ADVERTISEMENT

ಡಿಮ್ಹಾನ್ಸ್‌ನ 200 ಹುದ್ದೆ ಆಗಸ್ಟ್‌ನಲ್ಲಿ ಭರ್ತಿ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 9:05 IST
Last Updated 16 ಜುಲೈ 2012, 9:05 IST

ಧಾರವಾಡ: ತಜ್ಞ ವೈದ್ಯರು, ಸುಶ್ರೂಷಕ ಸಿಬ್ಬಂದಿಯ ತೀವ್ರ ಕೊರತೆಯನ್ನು ಎದುರಿಸುತ್ತಿರುವ `ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ~ (ಡಿಮ್ಹಾನ್ಸ್)ಯಲ್ಲಿ ಖಾಲಿ ಇರುವ 200 ಹುದ್ದೆಗಳನ್ನು ನೇರ ಸಂದರ್ಶನದ ಮೂಲಕ ಆಗಸ್ಟ್ ಮೊದಲ ವಾರದಲ್ಲಿ ಭರ್ತಿ ಮಾಡಲು ಇದೇ 16ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಘೋಷಿಸಿದರು.

ಭಾನುವಾರ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

`ಬೆಂಗಳೂರಿನ ನಿಮ್ಹಾನ್ಸ್ ಮಾದರಿಯಲ್ಲೇ ಡಿಮ್ಹಾನ್ಸ್‌ನ್ನು ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಗುಲಾಂ ನಬಿ ಆಜಾದ್ ಅವರನ್ನು ಭೇಟಿಯಾಗಲು ಶೀಘ್ರದಲ್ಲೇ ನಿಯೋಗ ಕೊಂಡೊಯ್ಯಲಾಗುವುದು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಮಾನ ಆರ್ಥಿಕ ನೆರವಿನಲ್ಲಿ ಇದನ್ನು ಕೈಗೊಳ್ಳಲಾಗುವುದು~ ಎಂದು ಹೇಳಿದರು. 

ಎಂಬಿಬಿಎಸ್ ಕೋರ್ಸ್ ಅವಧಿ ಹೆಚ್ಚಳ: ಎಂಬಿಬಿಎಸ್ ಪದವಿ ಪಡೆಯುವ ವಿದ್ಯಾಥಿಗಳು ಒಂದು ವರ್ಷ ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಬೇಕು. ಅಂದಾಗ ಮಾತ್ರ ಅವರಿಗೆ ಪದವಿ ನೀಡಲಾಗುವುದು. ಆದ್ದರಿಂದ ಈ ಕೋರ್ಸ್‌ನ ಅವಧಿ ಇನ್ನು ಮುಂದೆ ಆರೂವರೆ ವರ್ಷಗಳಾಗಲಿವೆ. ಈ ಸಂಬಂಧದ ಕರಡನ್ನು ಬರುವ ಅಧಿವೇಶನದಲ್ಲಿ ಮಂಡಿಸಲಾಗುವುದು. ಇದರಿಂದ ರಾಜ್ಯದ 2800 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯಕೀಯ ಸೇವೆ ದೊರೆಯಲಿದೆ ಎಂದರು.

ಡಿಮ್ಹಾನ್ಸ್‌ಗೆ ನೂತನ ನಿರ್ದೇಶಕರಾಗಿ ಸದ್ಯ ನಿಮ್ಹಾನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ನಾಗರಾಜ್ ಅವರನ್ನು ನೇಮಕ ಮಾಡಲಾಗಿದ್ದು, ಆ.1ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಜೊತೆಗೆ ನೂತನ ಸಿಬ್ಬಂದಿಯ ನೇಮಕವಾದ ಬಳಿಕ ಇಲ್ಲಿ ಎರವಲು ಸೇವೆಯ ಮೇಲೆ ಬಂದಿರುವ ವೈದ್ಯಕೀಯ ಹಾಗೂ ಸುಶ್ರೂಷಕ ಸಿಬ್ಬಂದಿಯನ್ನು ಮಾತೃ ಇಲಾಖೆಗೆ ವಾಪಸ್ ಕಳಿಸಲಾಗುವುದು ಎಂದರು.

ಮೂಲಸೌಕರ್ಯ ಇಲ್ಲದ ಸಂಸ್ಥೆಗಳ ಮೇಲೆ ಕ್ರಮ: ವಿದ್ಯಾರ್ಥಿಗಳಿಗೆ ಮೂಲಸೌಕರ್ಯ ಕಲ್ಪಿಸದ ಮೆಡಿಕಲ್ ಕಾಲೇಜುಗಳಿಗೆ ತಂಡವೊಂದನ್ನು ಕಳಿಸಿ ಆ ಕಾಲೇಜಿನ ವಿಡಿಯೊ ಚಿತ್ರೀಕರಣ ಮಾಡಿಸಲು ಕ್ರಮ ಕೈಗೊಳ್ಳಲಾಗಿತ್ತು.

