ಕಲಘಟಗಿ: ಉತ್ತರಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲೊಂದಾದ ಕಲಘಟಗಿಯ ಗ್ರಾಮದೇವಿಯರ ಜಾತ್ರೆಯು ವಿವಿಧ ವಾದ್ಯವೃಂದ ಹಾಗೂ ನೆರೆದ ಸಾವಿರಾರು ಭಕ್ತರ ಹರ್ಷೋದ್ಗಾರಗಳ ನಡುವೆ ಯಶಸ್ವಿಯಾಗಿ ಜರುಗಿತು.
ಪಟ್ಟಣದ ಗ್ರಾಮದೇವಿ ದೇವಸ್ಥಾನದಲ್ಲಿ ಬುಧವಾರದ ಬೆಳಗಿನಿಂದಲೇ ವಿವಿಧ ಧಾರ್ಮಿಕ ಚಟುವಟಿಕೆಗಳು ಪ್ರಾರಂಭವಾಗಿ, ಮಧ್ಯಾಹ್ನವಾಗುತ್ತಿದ್ದಂತೆ, ದ್ಯಾಮವ್ವ ಮತ್ತು ದುರ್ಗವ್ವ ದೇವಿಯರ ಆಕರ್ಷಕ ಮೂರ್ತಿಗಳ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೆರವಣಿಗೆಯು ಜೋಳದ ಓಣಿಯಿಂದ ಪ್ರಾರಂಭವಾಗಿ, ಪೇಟೆಯ ಬೀದಿಯ ಮೂಲಕ ಅಕ್ಕಿ ಓಣಿಯ ಚೌತ ಮನೆಯ ಕಡೆಗೆ ಚಲಿಸಿತು.
ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಆಗಮಿಸಿದ್ದ ಡೊಳ್ಳು ಕುಣಿತ, ಕರಡಿ ಮಜಲು, ಜಾನಪದ ಕಲಾತಂಡಗಳು, ಬಣ್ಣದ ಗೊಂಬೆಗಳು, ಜಾಂಝ್ ಮೇಳ, ಹೆಜ್ಜೆ ಮೇಳ ಮೊದಲಾದ 20ಕ್ಕೂ ಹೆಚ್ಚು ಕಲಾತಂಡಗಳು ಪಾಲ್ಗೊಂಡು ಮೆರವಣಿಗೆಗೆ ಮೆರಗು ನೀಡಿದವು.
ಈ ಮೆರವಣಿಗೆಯಲ್ಲಿ ಧರ್ಮ, ಜಾತಿ ಭೇದವನ್ನು ಮೀರಿ ವಿವಿಧೆಡೆಗಳಿಂದ ಆಗಮಿಸಿದ ಭಕ್ತರು ಪಾಲ್ಗೊಂಡು ಉತ್ಸವಕ್ಕೆ ಕಳೆ ತಂದರು. ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ರಂಗವಲ್ಲಿ, ತಳಿರು ತೋರಣ, ಬಣ್ಣದ ದೀಪಗಳ ಶೃಂಗಾರ ಗಮನ ಸೆಳೆದವು. ನಂತರ ಚೌತಮನೆಯಲ್ಲಿ ದೇವಿಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜಾ ಕೈಂಕರ್ಯಗಳನ್ನು ಪೂರ್ಣಗೊಳಿಸಿದ ನಂತರ ದೇವಿಯರ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು.
ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಾತಂಡಗಳಿಗೆ ಪಟ್ಟಣದ ವಿವಿಧ ಕಡೆಗಳಲ್ಲಿ ತಂಪು ಪಾನೀಯದ ವ್ಯವಸ್ಥೆಯನ್ನು ಮಾಡಿದ್ದರೆ, ವಿವಿಧ ಊರುಗಳಿಂದ ಆಗಮಿಸುವ ಭಕ್ತರಿಗೆ ದಾನಿಗಳ ನೆರವಿನಿಂದ ಅನ್ನಪ್ರಸಾದ ವಿತರಣೆಯ ವ್ಯವಸ್ಥೆಯನ್ನು ಉತ್ಸವ ಸಮಿತಿ ಮಾಡಿತ್ತು.
ಜಾತ್ರೆಯ ನಿಮಿತ್ತ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಟ್ಟಣ ಪಂಚಾಯಿತಿ ಅಲ್ಲಲ್ಲಿ ಕುಡಿಯುವ ನೀರಿಗೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿತ್ತು. ಆರೋಗ್ಯ ಇಲಾಖೆ ಪ್ರಾಥಮಿಕ ಚಿಕಿತ್ಸೆಯ ಸೌಲಭ್ಯವನ್ನು ಕೈಗೊಂಡಿತ್ತು.
ಜನಾಕರ್ಷಣೆ: ಚೌತಮನೆಯ ಎದುರಿನ ಬಯಲಿನಲ್ಲಿ ಬೀಡುಬಿಟ್ಟಿರುವ ತಿರುಗುವ ತೊಟ್ಟಿಲುಗಳು, ಸರ್ಕಸ್, ವಿವಿಧ ಮಳಿಗೆಗಳು ಮಕ್ಕಳು, ಮಹಿಳೆಯರನ್ನು ಆಕರ್ಷಿಸುತ್ತಿದ್ದು, ಈ ಉತ್ಸವ ಇದೇ 20ರವರೆಗೆ ಜರುಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.