ADVERTISEMENT

ಜಾಮೀನಿನ ಮೇಲೆ ಹೊರಗಿರುವ ಸೋನಿಯಾ,ರಾಹುಲ್‌

ರೈಲ್ವೆ ಮೈದಾನದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಸಭೆ; ಯಡಿಯೂರಪ್ಪ ಕಳಂಕಿತ ಎಂದವರಿಗೆ ಪ್ರಧಾನಿ ನರೇಂದ್ರ ಮೋದಿ ಪ್ರತ್ಯುತ್ತರ

​ಪ್ರಜಾವಾಣಿ ವಾರ್ತೆ
Published 7 ಮೇ 2018, 9:50 IST
Last Updated 7 ಮೇ 2018, 9:50 IST

ಹುಬ್ಬಳ್ಳಿ: ‘ಬಿ.ಎಸ್‌. ಯಡಿಯೂರಪ್ಪ ಅವರನ್ನು ಕಳಂಕಿತ ಎನ್ನುವ ಕಾಂಗ್ರೆಸ್ಸಿಗರೇ ನಿಮ್ಮ ಪಕ್ಷವನ್ನು ಮುನ್ನಡೆಸುತ್ತಿರುವ ತಾಯಿ–ಮಗ (ಸೋನಿಯಾ–ರಾಹುಲ್‌) ₹ 5 ಸಾವಿರ ಕೋಟಿ ಹಗರಣ ನಡೆಸಿದ ಆರೋಪ ಎದುರಿಸುತ್ತಿದ್ದಾರೆ. ಅವರು ಜಾಮೀನಿನ ಮೇಲೆ ಹೊರಗಿದ್ದಾರೆ ಎನ್ನುವುದನ್ನು ಮರೆತಿದಿದ್ದೀರಾ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದರು.

ಇಲ್ಲಿನ ರೈಲ್ವೆ ಮೈದಾನದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಸಭೆಯಲ್ಲಿ ಭಾನುವಾರ ಮಾತನಾಡಿದ ಅವರು, ‘ನಿಮ್ಮ ಪಕ್ಷದಲ್ಲೇ ಕಳಂಕಿತರನ್ನು ಇಟ್ಟುಕೊಂಡು ನಮ್ಮನ್ನು ಪ್ರಶ್ನಿಸುತ್ತಿದ್ದೀರಿ. ಕಾಂಗ್ರೆಸ್‌ನವರೇ ಕಿವಿಗೊಟ್ಟು ಕೇಳಿ. ನಾನು ಮೋದಿ ಇದ್ದೀನಿ. ಆರೋಪ ಮಾಡುವಾಗ ಎಚ್ಚರ ಇರಲಿ. ಯಡಿಯೂರಪ್ಪ ಅವರ ಮೇಲೆ ಸುಳ್ಳು ಆರೋಪ ಹೊರೆಸುತ್ತಿದ್ದೀರಿ. ಬಾಯಿಗೆ ಬಂದಂತೆ ಮಾತನಾಡುವುದನ್ನು ಮುಂದುವರಿಸಿದರೆ ತಕ್ಕ ಬೆಲೆ ತೆರಬೇಕಾಗುತ್ತದೆ’ ಎಂದು ಗುಡುಗಿದರು.

ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂಬುದನ್ನು ಉದಾಹರಿಸಲು ವರಕವಿ ಡಾ.ದ.ರಾ. ಬೇಂದ್ರೆ ಅವರ ‘ಕುರುಡು ಕಾಂಚಾಣ ಕುಣಿಯುತಲಿತ್ತು. ಕಾಲಿಗೆ ಬಿದ್ದವರ ತುಳಿಯುತಲಿತ್ತು’ ಎಂಬ ಜನಪ್ರಿಯ ಕವಿತೆಯನ್ನು ಉದಾಹರಿಸಿದರು.

ADVERTISEMENT

‘ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗ ನಿರ್ಮಿಸುವ ಯೋಜನೆಯನ್ನು ಅಟಲ್‌ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ರೂಪಿಸಿದ್ದರು. ಆದರೆ, ರಾಜ್ಯ ಸರ್ಕಾರದ ಅಸಹಕಾರದಿಂದ ಇಷ್ಟು ವರ್ಷಗಳಾದರೂ ಯೋಜನೆ ಪೂರ್ಣ ಗೊಂಡಿಲ್ಲ’ ಎಂದು ಟೀಕಿಸಿದರು.

‘ಹುಬ್ಬಳ್ಳಿ–ಧಾರವಾಡ ಸೇರಿದಂತೆ ಏಳು ನಗರಗಳನ್ನು ಸ್ಮಾರ್ಟ್‌ ಸಿಟಿಯನ್ನಾಗಿ ಮೇಲ್ದರ್ಜೆಗೇರಿಸಲು
₹ 800 ಬಿಡುಗಡೆ ಮಾಡಲಾಗಿದೆ. ಆದರೆ, ನಿದ್ರಾವಸ್ಥೆಯಲ್ಲಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರ ಇಲ್ಲಿಯವರೆಗೆ ಕೇವಲ ₹ 12 ಕೋಟಿ ಖರ್ಚು ಮಾಡಿದೆ. ಇಂಥ ಸರ್ಕಾರ ಬೇಕೇ’ ಎಂದು ಪ್ರಶ್ನಿಸಿದರು.

‘ಸರ್ಕಾರದ ತಿಜೋರಿಯಲ್ಲಿ ನಾವು ನೀಡಿದ ಹಣ ಕೊಳೆಯುತ್ತಿದೆ. ಆ ಹಣವನ್ನು ಅಭಿವೃದ್ಧಿಗೆ ಬಳಸಲು ಏನಡ್ಡಿ’ ಎಂದು ಹರಿಹಾಯ್ದರು.