ಹೀಗೆ ಮಾಡಲು ಸಚಿವರಿಗೆ ಹಕ್ಕಿಲ್ಲ ಎಂದು ಕೆಲವು ಆಡಳಿತ ಮಂಡಳಿಯವರು ಕೋರ್ಟ್‌ಗೆ ಹೋಗಿದ್ದರು. ಕೋರ್ಟ್ ನಮ್ಮ ಕ್ರಮವನ್ನು ಬೆಂಬಲಿಸಿದ್ದು, ಇನ್ನು ಮುಂದೆಯೂ ಅಂಥ ಕಾಲೇಜುಗಳಿಗೆ ತೆರಳಿ ಲೋಕ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಮುಚ್ಚಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಚಿವರು ಗರಂ
ಧಾರವಾಡ:
ಇಲ್ಲಿಯ ಡಿಮ್ಹಾನ್ಸ್‌ನ ಪಾಕಶಾಲೆಗೆ ಭೇಟಿ ನೀಡಿ ಆಹಾರದ ಗುಣಮಟ್ಟವನ್ನು ಸ್ವತಃ ರುಚಿ ನೋಡುವ ಮೂಲಕ ಪರಿಶೀಲಿಸಿದ ಸಚಿವ ರಾಮದಾಸ್ ಅಡುಗೆ ಸಿಬ್ಬಂದಿ ಹಾಗೂ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಮುಪ್ಪಿನ ಅವರನ್ನು ತರಾಟೆಗೆ ತೆಗೆದುಕೊಂಡರು.
 
ಕಡಲೆಕಾಳಿನ ಪಲ್ಯ ಸರಿಯಾಗಿ ಬೆಂದಿರಲಿಲ್ಲ. ಅಲ್ಲದೇ ರುಚಿಹೀನವಾಗಿತ್ತು. ಕಡಲೆಕಾಳು ಹಾಗೂ ಖಾರ ಇವಿಷ್ಟೇ ಆ ಪಲ್ಯದಲ್ಲಿತ್ತು. ಹೀರೆಕಾಯಿಯನ್ನೂ ಸರಿಯಾಗಿ ಕತ್ತರಿಸದೇ ಬೇಯಿಸಲಾಗಿತ್ತು. ಸಾಂಬಾರ್‌ನಲ್ಲಿ ನೀರು ಬಿಟ್ಟು ಬೇರೇನೂ ಇರಲಿಲ್ಲ.

ಇದರಿಂದ ಸಿಟ್ಟಿಗೆದ್ದ ಸಚಿವರು ಆಸ್ಪತ್ರೆಯ ಸಿಇಒ, ವೈದ್ಯಕೀಯ ಅಧೀಕ್ಷಕ ಶಿವಶಂಕರ ಪೋಳ ಅವರನ್ನು ತರಾಟೆಗೆ ತೆಗೆದುಕೊಂಡದ್ದಲ್ಲದೇ, ಇದನ್ನು ಯಾರೂ ನೋಡುವುದೇ ಇಲ್ಲವೇ ಎಂದರು. ಸಿಇಒ ಮೋಹನ ಅವರನ್ನು ಈ ಬಗ್ಗೆ ಕೇಳಿದಾಗ, ಕರ್ತವ್ಯ ಲೋಪವಾಗಿದ್ದನ್ನು ಒಪ್ಪಿಕೊಂಡು, `ಈ ತಪ್ಪಿಗೆ ನನ್ನನ್ನು ಅಮಾನತು ಮಾಡಬಹುದು~ ಎಂದರು!

ಆಸ್ಪತ್ರೆಯ ಧರ್ಮಶಾಲೆ ಮುಚ್ಚಿದ್ದನ್ನು ಮಾಧ್ಯಮ ಪ್ರತಿನಿಧಿಗಳು ಸಚಿವರ ಗಮನಕ್ಕೆ ತಂದಾಗ, ರೋಗಿಗಳೊಂದಿಗೆ ಬರುವವರಿಗೆ ಉಳಿದುಕೊಳ್ಳಲು ಧರ್ಮಶಾಲೆಯನ್ನು ಎಲ್ಲ ಸೌಕರ್ಯಗಳೊಂದಿಗೆ ಮುಂದಿನ ತಿಂಗಳು ಆರಂಭಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಔಷಧ ವಿತರಣೆಯನ್ನು ಪಾರದರ್ಶಕಗೊಳಿಸಲು ಕಿಯೋನಿಕ್ಸ್ ಸಿಬ್ಬಂದಿಯನ್ನು ಕರೆಸಿ ಗಣಕೀಕರಣ ಮಾಡಿಸಿ ಆನ್‌ಲೈನ್ ಮೂಲಕ ಮಾಹಿತಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.