ADVERTISEMENT

ಗ್ರಾಹಕರ ಶೋಷಣೆಗೆ ಹೆಸ್ಕಾಂ ಹೊಸ ಮಾರ್ಗ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 8:35 IST
Last Updated 5 ಏಪ್ರಿಲ್ 2012, 8:35 IST

ಹುಬ್ಬಳ್ಳಿ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ (ಹೆಸ್ಕಾಂ)ಯ ಅಧಿಕಾರಿಗಳು ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಹೆಚ್ಚಿನ ಕರವನ್ನು ಆಕರಿಸುವ ಮೂಲಕ ಶೋಷಣೆಗೆ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ ಎಂಬ ಆರೋಪ ವಿಜಾಪುರ ಸೇರಿದಂತೆ ಹೆಸ್ಕಾಂ ವ್ಯಾಪ್ತಿಯ ವಿವಿಧ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.

ನಿಯಮಿತವಾಗಿ ಕರ ಪಾವತಿಸುವ ಗ್ರಾಹಕರಿಗೆ ಉತ್ತಮ ಸೇವೆ ನೀಡಬೇಕು ಹಾಗೂ ಅವರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂಬ ಸ್ಪಷ್ಟ ಸೂಚನೆಯನ್ನು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಪ್ರಾಧಿಕಾರ (ಕೆಇಆರ್‌ಸಿ) ಎಲ್ಲ ಎಸ್ಕಾಂಗಳಿಗೆ ನೀಡಿದ್ದರೂ ಹೆಸ್ಕಾಂ ಮಾತ್ರ ಆ ನಿರ್ದೇಶನಕ್ಕೆ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡುತ್ತಿಲ್ಲ ಎಂಬ ಆಕ್ರೋಶ ಈ ಪ್ರದೇಶದಲ್ಲಿ ಸಾಮಾನ್ಯವಾಗಿದೆ.

ಸಬ್‌ಮರ್ಸಿಬಲ್ ಪಂಪ್‌ಗಳ ಧಾರಣಾ ಸಾಮರ್ಥ್ಯದ ಲೆಕ್ಕಾಚಾರವನ್ನು ಹಾಕುವಾಗ ಹೆಸ್ಕಾಂ ಅಧಿಕಾರಿಗಳು ಸಂಪೂರ್ಣ ಅವೈಜ್ಞಾನಿಕ ಕ್ರಮ ಅನುಸರಿಸುತ್ತಿದ್ದು, ನೀರಿಗಾಗಿ ಕೊಳವೆ ಬಾವಿಗಳನ್ನೇ ಹೆಚ್ಚಾಗಿ ನಂಬಿಕೊಂಡ ಬರಪೀಡಿತ ವಿಜಾಪುರ ಜಿಲ್ಲೆಯಲ್ಲಿ ಈ ಸಮಸ್ಯೆ ಅತಿಯಾಗಿ ಕಂಡುಬಂದಿದೆ. ಈ ಭಾಗದಲ್ಲಿ ಮನೆಬಳಕೆಗೆ ನೀರು ಪಡೆಯಲು ಜನ ಹೆಚ್ಚಾಗಿ ಕೊಳವೆ ಬಾವಿಗಳನ್ನೇ ಅವಲಂಬಿಸಿದ್ದಾರೆ. ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ನೂರು ಅಡಿ ಆಳಕ್ಕೆ ಕುಸಿದಿದೆ. ಅಲ್ಲಿಂದ ನೀರೆತ್ತಲು ಜನ, 1 ಎಚ್‌ಪಿ ಇಲ್ಲವೆ 2 ಎಚ್‌ಪಿ ಸಾಮರ್ಥ್ಯದ ಪಂಪ್‌ಗಳನ್ನು ಬಳಸುತ್ತಿದ್ದಾರೆ.

