ADVERTISEMENT

ಗಣಿ ನಷ್ಟದ ಹಣ ವಸೂಲಿಗೆ ಆಗ್ರಹ

ಸಮಾಜ ಪರಿವರ್ತನ ಸಮುದಾಯದ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಮೇ 2018, 8:17 IST
Last Updated 22 ಮೇ 2018, 8:17 IST

ಧಾರವಾಡ: ‘ಅಕ್ರಮ ಗಣಿಗಾರಿಕೆಯಿಂದಾಗಿ ರಾಜ್ಯದ ಬೊಕ್ಕಸಕ್ಕೆ ನಷ್ಟವಾಗಿರುವ ₹1ಲಕ್ಷ ಕೋಟಿ ಮೊತ್ತವನ್ನು ನೂತನ ಸರ್ಕಾರ ವಸೂಲು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಸಮಾಜ ಪರಿವರ್ತನ ಸಮುದಾಯದ ಎಸ್‌.ಆರ್.ಹಿರೇಮಠ ಆಗ್ರಹಿಸಿದರು.

‘ಕಳೆದ ಕಾಂಗ್ರೆಸ್ ಸರ್ಕಾರ ತನಗೆ ಸಿಕ್ಕಿದ್ದ ಉತ್ತಮ ಅವಕಾಶವನ್ನು ಕೈಚೆಲ್ಲಿದೆ. ಎಚ್.ಕೆ.ಪಾಟೀಲ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿಯೂ ಯಾವುದೇ ನಿರ್ಧಾರ ತೆಗೆದುಕೊಳ್ಳದೆ ಕಾಲ ಹರಣ ಮಾಡಿತು. ನೂತನ ಸರ್ಕಾರವಾದರೂ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು. ಲೂಟಿಕೋರರಿಂದ ಹಣ ವಸೂಲಿ ಮಾಡಬೇಕು’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಧಾರವಾಡ ಕ್ಷೇತ್ರದ ಮಾಜಿ ಶಾಸಕ ವಿನಯ ಕುಲಕರ್ಣಿ ಗಣಿ ಖಾತೆಯ ಹೊಣೆ ಹೊತ್ತಿದ್ದರೂ, ಇಲಾಖೆಯನ್ನು ಸರಿಯಾಗಿ ನಿಭಾಯಿಸಲಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿದ್ದ ಎಚ್‌.ಸಿ.ಮಹಾದೇವಪ್ಪ, ಎಚ್.ಆಂಜನೇಯ, ಕೆ.ಬಿ.ಕೋಳಿವಾಡ ಅವರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ’ ಎಂದರು.

ADVERTISEMENT

‘ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಶಾ ಪರೋಕ್ಷವಾಗಿ ರೆಡ್ಡಿ ಸೋದರರಿಗೆ ಬೆಂಬಲ ನೀಡುತ್ತಿದ್ದಾರೆ. ಅವರ ಈ ನಿಲುವನ್ನು ಜನರು ಪ್ರಶ್ನಿಸಬೇಕು. ಕೃಷಿ ಸಂಕಟ, ನಿರುದ್ಯೋಗವನ್ನು ನಿಭಾಯಿಸಬೇಕಾದ ಕೇಂದ್ರ ಸರ್ಕಾರವು ಅದನ್ನು ಮರೆತು ದುರಾಡಳಿತದಲ್ಲಿ ತೊಡಗಿದೆ’ ಎಂದು ಆರೋಪ ಮಾಡಿದರು.

‘ಎಲೆಕ್ಟ್ರಾನಿಕ್ ಮತ ಯಂತ್ರ ದುರ್ಬಳಕೆ ಆರೋಪ ಮಾಡಿರುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌ನ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಡಾ. ಮಹೇಶ ನಾಲವಾಡ ಅವರು ದಾಖಲೆಗಳೊಂದಿಗೆ ನನ್ನ ಬಳಿ ಬಂದಿದ್ದರು. ಈ ಕುರಿತು ಅಧ್ಯಯನ ನಡೆಸುತ್ತಿದ್ದು, ಒಂದೆರೆಡು ದಿನಗಳಲ್ಲಿ ಜಿಲ್ಲಾಧಿಕಾರಿ ಅವರನ್ನು ಭೇಟಿ ಮಾಡಲಿದ್ದೇನೆ. ಆರೋಪ ಮಾಡುವವರು ತಮ್ಮ ಹೋರಾಟವನ್ನು ಕೇವಲ ಪ್ರತಿಭಟನೆಗೆ ಸೀಮಿತಗೊಳಿಸಬಾರದು. ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಬೇಕು. ಸಾಧ್ಯವಾದರೆ. ಹೈಕೋರ್ಟ್‌ನಲ್ಲಿ ಮೊಕದ್ದಮೆ ಹೂಡಬೇಕು’ ಎಂದು ಹಿರೇಮಠ ಸಲಹೆ ನೀಡಿದರು. ಐ.ಜಿ.ಪುಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.