ADVERTISEMENT

ಜೋಕುಮಾರ: ಜನರ ಬವಣೆಯ ವರದಿಗಾರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 8:20 IST
Last Updated 14 ಸೆಪ್ಟೆಂಬರ್ 2011, 8:20 IST

ಅಳ್ನಾವರ: ಈ ಭಾಗದಲ್ಲಿ ಮಳೆ ಬೆಳೆ ಸಂಮೃದ್ಧಿಗಾಗಿ, ಜನರ ಬದುಕು ಸುಧಾರಿಸಲಿ ಎಂಬ ಉದ್ದೇಶದಿಂದ ಮಹಿಳೆಯರು ಜೋಕುಮಾರನನ್ನು ಹೊತ್ತು ಮನೆ ಮನೆಗೆ ತೆರಳಿ ಪೂಜೆ ನಡೆಸಿದರು.

ಮಣ್ಣಿನಿಂದ ತಯಾರಿಸಿದ ಸುಂದರವಾದ ಮೂರ್ತಿಯನ್ನು ಬುಟ್ಟಿಯಲ್ಲಿ ಕೂಡಿಸಿ, ಸುತ್ತಲೂ ಬೇವಿನ ಸೊಪ್ಪು ಹಾಕಿ ಮನೆ ಮನೆಗೆ ಹೋಗುವ ಮಹಿಳೆಯರು, `ಜೋಕುಮಾರ ಬಂದಾನ ಜೋಕುಮಾರ... ನನ್ನ ಕುವರ~ ಎಂಬ ಹಾಡನ್ನು ಹಾಡುತ್ತಾ ಪೂಜೆ ಸಲ್ಲಿಸಿ, ಮನೆಮನೆಗಳಲ್ಲಿ ದವಸ ಧಾನ್ಯ ಪಡೆಯಲಾಯಿತು. ಬೆಣ್ಣೆ ಪ್ರಿಯನಾದ ಜೋಕುಮಾರ ಬಾಯಿಗೆ ಬೆಣ್ಣೆ ಸವರಿ ಹರಕೆ ಸಲ್ಲಿಸಲಾಯಿತು.

ಜೋಕುಮಾರನ ಕೈಯಲ್ಲಿ ಇರುವ ಖಡ್ಗ, ಆತನು ಶೂರನು ಮತ್ತು ಪರಾಕ್ರಮಿಯೂ ಎಂದು ಸೂಚಿಸುತ್ತದೆ. ಜೋಕುಮಾರನ ಪೂಜೆ ಮಾಡಿದರೆ ಬಂಜೆತನ ದೂರಾಗುತ್ತದೆ ಎಂಬ ಪ್ರತೀತಿಯೂ ಇದೆ.

ಪೂಜೆ ಮಾಡಿದ ನಂತರ ಚರಗಾ ಎಂಬ ಪ್ರಸಾದವನ್ನು ವಿತರಿಸಲಾಯಿತು. ಈ ಚರಗವನ್ನು ರೈತರು ತಮ್ಮ ಹೊಲದಲ್ಲಿ ಚೆಲ್ಲಿದರೆ ಬೆಳೆ ಹುಲಸಾಗಿ ಬೆಳೆಯುತ್ತದೆ ಎಂಬ ನಂಬಿಕೆ ರೈತಾಪಿ ವರ್ಗದ್ದಾಗಿದೆ. ರೈತನ ಬಾಳು ಉಜ್ವಲವಾಗಲು ನಮ್ಮ ಸಂಸ್ಕೃತಿಯಲ್ಲಿ ನಡೆದು ಬಂದ ಪೂಜೆ ಸಂಪ್ರದಾಯಗಳಲ್ಲಿ ಜೋಕುಮಾರನ ಪೂಜೆಯೂ ಒಂದಾಗಿದ್ದು, ವಿಶಿಷ್ಟ ಆಚರಣೆಯಾಗಿದೆ.

ಪ್ರತಿ ವರ್ಷ ಗಣೇಶ ಹಬ್ಬದ ನಡುವೆ ಜೋಕುಮಾರನ ಪೂಜೆ ನಡೆಯುವುದು ವಾಡಿಕೆ. ಭೂಲೋಕದಲ್ಲಿ ಹನ್ನೂಂದು ದಿನ ಮನೆಯಲ್ಲಿ ಪೂಜೆ ಮಾಡಿಸಿಕೊಂಡು, ಕಡುಬು-ಮೋದಕ ಉಂಡ ಗಣೇಶ, ವಿಸರ್ಜನೆ ನಂತರ ಕೈಲಾಸಕ್ಕೆ  ತೆರಳಿ, ಭೂಲೋಕದಲ್ಲಿ ಜನರು ಚೆನ್ನಾಗಿದ್ದಾರೆ ಎಂದು ಶಿವನಲ್ಲಿ ವರದಿ ಒಪ್ಪಿಸುತ್ತಾನೆ; ಆದರೆ ಬುಟ್ಟಿಯಲ್ಲಿದ್ದುಕೊಂಡು ಬಿಸಿಲಿನಲ್ಲಿ ಮನೆಮನೆಗೆ ಹೋಗಿ ಪೂಜೆಗೊಂಡ ಜೋಕುಮಾರ ವಿಸರ್ಜನೆ ನಂತರ, ಶಿವನಿಗೆ ಜನರ ಬವಣೆಯನ್ನು ತಿಳಿಸಿ ಮಳೆ ನೀಡಲು ಕೋರುತ್ತಾನೆ. ಜನರ ಕಷ್ಟ ಸುಖವನ್ನು ಶಿವನ ಬಳಿ ಹೇಳುತ್ತಾನೆ; ಜನರ ಕಷ್ಟ ನೀಗುತ್ತಾನೆ ಎಂಬ ನಂಬಿಕೆಯಿಂದ ಜೋಕುಮಾರನಿಗೆ ಈ  ವಿಶೇಷ ಪೂಜೆ ನಡೆಯುತ್ತದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.