ಮೊದಲೇ ನೀರಿಲ್ಲದೆ ಕಂಗೆಟ್ಟ ಇಲ್ಲಿಯ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಸಬ್‌ಮರ್ಸಿಬಲ್ ಪಂಪ್‌ಗಳು ತಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ವಿದ್ಯುತ್ ಬಳಕೆ ಮಾಡುತ್ತಿವೆ ಎಂಬ ಸಬೂಬು ಹೇಳಿ ದಂಡವನ್ನು ವಿಧಿಸಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿವೆ. ಸಬ್‌ಮರ್ಸಿಬಲ್ ಪಂಪ್‌ಗಳು ಅಧಿಕ ವಿದ್ಯುತ್ ಬಳಕೆ ಮಾಡುವುದಾದರೆ ಮೀಟರ್‌ಗಳಲ್ಲಿ ಅದೇಕೆ ದಾಖಲಾಗುತ್ತಿಲ್ಲ ಎಂಬ ಪ್ರಶ್ನೆಗೆ ಹೆಸ್ಕಾಂ ಅಧಿಕಾರಿಗಳ ಬಳಿ ಉತ್ತರವಿಲ್ಲ.

ಒಂದು ಎಚ್‌ಪಿ ಸಾಮರ್ಥ್ಯದ ಪಂಪ್‌ಗಳ ಮೇಲೆ 2 ಎಚ್‌ಪಿ ಸಾಮರ್ಥ್ಯದ ಪಂಪ್‌ಗಳಿಗೆ ವಿಧಿಸುವ ಕರವನ್ನು ಹಾಕಲಾಗುತ್ತಿದೆ. ಪಂಪ್‌ಗಳ ಸಾಮರ್ಥ್ಯದ ಸಂಪೂರ್ಣ ದಾಖಲೆ ಹೊಂದಿದ ಖರೀದಿ ಬಿಲ್‌ಗಳನ್ನು ತೋರಿಸಲು ಹೋದರೆ, ಅದೇನು ಬೇಕಿಲ್ಲ ಎಂದು ಹೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ದೂರು ನೀಡಿ ಮೂರು ತಿಂಗಳು ಗತಿಸಿದರೂ ಅವುಗಳನ್ನು ನೋಡಲು ಅವರಿಗೆ ಸಮಯವೇ ಇಲ್ಲವಾಗಿದೆ ಎಂದು ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

`ಅಧಿಕಾರಿಗಳ ಈ ನಿರ್ಲಕ್ಷ್ಯದ ಧೋರಣೆಯಿಂದಾಗಿ ಪ್ರತಿ ತಿಂಗಳು ವಿದ್ಯುತ್ ಬಿಲ್‌ನಲ್ಲಿ ಹಿಂದಿನ ಬಾಕಿ ಹಾಗೂ ಹೊಸ ದಂಡ ಏರುತ್ತಲೇ ಹೊರಟಿದೆ. ನಮ್ಮ ಸ್ಥಿತಿಯನ್ನು ನೋಡದೆ ಹೆಸ್ಕಾಂ ಪ್ರತಿವರ್ಷವೂ ವಿದ್ಯುತ್ ದರವನ್ನು ಹೆಚ್ಚಿಸುತ್ತಲೇ ಹೊರಟಿದೆ. ಗಗನಕ್ಕೆ ಏರುತ್ತಿರುವ ದಿನಬಳಕೆ ವಸ್ತುಗಳ ದರದಿಂದ ಮೊದಲೇ ಕಂಗೆಟ್ಟಿರುವ ನಮಗೆ ಹೆಸ್ಕಾಂ ನೀಡುತ್ತಿರುವ ಶಾಕ್‌ನಿಂದ ಮತ್ತಷ್ಟು ಚಿಂತೆಯಾಗಿದೆ~ ಎಂದು ಅವರು ವಿಷಾದದಿಂದ ಹೇಳುತ್ತಾರೆ.

ವಿದ್ಯುತ್ ಪೂರೈಕೆಯಲ್ಲಿ ಆಗುತ್ತಿರುವ ಸೋರಿಕೆ, ವರಮಾನದ ನಷ್ಟ ಹಾಗೂ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ವಿಫಲವಾಗಿರುವ ಹೆಸ್ಕಾಂ, `ಬಡಜನರ ಬದುಕನ್ನು ಇನ್ನಷ್ಟು ದುರ್ಬರವನ್ನಾಗಿಸವಲ್ಲಿ ಮಾತ್ರ ಆತುರವಾಗಿ ತನ್ನ ಕೊಡುಗೆಯನ್ನು ನೀಡುತ್ತಿದೆ~ ಎಂದು ವಿಜಾಪುರದ ವಕೀಲ ಸಂಗಮೇಶ ದುರ್ಗದ ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.