ಅಣ್ಣಿಗೇರಿ: ಹೊಲಕ್ಕೆ ಹೊರಟಿದ್ದ ಚಕ್ಕಡಿಗೆ ಹಿಂದಿನಿಂದ ಬಂದ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಕ್ಕಡಿಯಲ್ಲಿದ್ದ ರೈತ ತನ್ನ ಒಂದು ಎತ್ತಿನೊಂದಿಗೆ ಸಾವನ್ನಪ್ಪಿದ ಘಟನೆ ಮಂಗಳವಾರ ಬೆಳಗಿನ ಜಾವ ರಾಷ್ಟ್ರೀಯ ಹೆದ್ದಾರಿಯ ಭದ್ರಾಪುರ ಸೀಮಿ ದ್ಯಾಮವ್ವನ ಗುಡಿ ಹತ್ತಿರ ಸಂಭವಿಸಿದೆ.
ಸಾವಿಗೀಡಾದ ರೈತನನ್ನು ಸ್ಥಳೀಯ ಲಿಂಬಿಕಾಯಿ ಓಣಿಯ ಕಾಂತಪ್ಪ ಉರ್ಫ್ ಚಂದ್ರಕಾಂತ ಭೀಮಪ್ಪ ಸಮಾಜಿ (44) ಎಂದು ಗುರುತಿಸಲಾಗಿದೆ. ಚಕ್ಕಡಿಯಲ್ಲಿದ್ದ ಈತನ ಮಗ ಪ್ರವೀಣ ಹಾಗೂ ಇನ್ನೊಂದು ಎತ್ತಿಗೆ ಗಾಯಗಳಾಗಿವೆ.
ಭದ್ರಾಪುರ ಸಮೀಪದ ಹೊಲದಲ್ಲಿ ಕಟ್ಟಿಗೆ ಆರಿಸಲು ತನ್ನ ಮಗನೊಂದಿಗೆ ನಸುಕಿನ ಜಾವ ಚಕ್ಕಡಿಯಲ್ಲಿ ಕಾಂತಪ್ಪ ಸಮಾಜಿ ಹೊರಟಿದ್ದ. ಆಗ ಹಿಂದಿನಿಂದ ಬಂದು ಚಕ್ಕಡಿಗೆ ಬಸ್ ಡಿಕ್ಕಿ ಹೊಡೆಯಿತು. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಚಕ್ಕಡಿ ಚೂರು ಚೂರಾಗಿದೆ. ಅಪಘಾತ ನಡೆದ ನಂತರ ನಿಲ್ಲದೆ ಹೋಗಿದ್ದ ಬಸ್ಸನ್ನು ಅಣ್ಣಿಗೇರಿ ಪೊಲೀಸರು ಪತ್ತೆ ಮಾಡಿದರು. ಅದು ಗುಲ್ಬರ್ಗದಿಂದ ನಗರಕ್ಕೆ ಬರುತ್ತಿತ್ತು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಎಸ್.ಎಸ್. ಪಡೋಲ್ಕರ, ಪಿಎಸ್‌ಐ ಎಂ.ಎಚ್. ಬಿದರಿ ಭೇಟಿ ನೀಡಿದರು.
ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಕುಸುಗಲ್ಲ ಗ್ರಾಮದ ವ್ಯಕ್ತಿ ಕೊಲೆ
ಹುಬ್ಬಳ್ಳಿ: ಕೊಲೆ ಮಾಡಿ ಶವವನ್ನು ತಾಲ್ಲೂಕಿನ ಇಂಗಳಹಳ್ಳಿ ಕ್ರಾಸ್ ಬಳಿ ಎಸೆದು ಹೋದ ಘಟನೆ ಮಂಗಳವಾರ ಬೆಳಿಗ್ಗೆ ಪತ್ತೆಯಾಗಿದೆ.
ತಾಲ್ಲೂಕಿನ ಕುಸುಗಲ್ಲ ಗ್ರಾಮದ ವೀರಪ್ಪ ಭೀಮಪ್ಪ ಬಾಳೆಹೊಸೂರ (45) ಕೊಲೆಯಾದವರು. ಶವವು ಕೆಲ ಪ್ರಮಾಣದಲ್ಲಿ ಕೊಳೆತಿದ್ದು, ಕೆಲ ಭಾಗವನ್ನು ನಾಯಿಗಳು ತಿಂದಿರಬಹುದು ಎಂದು ಅಂದಾಜಿಸಲಾಗಿದೆ.
ಜಿಲ್ಲಾ ಎಸ್ಪಿ ರವಿಕುಮಾರ, ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್‌ಪೆಕ್ಟರ್ ವಿಜಯಕುಮಾರ ಬಿಸ್ನಳ್ಳಿ, ಪಿಎಸ್‌ಐ ಎ.ಬಿ. ಜಮಾದಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.
ಹತ್ತಿ ಅಂಡಿಗೆ ಲಾರಿಗೆ ಬೆಂಕಿ
ಹುಬ್ಬಳ್ಳಿ: ಹತ್ತಿ ಅಂಡಿಗೆ ತುಂಬಿಕೊಂಡು ನಗರಕ್ಕೆ ಬರುತ್ತಿದ್ದ ಲಾರಿಯೊಂದಕ್ಕೆ ವಿದ್ಯುತ್ ತಂತಿ ತಗುಲಿ ಬೆಂಕಿ ಹತ್ತಿಕೊಂಡ ಪರಿಣಾಮ ಅಂಡಿಗೆಗಳು ಸಂಪೂರ್ಣ ಭಸ್ಮವಾದ ಘಟನೆ ಮಂಗಳವಾರ ತಾಲ್ಲೂಕಿನ ಹೆಬಸೂರ ಬಳಿ ನಡೆದಿದೆ.
ನವಲಗುಂದದಿಂದ ನಗರಕ್ಕೆ ಬರುತ್ತಿದ್ದ ಲಾರಿಯು ಹೆಬಸೂರ ಬಳಿಯ ಪೆಟ್ರೋಲ್ ಬಂಕ್‌ನಲ್ಲಿ ಡೀಸೆಲ್ ಹಾಕಿಸಿಕೊಳ್ಳಲು ತೆರಳುವಾಗ ಈ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಂಡಿದ್ದನ್ನು ಕಂಡ ತಕ್ಷಣ ಚಾಲಕ ಲಾರಿಯಿಂದ ಇಳಿದಿದ್ದಾನೆ. ನಗರದ ಅಗ್ನಿಶಾಮಕ ಸಿಬ್ಬಂದಿಯು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿತು. ಒಟ್ಟು ರೂ 3 ಲಕ್ಷ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.