ADVERTISEMENT

ಜ್ಞಾನೇಶ್ವರ ಸ್ವಾಮೀಜಿ ಚಾತುರ್ಮಾಸ್ಯ ಸಂಪನ್ನ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 5:10 IST
Last Updated 3 ಅಕ್ಟೋಬರ್ 2012, 5:10 IST

ಧಾರವಾಡ: `ದೈವಜ್ಞ ಬ್ರಾಹ್ಮಣ ಸಮಾಜ ಅತ್ಯಂತ ಸಾಮಾನ್ಯ ಸಮಾಜವಾಗಿದ್ದು, ಸಮಾಜದ ಎಲ್ಲ ರಂಗದಲ್ಲಿಯೂ ಮುಂದುವರೆಯುತ್ತಲಿದೆ. ಆದರೆ ಇಂದಿನ ದಿನಗಳಲ್ಲಿ ಈ ಸಮಾಜದ ಮೇಲೆ ಅನ್ಯಾಯ ಹಾಗೂ ಅನೇಕ ಸಮಸ್ಯೆಗಳು ಎದುರಾಗುತ್ತಿದ್ದು, ಅವುಗಳನ್ನು ಬಗೆಹರಿಸುವುದು ಸರ್ಕಾರದ ಕರ್ತವ್ಯವಾಗಿದೆ~ ಎಂದು ವಿಜ್ಞಾನ, ತಂತ್ರಜ್ಞಾನ ಹಾಗೂ ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ ಹೇಳಿದರು.

ನಗರದ ದೈವಜ್ಞ ಬ್ರಾಹ್ಮಣ ಸಭಾಭವನದಲ್ಲಿ ಭಾನುವಾರ ನಡೆದ ದೈವಜ್ಞ ಬ್ರಾಹ್ಮಣ ಸಮಾಜದ 27ನೇ ಚಾತುರ್ಮಾಸ್ಯದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, `ರಾಜ್ಯದಲ್ಲಿಯೇ ಅತ್ಯಂತ ಸರಳ ಹಾಗೂ ಸಜ್ಜನಿಕೆಯ ಸಮಾಜವಾಗಿ ದೈವಜ್ಞ ಬ್ರಾಹ್ಮಣ ಸಮಾಜ ಹೊರಹೊಮ್ಮಿದೆ. ಈ ಸಮಾಜದ ಬಾಂಧವರು ಬಂಗಾರ ಹಾಗೂ ಬೆಳ್ಳಿ ಕೆಲಸವನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದು, ವ್ಯಾಟ್‌ನಲ್ಲಿ ಶೇ 1ರಷ್ಟು ಹಾಗೂ ಜ್ಯುವೆಲರಿ ಪಾರ್ಕ್ ನಿರ್ಮಾಣ ಮಾಡಿಕೊಡುವಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು~ ಎಂದು ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, `ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಸ್ವಾರ್ಥಕ್ಕಾಗಿ ಜೀವನ ಸಾಗಿಸುತ್ತಿದ್ದು, ಮನುಷ್ಯನಲ್ಲಿ ಭಯ ಭಕ್ತಿ ಮರೆಮಾಚುತ್ತಿದೆ. ಆದರೆ ಈ ರೀತಿಯ ಕಾರ್ಯಕ್ರಮಗಳು ನಡೆಯುವುದರಿಂದ ಸಮಾಜದಲ್ಲಿ ಬದಲಾವಣೆಯಾಗುತ್ತದೆ~ ಎಂದರು.

ಸಮಾಜದ ಜಿಲ್ಲಾ ಅಧ್ಯಕ್ಷ ರವಿ ಗಾಂವ್ಕರ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಪ್ರಹ್ಲಾದ ಜೋಶಿ, ಶಾಸಕಿ ಸೀಮಾ ಮಸೂತಿ, ಮಾಜಿ ಶಾಸಕ ವಿನಯ ಕುಲಕರ್ಣಿ, ಎಸ್‌ಡಿಎಂಇ ಸಂಸ್ಥೆ ಸಿಇಓ ಪ್ರೊ.ಸುಧಾ ರಾವ್, ದೈವಜ್ಞ ಬ್ರಾಹ್ಮಣ ಸಮಾಜದ ರಾಜ್ಯ ಅಧ್ಯಕ್ಷ ರಾಮರಾವ್ ರಾಯ್ಕರ, ರಾಜಣ್ಣ ಕೊರವಿ, ಎನ್.ಎಚ್.ಕೋನರೆಡ್ಡಿ ಇದ್ದರು. ನಂತರ ಸಚ್ಚಿದಾನಂದ ಜ್ಞಾನೇಶ್ವರ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.