ADVERTISEMENT

ಗ್ರಾಮೀಣರಿಂದ ಕನ್ನಡ ಭಾಷೆಯ ಉಳಿವು

​ಪ್ರಜಾವಾಣಿ ವಾರ್ತೆ
Published 20 ಜೂನ್ 2012, 5:25 IST
Last Updated 20 ಜೂನ್ 2012, 5:25 IST

ಕಲಘಟಗಿ: `ಗ್ರಾಮೀಣ ಜನರಿಂದ ಮಾತ್ರ ಕನ್ನಡ ಭಾಷೆ-ಸಂಸ್ಕೃತಿ ಉಳಿಯಲು ಸಾಧ್ಯ~ ಎಂದು  ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ ನುಡಿದರು.

ಅವರು ಪಟ್ಟಣದ ಜನತಾ ಇಂಗ್ಲಿಷ್‌ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಹಾಗೂ ಶಾಲಾ ಮಂಡಳಿ ಪುಂಡಲೀಕ ಹಾಲಂಬಿ ದಂಪತಿಗೆ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದೆಂದರೆ ತಾಯಿಯ ಅಮೃತ ಸಮಾನ ಎದೆ ಹಾಲನ್ನು ಮಗುವಿಗೆ ಉಣಿಸಿದಂತೆ. ಇಂಗ್ಲಿಷ್ ಕಲಿಕೆ ಎಂದರೆ ಮಾರುಕಟ್ಟೆಯಿಂದ ತಂದ ಸಿದ್ಧ ಆಹಾರವನ್ನು ಉಣಬಡಿಸಿದಂತೆ ಎಂದು  ಅವರು ಹೇಳಿದರು.

`ಯಾವುದೇ ಪ್ರದೇಶ ಹಿಂದುಳಿದ ಪ್ರದೇಶವಾಗಲಾರದು. ಸಂಪನ್ಮೂಲಗಳ ಬಳಕೆಯಲ್ಲಿ ತೋರುವ ಭೌದ್ಧಿಕ ಸಾಮರ್ಥ್ಯದ ಮೇಲೆ ಆ ಪ್ರದೇಶದ ಅಭಿವೃದ್ಧಿ ನಿರ್ಣಯವಾಗುತ್ತದೆ~ ಎಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಂ. ಪುರದನಗೌಡರ ಮಾತನಾಡಿ, ಕಲಘಟಗಿ ತಾಲ್ಲೂಕು ಹಿಂದುಳಿದ ಪಟ್ಟಿಯಲ್ಲಿ ಇದ್ದರೂ, ಸಾಹಿತ್ಯಿಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಹಿಂದುಳಿದಿಲ್ಲ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಮಾಳಗಿ ಉದ್ಘಾಟಿಸಿದರು.

`ಕಲಘಟಗಿ ತಾಲ್ಲೂಕು ಕಳೆದ  5 ವರ್ಷಗಳಿಂದ ಧಾರವಾಡ ಜಿಲ್ಲೆಯಲ್ಲಿಯೇ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಮೊದಲ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಅವರು ತಿಳಿಸಿದರು.

ಜಿಲ್ಲಾ ಸಾಹಿತ್ಯ ಪರೀಷತ್ತ ಅಧ್ಯಕ್ಷಡಾ. ಎಲ್.ಆರ್ ಅಂಗಡಿಯವರನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಎಸ್.ಆರ ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಜಗದೀಶ ಮಂಗಳೂರಮಠ, ಕೆ.ಬಿ. ಪಾಟೀಲಕುಲಕರ್ಣಿ, ಎಂ.ಆರ್.ದೇಶಪಾಂಡೆ, ಬಿ. ಜಿ.ಬಿರಾದಾರ, ಜಿ.ಇ.ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಆರ್‌ದೇಸಾಯಿ, ಕೆ.ಜಿ.ರಪಾಟಿ, ಎಸ್.ವಿ. ತಡಸಮಠ, ಮಹೇಶ ಹೊರಕೆರಿ  ಸಿ.ಬಿ.ಹೊನ್ನಿಹಳ್ಳಿ, ಎಸ್.ಎ.ಚಿಕ್ಕನರ್ತಿ, ಅಶೋಕ ಅರ್ಕಸಾಲಿ, ಎಂ.ಎಸ್‌ಗೋಡಿಮನಿ ಹಾಜರಿದ್ದರು. ಶ್ರೀಧರ ಪಾಟೀಲ ಕುಲಕರ್ಣಿ ನಿರೂಪಿಸಿ ವಂದಿಸಿದರು.

ಮಹಿಳೆಯರು ಹಾಗೂ ಶಿಕ್ಷಕಿಯರು ಹಾಲಂಬಿ ಅವರ ಪತ್ನಿಯನ್ನು ಕುಂಕುಮ ಹಾಗೂ ಸೀರೆ ನೀಡಿ ಸನ್ಮಾನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.