ADVERTISEMENT

ಗ್ರಾಮಸ್ಥರಿಂದ ಶಾಲೆಗೆ ಪುಸ್ತಕ ದೇಣಿಗೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 7:03 IST
Last Updated 5 ಡಿಸೆಂಬರ್ 2012, 7:03 IST

ರಾಮನಕೊಪ್ಪ (ಕುಂದಗೋಳ): ಮಕ್ಕಳು ಪ್ರತಿದಿನ ಅರ್ಧ ಗಂಟೆ ಪಠ್ಯಪುಸ್ತಕ ಹೊರತು ಪಡಿಸಿ ಗ್ರಂಥಾಲಯದ ಪುಸ್ತಕಗಳನ್ನು ಅಧ್ಯಯನ ಮಾಡಿದರೆ ಬೌದ್ದಿಕ ವಿಕಾಸದ ಜೊತೆಗೆ ಚಿಂತನೆ ಹೆಚ್ಚಿಸಿಕೊಳ್ಳಲು ಸಹಾಯಕ ಎಂದು ಡಯಟ್ ಪ್ರಾಚಾರ್ಯ ಎಚ್.ಎನ್. ಗೋಪಾಲಕೃಷ್ಣ ಹೇಳಿದರು.

ಇಲ್ಲಿನ ಎಸ್.ಎಸ್. ಪೊಲೀಸ್‌ಪಾಟೀಲ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಾಲಾ ಶ್ರದ್ಧಾ ವಾಚನಾಲಯ ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಸಂಗ್ರಹಿಸಿದ್ದ ಹತ್ತು ಸಾವಿರ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಶಾಲಾ ಮುಖ್ಯ ಶಿಕ್ಷಕರಿಗೆ ವಿತರಿಸಿ ಮಾತನಾಡಿದರು. ಸಂಗ್ರಹಿಸಿದ ಪುಸ್ತಕಗಳನ್ನು ಮಕ್ಕಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ನುಡಿದರು.

ಅರ್ಜುನ ಕಾಂಬೋಗಿ ಮಾತನಾಡಿ, ಮಕ್ಕಳು ಚಿಂತನಶೀಲರಾಗಿ ಅಧ್ಯಯನ ಮಾಡಬೇಕು. ಅದು ಉತ್ತಮ ಸಾಧನೆಗೆ ವೇದಿಕೆ ಆಗಲಿದೆ ಎಂದು ನುಡಿದರು. ಮಾಧ್ಯಮಗಳಲ್ಲಿ ಪ್ರಸಾರವಾಗುವ ಕಾರ್ಯಕ್ರಮದಲ್ಲಿ ಒಳ್ಳೆಯದನ್ನು ಆಯ್ಕೆ ಮಾಡಿಕೊಂಡು ಅಭ್ಯಾಸ ಮಾಡಬೇಕು ಎಂದರು.

ಎಸ್.ಎಸ್. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವಿದ್ಯಾರ್ಥಿನಿಯರಾದ ನಂದಾ ಪಾಟೀಲ, ಪ್ರೇಮಾ ಮಜದಾರ, ಮೇಘಾ ಕುಂಬಾಳಿಮಠ, ರಾಜು ಮಂಡೇಕಾರ ವಾಚನಾಲಯದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಶತಾಯುಷಿ ರಾಮಪ್ಪ ಘೋರ್ಪಡೆ, ಬಸವರಾಜ ಸಂಭೋಜಿ, ವೆಂಕಟೇಶ, ಕಾಡಪ್ಪ ಜಠಾರ, ಬಿ.ಡಿ. ಸಂಭೋಜಿ, ಬಸವರಾಜ ಹಾಲೊಳ್ಳಿ ಹಾಜರಿದ್ದರು.
ಮುಖ್ಯಾಧ್ಯಾಪಕ ಎಂ.ಬಿ. ಕುಂಬಾರಗೇರಿ ಸ್ವಾಗತಿಸಿದರು. ಎಚ್. ಆರ್. ಕುಲಕರ್ಣಿ ಕಾರ್ಯಕ್ರಮ  ನಿರೂಪಿಸಿದರು. ಎಂ.ಎ. ಜವಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.