ADVERTISEMENT

ಗ್ರಾಮೀಣ ಜನರಿಗೂ ಆಧುನಿಕ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 5:25 IST
Last Updated 13 ಫೆಬ್ರುವರಿ 2012, 5:25 IST

ಹುಬ್ಬಳ್ಳಿ: `ಗ್ರಾಮೀಣರಿಗೂ ಆಧುನಿಕ ಶಸ್ತ್ರಚಿಕಿತ್ಸೆ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಶಸ್ತ್ರಚಿಕಿತ್ಸೆಯ ಆಧುನಿಕತೆಯನ್ನು ಪರಿಚಯಿಸಲು ಗ್ರಾಮೀಣ ಪ್ರದೇಶಗಳಲ್ಲಿ ಶಸ್ತ್ರಚಿಕಿತ್ಸಕರ ಸಮ್ಮೇಳನಗಳನ್ನು ಹಮ್ಮಿಕೊಳ್ಳುತ್ತೇವೆ~ ಎಂದು ಕರ್ನಾಟಕ ಶಸ್ತ್ರಚಿಕಿತ್ಸಕರ ಸಂಘದ ಅಧ್ಯಕ್ಷ ವಿ.ಎ. ಪಾಟೀಲ ಭಾನುವಾರ ತಿಳಿಸಿದರು.

ಕರ್ನಾಟಕ ಶಸ್ತ್ರಚಿಕಿತ್ಸಕರ ಸಂಘ ನಗರದ ಕಿಮ್ಸನಲ್ಲಿ ಏರ್ಪಡಿಸಿದ್ದ 30ನೇ ಶಸ್ತ್ರಚಿಕಿತ್ಸಕರ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. `ಗ್ರಾಮೀಣರಿಗೆ ದುಬಾರಿ ಆಗುತ್ತದೆ ಎನ್ನುವ ಕಾರಣಕ್ಕೆ ಆಧುನಿಕ ಶಸ್ತ್ರಚಿಕಿತ್ಸೆಗಳನ್ನು ಪರಿಚಯಿಸುವ ಕಾರ್ಯವನ್ನು ಕೈಬಿಡಬಾರದು. ಗ್ರಾಮೀಣರಿಗೆ ಶಸ್ತ್ರಚಿಕಿತ್ಸಕರು ಹೆಚ್ಚು ಸ್ಪಂದಿಸಬೇಕು. ಜೊತೆಗೆ ಶಸ್ತ್ರಚಿಕಿತ್ಸಕರು ಕಡ್ಡಾಯ ವಾಗಿ ಕರ್ನಾಟಕ ಶಸ್ತ್ರಚಿಕಿತ್ಸಕರ ಸಂಘದ ಸದಸ್ಯರಾಗಬೇಕು~ ಎಂದು ಅವರು ಆಗ್ರಹಿಸಿದರು.

ಸಂಘದ ಕಾರ್ಯನಿರ್ವಾಹಕ ಸದಸ್ಯರಾಗಿ ಆಯ್ಕೆಯಾದ ಡಾ. ರಾಮಪ್ಪ ರಾಯಚೂರು ಹಾಗೂ ಸಿಂಧನೂರಿನ ಡಾ.ಬಿ.ಎನ್. ಪಾಟೀಲ ಅವರು ಇದೇ ಸಂದರ್ಭದಲ್ಲಿ ಪದಗ್ರಹಣ ಮಾಡಿ, 31ನೇ ಸಮ್ಮೇಳನವನ್ನು ಮುಂದಿನ ಫೆಬ್ರುವರಿ ತಿಂಗಳಲ್ಲಿ ರಾಯಚೂರಿನಲ್ಲಿ ಹಮ್ಮಿಕೊಳ್ಳಲಾ ಗುತ್ತದೆ ಎಂದರು.

2014ರ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜಿನ ಅಧೀಕ್ಷಕ ಡಾ.ಆಂಜನಪ್ಪ, ಆಧುನಿಕ ಶಸ್ತ್ರಚಿಕಿತ್ಸಾ ವಿಧಾನಗಳನ್ನು ಗ್ರಾಮೀಣ ಪ್ರದೇಶಗಳಿಗೂ ಪರಿಚಯಿಸಬೇಕು. ಜೊತೆಗೆ ವಿದೇಶಗಳಲ್ಲಿ ಸಿದ್ಧಗೊಳ್ಳುವ ಆಧುನಿಕ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಕೊಳ್ಳದೆ ಇದೇ ದೇಶದಲ್ಲಿ ತಯಾರಿಸುವಂತಾಗಬೇಕು ಎಂದರು.

ಕರ್ನಾಟಕ ಶಸ್ತ್ರಚಿಕಿತ್ಸಾ ಸಂಘದ ರಾಜ್ಯ ಕಾರ್ಯದರ್ಶಿ ಡಾ. ಅರವಿಂದ ಪಟೇಲ, ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಆರ್.ಆರ್. ಕಲಘಟಗಿ, ಕಾರ್ಯ ದರ್ಶಿ ಡಾ.ಬಿ.ಆರ್. ಪಾಟೀಲ, ಹುಬ್ಬಳ್ಳಿ-ಧಾರವಾಡ ಶಸ್ತ್ರಚಿಕಿತ್ಸಕರ ಸಂಘದ ಅಧ್ಯಕ್ಷ ಡಾ.ಬಿ.ಎಸ್. ಮದಕಟ್ಟಿ ಹಾಗೂ ಕಾರ್ಯದರ್ಶಿ ಡಾ. ನಾಗರಾಜ ಸಾನು ಹಾಜರಿದ್ದರು.

ಸಮಾರೋಪ ಸಮಾರಂಭಕ್ಕೆ ಮೊದಲು ನಡೆದ ವಿಚಾರ ಸಂಕಿರಣದಲ್ಲಿ ಶಸ್ತ್ರಚಿಕಿತ್ಸೆಯಲ್ಲಿಯ ಸವಾಲುಗಳು ಕುರಿತು ಡಾ.ಜಯರಾಂ ಶೆಣೈ ಹಾಗೂ ಹರ್ನಿಯಾ ಶಸ್ತ್ರಚಿಕಿತ್ಸೆಯಲ್ಲಿ ಜಾಳಿಗೆ ಹಾಕುವ ಅಗತ್ಯವಿದೆಯೇ ಕುರಿತು ಡಾ.ಕೆ. ಲಕ್ಷ್ಮಣ ಮಾತನಾಡಿದರು. ಎದೆ ಭಾಗಕ್ಕೆ ಆಗುವ ಗಾಯಗಳ ಕುರಿತು ನಡೆದ ಚರ್ಚೆಯಲ್ಲಿ ಡಾ. ಉದಯ್ ಮುದ್ದೇಬಿಹಾಳ, ಸಿ.ಎಸ್. ರಾಜನ್, ಡಾ.ರಾಜಶೇಖರ ರೆಡ್ಡಿ ಮತ್ತು ಡಾ.ರಾಜಗೋಪಾಲ ಶೆಣೈ ಪಾಲ್ಗೊಂಡಿದ್ದರು.

ಡಾ.ತೇಜಸ್ವಿನಿ ವಲಭ ಸ್ವಾಗತಿಸಿದರು. ಡಾ.ಗುರುಶಾಂತಪ್ಪ ವಂದಿಸಿದರು. ಡಾ.ಶಾಲಿನಿ ಹೆಗಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.