ಹುಬ್ಬಳ್ಳಿ: ‘ನನಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನವಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಬೇರೆಯವರ ಹೆಸರು ಘೋಷಣೆಯಾಗಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ್ ಜೋಶಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮನಸ್ಸು ಮಾಡಿದ್ದರೆ ನನಗೆ ಟಿಕೆಟ್ ಸಿಗುತ್ತಿತ್ತು’
– ಪಶ್ಚಿಮ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿರುವ ಮೋಹನ್ ಲಿಂಬಿಕಾಯಿ ಅವರ ನೋವಿನ ಮಾತುಗಳಿವು.
ಪಕ್ಷದಿಂದ ಪ್ರೊ.ಎಸ್.ವಿ.ಸಂಕನೂರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿದ ಹಿನ್ನೆಲೆಯಲ್ಲಿ ಭಾನುವಾರ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನನಗೆ ಟಿಕೆಟ್ ಸಿಗದಿರುವ ವಿಷಯ ಆಘಾತ ತಂದಿದೆ. ಬಹಳ ನಿರಾಸೆಯೂ ಆಗಿದೆ. ಆದರೆ, ಪಕ್ಷದ ತೀರ್ಮಾನಕ್ಕೆ ತಲೆಬಾಗಿ, ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತೇನೆ’ ಎಂದರು.
‘24 ವರ್ಷಗಳ ನಂತರ ಪಶ್ಚಿಮ ಪದವೀಧರ ಕ್ಷೇತ್ರವನ್ನು ಬಿಜೆಪಿ ತೆಕ್ಕೆಗೆ ತಂದ ಕೀರ್ತಿ ನನಗೆ ಸಲ್ಲುತ್ತದೆ. ಈ ಬಾರಿ ನನಗೆ ಟಿಕೆಟ್ ನೀಡುವುದಿಲ್ಲ ಎಂಬ ವಿಷಯವನ್ನು ಪಕ್ಷದ ವರಿಷ್ಠರು ನಾಲ್ಕು ತಿಂಗಳ ಹಿಂದೆಯೇ ಸ್ಪಷ್ಟಪಡಿಸಿದ್ದರೆ, ನಾನು ಪರಿಷತ್ ಚುನಾವಣೆಗೆ ಸಿದ್ಧತೆಯನ್ನೇ ಮಾಡಿಕೊಳ್ಳುತ್ತಿರಲಿಲ್ಲ. ನನ್ನ ವಕೀಲ ವೃತ್ತಿಯಲ್ಲಿಯೇ ಪೂರ್ಣ ಪ್ರಮಾಣದಲ್ಲಿ ತೊಡಗುತ್ತಿದ್ದೆ’ ಎಂದು ಹೇಳಿದರು.
‘ಪರಿಷತ್ ಚುನಾವಣೆಗೆ ನಾನೇ ಸಮರ್ಥ ಅಭ್ಯರ್ಥಿ. ನಾನು ಗೆಲ್ಲುವ ಅವಕಾಶವೂ ಹೆಚ್ಚಿದೆ ಎಂದು ನಾನು ಮರಳಿ ಬಿಜೆಪಿಗೆ ಸೇರುವ ಸಂದರ್ಭದಲ್ಲಿ ಪ್ರಹ್ಲಾದ ಜೋಶಿ ಸೇರಿದಂತೆ ಅನೇಕ ಮುಖಂಡರು ಹೇಳಿದ್ದರು. ಹೀಗಾಗಿಯೇ ನಾನು ಕ್ಷೇತ್ರದಲ್ಲಿ ಸಂಚರಿಸಿ ಸಾಕಷ್ಟು ಸಂಖ್ಯೆಯಲ್ಲಿ ಮತದಾರರ ನೋಂದಣಿ ಮಾಡಿಸಿದೆ. ಈಗ ನನ್ನ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿಲ್ಲ’ ಎಂದು ವಿಷಾದಿಸಿದರು.
‘ಪಕ್ಷ ತೊರೆದು ಕೆಜೆಪಿಯನ್ನು ಸ್ಥಾಪಿಸಿದ ಬಿ.ಎಸ್.ಯಡಿಯೂರಪ್ಪ ಅವರನ್ನೇ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು. ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿ ಅವರನ್ನು ಗೆಲ್ಲಿಸಲಾಯಿತು. ಹಾಗಾದರೆ ನನಗೇಕೆ ಟಿಕೆಟ್ ನೀಡುತ್ತಿಲ್ಲ. ಈ ಬಗ್ಗೆ ಪಕ್ಷದ ಮುಖಂಡರು ಉತ್ತರಿಸಬೇಕು’ ಎಂದೂ ಪ್ರತಿಪಾದಿಸಿದರು.
ತಾರತಮ್ಯ ಮಾಡಿಲ್ಲ: ‘ನಾನು ಕ್ಷೇತ್ರದ ಕ್ಷೇತ್ರದ ಕಾರ್ಯಕರ್ತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ. ನೆರವು ಕೋರಿ ನನ್ನ ಬಳಿ ಬಂದು ನಿರಾಸೆಯಿಂದ ಮರಳಿದ್ದಾಗಿ ಯಾರಾದರೂ ಹೇಳಲಿ’ ಎಂದು ಸವಾಲು ಹಾಕಿದ ಲಿಂಬಿಕಾಯಿ, ‘ಪಾಲಿಕೆ ಸದಸ್ಯರಿಗೂ ಸ್ಪಂದಿಸಿದ್ದೇನೆ. ಶಾಸಕರ ಅನುದಾನ ಹಂಚಿಕೆಯಲ್ಲಿ ಸಹ ತಾರತಮ್ಯ ಮಾಡಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ನಾನು ಪಕ್ಷದಿಂದ ಕಣಕ್ಕಿಳಿದರೆ ಗೆಲುವು ಖಚಿತ ಎಂದು ಹೇಳುತ್ತಿದ್ದ ನಾಯಕರು, ಈಗ ಇದೇ ಕ್ಷೇತ್ರದಿಂದ ಸ್ಪರ್ಧಿಸಿ 2 ಬಾರಿ ಪರಾಭವಗೊಂಡಿರುವ ಪ್ರೊ.ಸಂಕನೂರ ಅವರಿಗೆ ಯಾಕೆ ಟಿಕೆಟ್ ನೀಡಿದರು. ಶಿಕ್ಷಕರ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪಕ್ಷದ ಅಧಿಕೃತ ಅಭ್ಯರ್ಥಿ ಸೋಲಿಗೆ ಕಾರಣರಾಗಿದ್ದನ್ನು ಪಕ್ಷದ ಮುಖಂಡರು ಮರೆತಂತಿದೆ’ ಎಂದೂ ವ್ಯಂಗ್ಯಭರಿತ ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.