಮ ಜರುಗಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಸೂಚಿಸಿದ್ದಾರೆ.

ಮೂರು ದಿನದೊಳಗೆ ಸರ್ಕಾರಿ ಖಜಾನೆಗೆ ಹಣ ಪಾವತಿಸುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾ ಅಧಿಕಾರಿಗಳು ಸಂಬಂಧಪಟ್ಟವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಒಟ್ಟು ₹ 49 ಲಕ್ಷ ಅವ್ಯವಹಾರ
ವಾಗಿದ್ದು ಈಗ ಕೇವಲ ₹4.69 ಲಕ್ಷ ವಸೂಲಿಗೆ ಆದೇಶ ಹೊರಡಿಸಲಾಗಿದೆ. ಸಂಪೂರ್ಣ ಹಣ ವಸೂಲಿಗೆ ಅಧಿಕಾರಿಗಳು ಹಿಂದೇಟು ಹಾಕುತ್ತಿರುವುದರಿಂದ ಪ್ರಕರಣದ ತನಿಖೆಗೆ ಒತ್ತಾಯಿಸಿ ಲೋಕಾಯುಕ್ತ ಇಲಾಖೆಗೂ ದೂರು ಸಲ್ಲಿಸಿರುವುದಾಗಿ ದೂರು ನೀಡಿದ್ದ ನಿಂಗನಗೌಡ ಪಾಟೀಲ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.