ADVERTISEMENT

ಜನಪದ ರಂಗಭೂಮಿ ಹೆಗ್ಗಳಿಕೆ

ಶ್ರೀಕೃಷ್ಣ ಪಾರಿಜಾತ ಬಯಲಾಟ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2013, 5:58 IST
Last Updated 3 ಏಪ್ರಿಲ್ 2013, 5:58 IST

ಧಾರವಾಡ: `ಶ್ರೀಕೃಷ್ಣ ಪಾರಿಜಾತ ಕನ್ನಡ ಬಯಲಾಟ ಪರಂಪರೆಯಲ್ಲಿ ಅದ್ವಿತೀಯವಾದುದು. ಬೆಳಗಾವಿ, ವಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಹತ್ತಾರು ಪಾರಿಜಾತ ಕಂಪೆನಿಗಳನ್ನು, ನೂರಾರು ಕಲಾವಿದರನ್ನು, ಸಾವಿರಾರು ಪ್ರೇಕ್ಷಕರನ್ನು ತಲುಪಿ ಜನಪದ ರಂಗಭೂಮಿಯನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ಪಾರಿಜಾತ ಬಯಲಾಟದ್ದು' ಎಂದು ಡಾ.ಸಂಗಮೇಶ ಬಿರಾದಾರ ಹೇಳಿದರು.

ನಗರದ ಸಿದ್ಧಾರ್ಥ ಸಾಂಸ್ಕೃತಿಕ ಸಂಘವು ಇತ್ತೀಚೆಗೆ ಆಯೋಜಿಸಿದ್ದ ಪಾರಿಜಾತ ಬಯಲಾಟ ಕುರಿತ ಒಂದು ದಿನದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

`ಪಾರಿಜಾತ ಮಾನವನ, ಬಾಲ್ಯ, ಯೌವ್ವನ ಹಾಗೂ ವೃದ್ಧಾಪ್ಯಗಳನ್ನು ಬಾಲಗೋಪಾಲರ ಕ್ರೀಡಾವಿಲಾಸ, ಕೃಷ್ಣರುಕ್ಮಿಣಿ ಹಾಗೂ ಸತ್ಯಭಾಮೆಯರ ಸಾಂಸಾರಿಕ ಜೀವನ ಮತ್ತು ಕೃಷ್ಣ ಕೊರವಂಜಿಯಾಗಿ ಆಧ್ಯಾತ್ಮಿಕತೆಯನ್ನು ಪ್ರತಿಪಾದಿಸುವ ಮೌಲಿಕ ಬಯಲಾಟವಾಗಿದೆ' ಎಂದು ಅವರು ಹೇಳಿದರು.

ಸವದತ್ತಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಅಧ್ಯಾಪಕ ಡಾ.ವೈ.ಎಂ.ಯಾಕೊಳ್ಳಿ ಶ್ರೀಕೃಷ್ಣ ಪಾರಿಜಾತದ ಪಾತ್ರಗಳು ಹಾಗೂ ಹಾವೇರಿಯ ಕರ್ನಾಟಕ ವಿಶ್ವವಿದ್ಯಾಲಯ ಸ್ನಾತಕೋತ್ತರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಿಂಗಪ್ಪ ಮುದೇನೂರ ಅವರು ಶ್ರೀಕೃಷ್ಣ ಪಾರಿಜಾತದ ಸಾಂಸ್ಕೃತಿಕ ಅನನ್ಯತೆ ಕುರಿತು ಮಾತನಾಡಿದರು. ಸಿದ್ಧಾರ್ಥ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶ್ರೀಕಾಂತ ಶಿಂಗೆ ಅಧ್ಯಕ್ಷತೆ ವಹಿಸಿದ್ದರು.

ರತ್ನಾ ಹಿರೇಮಠ ಪ್ರಾರ್ಥಿಸಿದರು. ಡಾ.ಧನವಂತ ಹಾಜವಗೋಳ ಸ್ವಾಗತಿಸಿ, ಪರಿಚಯಿಸಿದರು. ಮಹೇಶ ಮಲ್ಲಣ್ಣವರ ನಿರೂಪಿಸಿದರು. ಕೋಶಾಧಿಕಾರಿ ಡಾ.ಎಸ್.ಎಂ.ಪಾನಬುಡೆ ವಂದಿಸಿದರು.ನಂತರ, ರೇಣುಕಾಬಾಯಿ ಮಾಂಗ ತಂಡದವರು ಶ್ರೀಕೃಷ್ಣ ಪಾರಿಜಾತ ಬಯಲಾಟ ಪ್ರದರ್ಶನಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.