ADVERTISEMENT

ಖಾಸಗಿ ವಿವಿ: ಸ್ಪಷ್ಟ ಮಾರ್ಗಸೂಚಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 6:22 IST
Last Updated 4 ಡಿಸೆಂಬರ್ 2012, 6:22 IST

ಧಾರವಾಡ: ಖಾಸಗಿ ವಿವಿ ಸ್ಥಾಪನೆಗೆ ರಾಜ್ಯ ಸರ್ಕಾರ ಸ್ಪಷ್ಟ ಮಾರ್ಗಸೂಚಿ ರೂಪಿಸಬೇಕು ಎಂದು ಆಗ್ರಹಿಸಿ ಎಬಿವಿಪಿ ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಮಖಾಂತರ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅವರಿಗೆ ಮನವಿ ಸಲ್ಲಿಸಿದರು.

ಸರ್ಕಾರ ರಾಜ್ಯದಲ್ಲಿ ಮತ್ತಷ್ಟು ಖಾಸಗಿ ವಿ.ವಿ ಸ್ಥಾಪನೆಗೆ ಹಸಿರು ನಿಶಾನೆ ತೋರಲು ಹೊರಟಿದೆ. ಆದರೆ ಇವುಗಳ ಸ್ಥಾಪನೆಯ ಸಂಬಂಧ ಯಾವುದೇ ಸ್ಪಷ್ಟ ಮಾರ್ಗಸೂಚಿ ಹೊಂದಿಲ್ಲದಿರುವುದು ಖಂಡನೀಯ ಎಂದು ಸಂಘಟನೆಯ  ಶರಣು ಅಂಗಡಿ ಟೀಕಿಸಿದರು.

ಮೊದಲು ಅಗತ್ಯ ಮಾರ್ಗಸೂಚಿಗಳನ್ನು ರೂಪಿಸಿ, ಈ ವಿ.ವಿ.ಗಳು ಸಾಮಾಜಿಕ ನ್ಯಾಯಕ್ಕೆ ಅನುಗುಣವಾಗಿ ಎಲ್ಲ ವಿದ್ಯಾರ್ಥಿಗಳು ಭರಿಸುವಂತಹ ಶುಲ್ಕ ನೀತಿಯನ್ನು ಹೊಂದಿರುವಂತೆ ಮೀಸಲಾತಿ, ರೋಸ್ಟರ್ ಪದ್ಧತಿ ಅಳವಡಿಸಬೇಕು ಎಂದು ಒತ್ತಾಯಿಸಿದರು.

ಯಾವುದೇ ಪೂರ್ವ ತಯಾರಿ, ಸ್ಪಷ್ಟ ಮಾರ್ಗಸೂಚಿಗಳಿಲ್ಲದೇ ಖಾಸಗಿ ವಿವಿ ಪ್ರಾರಂಭಕ್ಕೆ ಅನುಮತಿ ನೀಡಲು ಹೊರಟಿರುವ ಸರ್ಕಾರದ ಕ್ರಮ ಅನುಮಾನಕ್ಕೆ ಎಡೆ ಮಾಡಿದೆ. ಈಗಾಗಲೇ ಯುಜಿಸಿಯ ಕಪ್ಪು ಪಟ್ಟಿಯಲ್ಲಿ ಸೇರಿರುವ ಹಲವು ಡೀಮ್ಡ ವಿವಿಗಳು ಬೇರೆ ಹೆಸರಿನಲ್ಲಿ ಖಾಸಗಿ ವಿವಿಗಳ ಸ್ಥಾಪನೆಗೆ ಮುಂದಾಗಿರುವ ಮಾಹಿತಿಗಳಿದ್ದು, ಸರ್ಕಾರ ಈ ವಿಚಾರವನ್ನು ಲಘುವಾಗಿ ಪರಿಗಣಿಸಬಾರದು ಎಂದು ಆಗ್ರಹಿಸಿದರು.
ಮಹೇಶ ಹಂಬ್ಲಿ, ಅಮೀತ್ ಮೋರೆ, ಮಹಾಂತೇಶ ಹಾಗೂ ಉಮೇಶ ಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.