ADVERTISEMENT

ಗುಡಗೇರಿ: ಕಬಡ್ಡಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2012, 10:35 IST
Last Updated 7 ಏಪ್ರಿಲ್ 2012, 10:35 IST

ಗುಡಗೇರಿ: ಗ್ರಾಮದ ಸಿದ್ಧನಹೊಂಡ ಮೈದಾನದಲ್ಲಿ ಗ್ರಾಮದ ಸಮಸ್ತ ಕ್ರೀಡಾ ಪ್ರೇಮಿಗಳ ಸಂಘದ ಆಶ್ರಯದಲ್ಲಿ ಅಂತರ ರಾಜ್ಯ ಮಟ್ಟದ ಮೂರು ದಿನಗಳ ಕಬಡ್ಡಿ ಟೂರ್ನಿ ಶುಕ್ರವಾರ ಕ್ರೀಡಾಪ್ರೇಮಿಗಳ ಅಪಾರ ಅಮಿತೋತ್ಸಾಹದಿಂದ ಆರಂಭಗೊಂಡವು.

ಗ್ರಾಮದೇವಿ ದ್ಯಾಮವ್ವನ ಗುಡಿಯಿಂದ ಕ್ರೀಡಾಜ್ಯೋತಿಯನ್ನು ಖ್ಯಾತ ಕಬಡ್ಡಿ ಆಟಗಾರ ಆನಂದ ಗೋವಿಂದಪ್ಪನವರ ಕ್ರೀಡಾಂಗಣಕ್ಕೆ ತರುತ್ತಿದ್ದಂತೆಯೇ ನೆರದಿದ್ದ ಕ್ರೀಡಾಭಿಮಾನಿಗಳು ಹರ್ಷೋದ್ಘಾರದ ಮೂಲಕ ಸ್ವಾಗತಿಸಿದರು.

ಕ್ರೀಡಾ ಜ್ಯೋತಿಯನ್ನು ಹುಬ್ಬಳ್ಳಿ ಇಸ್ಕಾನ್ ಸಂಸ್ಥೆಯ ರಾಜೀವ ಲೋಚನದಾಸ್ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ರಾಜೀವ ಲೋಚನದಾಸ್, ಕ್ರೀಡೆಗಳಿಂದ ಬಲಿಷ್ಠ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಕ್ರೀಡೆಗಳು ಕೇವಲ ಸೋಲು ಗೆಲುವಿಗಾಗಿರದೇ ಪರಸ್ಪರ ಸ್ನೇಹ ಹಾಗೂ ಸಹೋದರತೆಯ ಭಾವನೆಯನ್ನು ಬಿಂಬಿಸುತ್ತವೆ ಎಂದರು.

ಇತ್ತೀಚಿನ ದಿನಗಳಲ್ಲಿ ಯುವಕರು ದೇಶಿಯ ಕ್ರೀಡೆಗಳನ್ನು ನಿರ್ಲಕ್ಷಿಸಿ ಕ್ರಿಕೆಟ್ ವ್ಯಾಮೋಹಕ್ಕೆ ಒಳಗಾಗಿರುವುದು ವಿಷಾದನೀಯ ಸಂಗತಿ ಎಂದ ಅವರು ಗ್ರಾಮೀಣ ಯುವಕರು ಅದರಲ್ಲೂ ವಿಶೇಷವಾಗಿ ಗುಡಗೇರಿ ಗ್ರಾಮದಲ್ಲಿ ಇಡೀ ಗ್ರಾಮವೇ ಕಬಡ್ಡಿ ಪಂದ್ಯಾವಳಿಗೆ ಹಬ್ಬದ ಸಂಭ್ರಮ ನೀಡಿರುವುದು ಯುವಕರಲ್ಲಿ ಪುರಾತನ ಕ್ರೀಡೆಗಳ ಬಗ್ಗೆ ಇರುವ ಒಲವು ಇತರರಿಗೆ ಆದರ್ಶಪ್ರಾಯವಾಗಿದೆ ಎಂದರು.

ಜಿಲ್ಲಾ ಪಂಚಾಯತಿ ಸದಸ್ಯ ವೆಂಕನಗೌಡ ಹಿರೇಗೌಡ್ರ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಪಂದ್ಯಾವಳಿಯ ರೂವಾರಿ ಮಾಂತೇಶ ಗೊರವರ ಹಾಗೂ ದೈಹಿಕ ಶಿಕ್ಷಣಾಧಿಕಾರಿ ಎಸ್.ಎಂ ಮಾಕಣ್ಣವರ, ಗ್ರಾ.ಪಂ ಅಧ್ಯಕ್ಷ ರವಿರಾಜ ಮುಗಳಿ, ಅಪ್ಪಣ್ಣ ಹುಂಡೇಕಾರ, ಬಸವನಗೌಡ ಕರೆಹೊಳಲಪ್ಪಗೌಡರ, ರಾಜು ಮಳಲಿ, ಪ್ರಕಾಶ ದಾನಣ್ಣವರ, ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.