ADVERTISEMENT

ಚಚಡಿಗೆ ಭಾವಪೂರ್ಣ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 5:42 IST
Last Updated 13 ಡಿಸೆಂಬರ್ 2013, 5:42 IST

ಹುಬ್ಬಳ್ಳಿ: ಉದ್ಯಮ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಡಾ.ಅಶೋಕ ಹನುಮಂತರಾವ್ ಚಚಡಿ ಅವರ ಸೇವೆ ಶ್ಲಾಘನೀಯ ಎಂದು ಉದ್ಯಮಿ ವಿಕ್ರಮ್ ಶಿರೂರ ಹೇಳಿದರು. ಇಲ್ಲಿನ ಶ್ರೀನಗರದ ಚೇತನ ಬಿಸಿನೆಸ್ ಸ್ಕೂಲ್ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ನಿರ್ದೇಶಕ ಹಾಗೂ ಡೀನ್ ಡಾ.ಎ.ಎಚ್.ಚಚಡಿ ಅವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕರ್ನಾಟಕ ವಿಶ್ವವಿದ್ಯಾಲಯದ ಸೇವೆಯಿಂದ ಅವರು ನಿವೃತ್ತಿಯಾಗುತ್ತಿದ್ದಾರೆ ಆದರೆ ಚಚಡಿ ಅವರು ಸಮಾಜ ಮುಖಿ ಚಿಂತನೆ ಹಾಗೂ ನಾಡಿನ ಔದ್ಯಮಿಕ ಕ್ಷೇತ್ರದ ಪ್ರಗತಿಯಲ್ಲಿ ತಮ್ಮನ್ನು ಸದಾ ತೊಡಗಿಸಿಕೊಳ್ಳಲಿದ್ದಾರೆ. ದಣಿವರಿಯದೆ ದುಡಿಯುತ್ತಾ ಬಂದಿರುವ ಅವರಿಗೆ ಎಂದಿಗೂ ನಿವೃತ್ತಿಯ ಪ್ರಶ್ನೆಯೇ ಇಲ್ಲ’ ಎಂದು ಶಿರೂರ ಹೇಳಿದರು.

ಸರಳ ಬದುಕು ಹಾಗೂ ಉನ್ನತ ಚಿಂತನೆಯನ್ನು ರೂಢಿಸಿಕೊಂಡಿರುವ ಡಾ.ಚಚಡಿ, ಈ ಭಾಗದಲ್ಲಿ ಔದ್ಯಮಿಕ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳ ಹರಿಕಾರರ ಎಂದಲ್ಲಿ ಯಾವುದೇ ಅತಿಯೋಶಕ್ತಿ ಇಲ್ಲ ಎಂದು ಅಭಿಪ್ರಾಯಪಟ್ಟರು. ಚೇತನ ಬ್ಯುಸಿನೆಸ್ ಸ್ಕೂಲಿನ ನಿರ್ದೇಶಕ ಡಾ.ವಿ.ಎಂ.ಕೊರವಿ ಮಾತನಾಡಿ, ಕವಿವಿ ವ್ಯಾಪ್ತಿಯ 120 ಮ್ಯಾನೇಜ್ ಮೆಂಟ್ ಪದವಿ ಕಾಲೇಜುಗಳಿಗೆ ಪಠ್ಯಕ್ರಮ ರಚಿಸಿಕೊಟ್ಟ ಶ್ರೇಯಸ್ಸು ಚಚಡಿ ಅವರಿಗೆ ಸಲ್ಲುತ್ತದೆ ಎಂದರು.

ಚೇತನಾ ಬ್ಯುಸಿನೆಸ್ ಸ್ಕೂಲ್‌ನಂತಹ ದೊಡ್ಡ ಶಿಕ್ಷಣ ಸಂಸ್ಥೆ ಕಟ್ಟಲು ತಮಗೆ ಡಾ.ಚಚಡಿ ನೀಡಿದ ಒತ್ತಾಸೆಯೇ ಕಾರಣ. ಅವರು ಶಿಷ್ಯನಿಗೆ ಧೈರ್ಯ ಹಾಗೂ ಪ್ರೋತ್ಸಾಹ ನೀಡದಿದ್ದಲ್ಲಿ ಸಂಸ್ಥೆ ಆರಂಭಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಸ್ಮರಿಸಿಕೊಂಡರು. ಸಮಾರಂಭದಲ್ಲಿ ಕೆಸಿಸಿಐ ಮಾಜಿ ಅಧ್ಯಕ್ಷ ಮದನ್ ದೇಸಾಯಿ, ಆಲೂಪ್ರಿಂಟ್ಸ್ ಸಂಸ್ಥಾಪಕ ಜಯಪ್ರಕಾಶ ಟೆಂಗಿನಕಾಯಿ,ಡಾ.ಎ.ಬಿ.ಕಲಕುಂದ್ರಿಕರ್, ಪ್ರೊ.ಸಿ.ಸಿ.­ದೀಕ್ಷಿತ್ ಮಾತನಾಡಿದರು. ನಂತರ ಡಾ.ಅಶೋಕ್ ಹನು­ಮಂತ­ರಾವ್ ಚಚಡಿ ದಂಪತಿಯನ್ನು ಆತ್ಮೀಯ­ವಾಗಿ ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.