‘ಹುಬ್ಬಳ್ಳಿ ಮಂದಿ ಹೇಗಿದ್ದೀರಿ’ ಎಂದು ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ‘ಸಿದ್ಧಾರೂಢ ಮಠ, ಮೂರುಸಾವಿರ ಮಠ, ವರಕವಿ ಡಾ.ದ.ರಾ. ಬೇಂದ್ರೆ, ಹಿಂದೂಸ್ತಾನಿ ಗಾಯಕಿ ಡಾ. ಗಂಗೂಬಾಯಿ ಹಾನಗಲ್‌, ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಅವರನ್ನು ಪಡೆದ ಈ ನೆಲದಲ್ಲಿ
ಮಾತನಾಡುವುದು ಖುಷಿ ಕೊಡುತ್ತದೆ’ ಎಂದರು.

‘ಕೊಪ್ಪದ ಅವರು ಮೈನಸ್‌ 20 ಡಿಗ್ರಿ ಉಷ್ಣಾಂಶ ಇರುವ ಸಿಯಾಚಿನ್‌ನಂತಹ ಚಳಿ ಪ್ರದೇಶದಲ್ಲಿ ಸತತ ಆರು ದಿನ ಹಿಮದಡಿ ಸಿಲುಕಿದ್ದರು. ನಾನೇ ಖುದ್ದಾಗಿ ದೆಹಲಿಯ ಸೇನಾ ಆಸ್ಪತ್ರೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದೆ. ದುರದೃಷ್ಟವಶಾತ್‌ ಅವರು ಬದುಕುಳಿಯಲಿಲ್ಲ. ಅಂಥ ವೀರಯೋಧರನ್ನು ಬಳಸಿಕೊಂಡು ನಡೆಸಿದ ಸರ್ಜಿಕಲ್‌ ದಾಳಿಯ ಬಗ್ಗೆಯೇ ಕಾಂಗ್ರೆಸ್ಸಿಗರು ಅನುಮಾನ ವ್ಯಕ್ತಪಡಿಸುತ್ತಿರುವುದು ನಾಚಿಕೆಗೇಡು’ ಎಂದು ಜರಿದರು.

ಹುಬ್ಬಳ್ಳಿಯವನಿಗೆ ಸಹಾಯ ಮಾಡಿದ್ದೆ: ಹುಬ್ಬಳ್ಳಿಯಿಂದ ಟೇಲರಿಂಗ್‌ ಕೆಲಸ ಮಾಡಲು ಗುಜರಾತ್‌ಗೆ ಬಂದಿದ್ದ ಚಂದ್ರಕಾಂತ ಮೆಹರವಾಡೆ ಎಂಬುವವರ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹಣದ ತೊಂದರೆ ಎದುರಿಸುತ್ತಿದ್ದ
ಅವರಿಗೆ, ಕೆಲವರು ಗಾಂಧಿನಗರದಲ್ಲಿರುವ ಮುಖ್ಯಮಂತ್ರಿಯ ಮನೆಗೆ ಹೋಗುವಂತೆ ಹೇಳಿದ್ದರು. ನನ್ನ ಮನೆಗೆ ಬಂದ ಅವರಿಗೆ ಅಗತ್ಯ ನೆರವು ನೀಡಿದೆ. ಜೊತೆಗೆ ಹುಬ್ಬಳ್ಳಿಗೆ ವಾಪಸ್‌ ಕಳುಹಿಸುವ ವ್ಯವಸ್ಥೆಯನ್ನೂ ಮಾಡಿದ್ದೆ’ ಎಂದು ನೆನಪಿಸಿಕೊಂಡರು.

ಕಾಗೆ ಕೂತಿದ್ದಕ್ಕೆ ಸಿ.ಎಂ. ಕಾರು ಬದಲು

ತಮ್ಮ ಕಾರಿನ ಮೇಲೆ ಕಾಗೆ ಕುಳಿತಿದ್ದನ್ನು ಅಪಶಕುನ ಎಂದು ಬಗೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರನ್ನೇ ಬದಲಾಯಿಸಿದರು. ಈಗ ಜೇಬಿನಲ್ಲಿ ನಿಂಬೆ ಹಣ್ಣು ಇಟ್ಟುಕೊಂಡು ತಿರುಗಾಡುತ್ತಾರೆ ಎಂದು ಟೀಕಿಸಿದರು.

ಒಂದೆಡೆ ಜನಸಾಗರ..ಒಂದೆಡೆ ಪರದಾಟ

ಮೋದಿ ಅವರ ಭಾಷಣ ಕೇಳಲು ಜನಸಾಗರವೇ ಹರಿದು ಬಂದಿತ್ತು. ರೈಲ್ವೆ ಮೈದಾನ ಜನರಿಂದ ಭರ್ತಿಯಾಗಿತ್ತು. ಭಾಷಣ ಮುಗಿಯುವವರೆಗೂ ಜನರು ಬರುತ್ತಲೇ ಇದ್ದರು. ಕಾರ್ಯಕ್ರಮ ಮುಗಿದ ಮೇಲೆ ಮೈದಾನದ ಹೊರಗೆ, ಚನ್ನಮ್ಮ ವೃತ್ತ, ದೇಶಪಾಂಡೆ ನಗರ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಜನರು ಮನೆಗಳಿಗೆ ಹೋಗಲು ಪರದಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.