ADVERTISEMENT

ಡ್ರಾಪಿನ್‌–ಸ್ಮಾರ್ಟ್‌ ವಿಷನ್‌ ತಂಡಗಳ ಫೈನಲ್‌ ಇಂದು

ಪ್ರಶಸ್ತಿಗಾಗಿ ಕುತೂಹಲದ ಹೋರಾಟ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 5:01 IST
Last Updated 18 ಜೂನ್ 2018, 5:01 IST
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಎಚ್‌ಪಿಎಲ್‌ ಕ್ರಿಕೆಟ್‌ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಗೆಲುವು ಪಡೆದ ಎನ್‌.ಕೆ. ವಾರಿಯರ್ಸ್ ತಂಡದ ಆಟಗಾರರ ಸಂಭ್ರಮ
ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಎಚ್‌ಪಿಎಲ್‌ ಕ್ರಿಕೆಟ್‌ ಟೂರ್ನಿಯ ಭಾನುವಾರದ ಪಂದ್ಯದಲ್ಲಿ ಗೆಲುವು ಪಡೆದ ಎನ್‌.ಕೆ. ವಾರಿಯರ್ಸ್ ತಂಡದ ಆಟಗಾರರ ಸಂಭ್ರಮ   

ಹುಬ್ಬಳ್ಳಿ: ಲೀಗ್‌ ಪಂದ್ಯದಿಂದಲೂ ಶ್ರೇಷ್ಠ ಪ್ರದರ್ಶನ ನೀಡಿರುವ ಧಾರವಾಡದ ಡ್ರಾಪಿನ್‌ ವಾರಿಯರ್ಸ್‌ ಹಾಗೂ ಬೆಳಗಾವಿಯ ಬಿಎಸ್‌ಸಿ ಸ್ಮಾರ್ಟ್‌ ವಿಷನ್‌ ತಂಡಗಳು ಜೂನಿಯರ್‌ ಎಚ್‌ಪಿಎಲ್‌ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಪೈಪೋಟಿ ನಡೆಸಲಿವೆ. ಈ ಪಂದ್ಯ ರಾಜನಗರದಲ್ಲಿರುವ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಸೋಮವಾರ (ಜೂ. 18) ಜರುಗಲಿದೆ.

ಭಾನುವಾರ ನಡೆದ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಸ್ಮಾರ್ಟ್‌ ವಿಷನ್‌ ಎದುರು ಡ್ರಾಪಿನ್‌ ವಾರಿಯರ್ಸ್‌ ಆರು ವಿಕೆಟ್‌ಗಳ ಗೆಲುವು ಪಡೆಯಿತು. ಮೊದಲು ಬ್ಯಾಟ್‌ ಮಾಡಿದ್ದ ಸ್ಮಾರ್ಟ್‌ ವಿಷನ್‌ 23.2 ಓವರ್‌ಗಳಲ್ಲಿ 98 ರನ್‌ಗೆ ಆಲೌಟ್‌ ಆಯಿತು. ಸಾಧಾರಣ ಮೊತ್ತದ ಗುರಿಯನ್ನು ಡ್ರಾಪಿನ್‌ 18.2 ಓವರ್‌ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು ಮುಟ್ಟಿತು.

ತಿರುಗೇಟು ನೀಡಲು ಕಾತರ: ಈ ಎರಡೂ ತಂಡಗಳೇ ಫೈನಲ್‌ನಲ್ಲಿ ಪೈಪೋಟಿ ನಡೆಸಲಿವೆ. ಲೀಗ್‌ನಲ್ಲಿ ಎದುರಾದ ಸೋಲಿಗೆ ತಿರುಗೇಟು ನೀಡಲು ಸ್ಮಾರ್ಟ್‌ ವಿಷನ್‌ ಕಾದಿದೆ. ಈ ತಂಡದಲ್ಲಿ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳು ಹಾಗೂ ಉತ್ತಮ ಆಲ್‌ರೌಂಡರ್‌ಗಳು ಇದ್ದಾರೆ. ಇವರ ಆಟಕ್ಕೆ ಪ್ರತಿ ತಂತ್ರ ರೂಪಿಸಲು ಡ್ರಾಪಿನ್‌ ಕೂಡ ಯೋಜನೆ ರೂಪಿಸಿದೆ. ಚಿರಾಗ ನಾಯಕ, ಆದಿತ್ಯ ಹಿರೇಮಠ ತಂಡದ ಶಕ್ತಿ ಹೆಚ್ಚಿಸುವ ನಿರೀಕ್ಷೆಯಿದೆ.

