ADVERTISEMENT

ಜಗಳಕ್ಕೆ ಕಾರಣವಾದ ಮಳೆ ನೀರು!

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 7:02 IST
Last Updated 16 ಅಕ್ಟೋಬರ್ 2017, 7:02 IST

ಹುಬ್ಬಳ್ಳಿ: ನಗರದಲ್ಲಿ ಶನಿವಾರ ರಾತ್ರಿ ಸುರಿದ ಮಳೆಯು ಕಾರು ಹಾಗೂ ಆಟೊ ಚಾಲಕರ ಮಧ್ಯೆ ನಡು ರಸ್ತೆಯಲ್ಲಿ ಜಗಳಕ್ಕೆ ಕಾರಣವಾಯಿತು. ಇವರ ಜಗಳದಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು.

ವಿಷಯ ಇಷ್ಟೇ. ಇಲ್ಲಿಯ ವಿದ್ಯಾನಗರದ ಜೆ.ಜಿ. ಕಾಮರ್ಸ್‌ ಕಾಲೇಜು ಎದುರಿನ ನಿರ್ಮಾಣ ಹಂತದ ಬಿಆರ್‌ಟಿಎಸ್‌ ಬಸ್‌ ನಿಲ್ದಾಣದ ಬಳಿ ರಾತ್ರಿ 1 ಗಂಟೆ ಸುಮಾರಿಗೆ ಮೊಣಕಾಲವರೆಗೂ ನೀರು ನಿಂತುಕೊಂಡಿತ್ತು. ಹೊಸೂರು ಡಿಪೊ ಕಡೆಯಿಂದ ಬಂದ ಆಟೊ ಕಿಮ್ಸ್‌ ಕಡೆಯಿಂದ ಬಂದ ಕಾರಿಗೆ ಡಿಕ್ಕಿ ಹೊಡೆಯಿತು.

ನೀರಿನ ಹೊಂಡದಲ್ಲೇ ಸಾಗಿ ಬಂದಿದ್ದ ಕಾರು ಡಿಕ್ಕಿ ಹೊಡೆದದ್ದೇ ತಡ ನಿಂತಲ್ಲೇ ನಿಂತು ಬಿಟ್ಟಿತು. ಎದುರಿಗೆ ಬಂದ ಬಸ್‌ ಹಾಗೂ ಜೀಪಿನಲ್ಲಿದ್ದ ಪ್ರಯಾಣಿಕರಿಗೆ ವಾಪಸ್‌ ಹೋಗದಂತಹ ಸಂದಿಗ್ಧತೆ ನಿರ್ಮಾಣವಾಯಿತು. ಏಕೆಂದರೆ ಆ ವಾಹನಗಳ ಹಿಂದೆ ಭಾರಿ ಗಾತ್ರದ ಲಾರಿ ನಿಂತುಕೊಂಡಿತ್ತು.

ADVERTISEMENT

ಸುಮಾರು ಅರ್ಧ ಗಂಟೆವರೆಗೂ ನಡೆದ ಜಗಳ ಕೊನೆಗಾಣುವ ಲಕ್ಷಣಗಳು ಗೋಚರಿಸಲಿಲ್ಲ. ಕಾರು ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವೆ ಎಂದು ಆಟೊದವರು ಹೇಳಿದರೆ, ಇಷ್ಟಕ್ಕೆಲ್ಲ ಕಾರಣ ಬಿಆರ್‌ಟಿಎಸ್‌ ಅಧಿಕಾರಿಗಳು. ರಸ್ತೆಯಲ್ಲಿ ನೀರು ನಿಲ್ಲುತ್ತದೆ ಎಂಬುದು ಗೊತ್ತಿದ್ದೂ ಸುಮ್ಮನಿದ್ದಾರೆ ಎಂದು ಕಾರು ಮಾಲೀಕ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ವಿರುದ್ಧ ಹರಿಹಾಯ್ದರು. ಎಲೆಕ್ಟ್ರಿಕ್‌ ಎಂಜಿನ್‌ ಕಾರು ಆಗಿದ್ದರಿಂದ ನಿಂತಲ್ಲಿಯೇ ನಿಂತುಕೊಂಡಿತು.‌

ಕೊನೆಗೆ ಸಂಚಾರ ಪೊಲೀಸರ ಮಧ್ಯಸ್ಥಿಕೆಯಿಂದ ಕಾರನ್ನು ಪಕ್ಕಕ್ಕೆ ತಳ್ಳಿ ನಿಲ್ಲಿಸಲಾಯಿತು. ಪರಿಸ್ಥಿತಿಯ ಗಂಭೀರತೆ ಅರಿತುಕೊಂಡ ಬಿಆರ್‌ಟಿಎಸ್‌ ಅಧಿಕಾರಿಗಳು ಭಾನುವಾರ ಬೆಳಿಗ್ಗೆಯೇ ಮೋಟಾರ್‌ ಬಳಸಿ ನೀರನ್ನು ತೆರವುಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.