ADVERTISEMENT

ಡ್ರಾಪಿನ್‌ ತಂಡ ಟೂರ್ನಿಯಲ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಗೆಲುವು ಪಡೆದಿದೆ. ಸ್ಮಾರ್ಟ್‌ ವಿಷನ್‌ ಒಂದು ಪಂದ್ಯದಲ್ಲಿ ಮಾತ್ರ ಸೋತಿದೆ. ಆದ್ದರಿಂದ ಫೈನಲ್‌ ಹೋರಾಟದಲ್ಲಿ ಗೆಲುವು ಯಾರಿಗೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ದಿನದ ಇನ್ನೊಂದು ಪಂದ್ಯದಲ್ಲಿ ಗದಗನ ವಾಲ್ಮೀಕಿ ಸ್ಟ್ರೈಕರ್ಸ್ ತಂಡದ ಎದುರು ಎನ್‌.ಕೆ. ವಾರಿಯರ್ಸ್‌ 47 ರನ್‌ಗಳ ಜಯ ಪಡೆದುಕೊಂಡಿತು.

ಸಂಕ್ಷಿಪ್ತ ಸ್ಕೋರು: ಎನ್‌.ಕೆ. ವಾರಿಯರ್ಸ್‌ 29.4 ಓವರ್‌ಗಳಲ್ಲಿ 135 (ರೋಹನ ಯರೇಸೀಮಿ 73, ಮಾಧವ ಧಾರವಾಡಕರ 33; ರಾಜೇಂದ್ರ ಡಂಗನವರ 28ಕ್ಕೆ2, ದೀಪಕ ನೀರಲಗಿ 22ಕ್ಕೆ1, ಮೊಹಮ್ಮದ್‌ ರೆಹಾನ್‌ ಕಿತ್ತೂರ 16ಕ್ಕೆ1), ವಾಲ್ಮೀಕಿ ಸ್ಟ್ರೈಕರ್ಸ್‌ 20.4 ಓವರ್‌ಗಳಲ್ಲಿ 88 (ಶುಭಮ್‌ ಉಮಜಿ 35, ಶತಕ್‌ ಗುಂಜಾಳ 16; ಕೃಷ್ಣಪ್ಪ ಬಗಾಡಿ 12ಕ್ಕೆ3, ಬಿ. ಮಣಿಕಂಠ 28ಕ್ಕೆ3, ಅನೀಶ ಭೂಸದ 1ಕ್ಕೆ3). ಫಲಿತಾಂಶ: ಎನ್‌.ಕೆ. ವಾರಿಯರ್ಸ್‌ ತಂಡಕ್ಕೆ 47 ರನ್‌ ಗೆಲುವು.

ಬಿಎಸ್‌ಸಿ ಸ್ಮಾರ್ಟ್‌ ವಿಷನ್‌ 23.2 ಓವರ್‌ಗಳಲ್ಲಿ 98 (ಕಮೀಲ್‌ ಬೊಂಬಾಯಿವಾಲ 54, ಸಿದ್ದೇಶ ಅಸಲಕರ 22; ಎಫ್‌. ಸುಜಲ್‌ 13ಕ್ಕೆ3, ಆಕಾಶ ಅಸಲಕರ 8ಕ್ಕೆ2, ಚಿರಾಗ ನಾಯಕ 13ಕ್ಕೆ2). ಡ್ರಾಪಿನ್‌ ವಾರಿಯರ್ಸ್‌ 18.2 ಓವರ್‌ಗಳಲ್ಲಿ 4ಕ್ಕೆ101 (ಚಿರಾಗ ನಾಯಕ (ಅಜೇಯ 27, ನಿತೀಶ 23, ಆದಿತ್ಯ ಹಿರೇಮಠ 15; ಸೌರವ್‌ ಸಮಂತ್‌ 26ಕ್ಕೆ3). ಫಲಿತಾಂಶ: ಡ್ರಾಪಿನ್‌ ವಾರಿಯರ್ಸ್‌ ತಂಡಕ್ಕೆ 6 ವಿಕೆಟ್‌ ಜಯ.

ಫೈನಲ್‌ಗೆ ಮಳೆಯ ಭೀತಿ

ಒಂದು ವಾರ ವಿಶ್ರಾಂತಿ ಪಡೆದಿದ್ದ ವರುಣ, ಭಾನುವಾರ ರಾತ್ರಿ ಮರಳಿದ ಕಾರಣ ಫೈನಲ್‌ ಪಂದ್ಯಕ್ಕೆ ಅಡ್ಡಿಯಾಗುವ ಆತಂಕ ಎದುರಾಗಿದೆ. ಟೂರ್ನಿ ಆರಂಭದಲ್ಲಿ ಮಳೆ ಇತ್ತು. ಆದ್ದರಿಂದ ಟೂರ್ನಿಯನ್ನು ಒಂದು ದಿನ ತಡವಾಗಿ ಆರಂಭಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.