ADVERTISEMENT

`ತಂದೆ-ತಾಯಿಗಿಂತ ಮಿಗಿಲಾದ ದೇವರಿಲ್ಲ'

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2013, 9:09 IST
Last Updated 23 ಏಪ್ರಿಲ್ 2013, 9:09 IST

ಹುಬ್ಬಳ್ಳಿ: `ಕಾಣದ ದೇವರನ್ನು ಪೂಜಿಸಿ ಪ್ರಾರ್ಥಿಸುವವರು ಸಾಕಷ್ಟು ಮಂದಿ ಇದ್ದಾರೆ. ಆದರೆ ಪಾಲಿಸಿ, ಪೋಷಿಸಿ ಬದುಕು ಕೊಟ್ಟ ತಂದೆ-ತಾಯಿಗೆ ಗೌರವ ಕೊಡಲು ಮರೆಯುತ್ತಾರೆ. ಹೀಗೆ ಆಗಬಾರದು ತಂದೆ-ತಾಯಿಗಿಂತ ದೇವರಿಲ್ಲ ಎಂಬುದನ್ನು ತಿಳಿಯಬೇಕು' ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಸಂಗಮೇಶ ಹಂಡಗಿ ಸಲಹೆ ನೀಡಿದರು.

ಡಾ. ಎಂ.ಎಸ್.ಯಾವಗಲ್ಲ, ವಿರೂಪಾಕ್ಷಪ್ಪ ಬ.ಹೊಸಕೇರಿ ಹಾಗೂ ಶಿವಲಿಂಗವ್ವ ವಿ.ಹೊಸಕೇರಿ ಅವರ ಸ್ಮರಣಾರ್ಥ ನಗರದ ಬಸವ ಕೇಂದ್ರ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಮಾತೃದೇವೋ ಭವ, ಪಿತೃ ದೇವೋ ಭವ ಎಂದು ಹೇಳಿಕೊಂಡು ಬಂದ ದೇಶ ನಮ್ಮದು. ಗುರುಕುಲ ಶಿಕ್ಷಣ ಮುಗಿಸಿ ಹೊರಬರುವಾಗ ಹೆತ್ತವರನ್ನು ದೇವರೆಂದು ಕಾಣುವಂತೆ ತಿಳಿಸಲಾಗುತ್ತಿತ್ತು. ಹೀಗಾಗಿ ವೃದ್ಧ ತಂದೆ ತಾಯಿಯರ ಪೂಜೆ ಮಾಡುವುದರಲ್ಲಿ ಸಾರ್ಥಕತೆ ಕಾಣುವವರು ಹಿಂದೆ ಇದ್ದರು' ಎಂದು ಅವರು ಹೇಳಿದರು.

ಬಸವ ಕೇಂದ್ರದ ಅಧ್ಯಕ್ಷ ಡಾ.ಬಿ.ವಿ.ಶಿರೂರ ಅಧ್ಯಕ್ಷತೆ ವಹಿಸಿ ಕೇಂದ್ರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾಯೋಜಕರಾದ ಲಲಿತಾ ಯಾವಗಲ್ಲ ಹಾಗೂ ಬಸವರಾಜ ಹೊಸಕೇರಿ ಅನುಭವಗಳನ್ನು ಹಂಚಿಕೊಂಡರು. ಜಿ.ಬಿ.ಗೌಡಪ್ಪಗೋಳ, ಪ್ರೊ. ಎಸ್.ವಿ. ಪಟ್ಟಣಶೆಟ್ಟಿ, ರಾಜು ಆಣೆಪ್ಪನವರ, ಜಯಾ ಹಿರೇಮಠ, ಬಸವರಾಜ ಲಿಂಗಶೆಟ್ಟಿ, ಬಸವರಾಜ ಶೇಡಬಾಳ ಮುಂತಾದವರು ಉಪಸ್ಥಿತರಿದ್ದರು.

ಪ್ರೊ. ಎಸ್.ಸಿ. ಇಂಡಿ ಸ್ವಾಗತಿಸಿದರು. ಕೆ.ಎಸ್.ಇನಾಮತಿ ವಂದಿಸಿದರು. ಪ್ರೊ. ಜಿ.ಬಿ.ಹಳ್ಯಾಳ ನಿರೂಪಿಸಿದರು. ಉಮಾ ಹುಲಿಕಂತಿ ಮಠ, ನೀಲಾಂಬಿಕಾ ಇನಾಮತಿ ಹಾಗೂ ಅನಸೂಯಾ ಕುದುರಿ ವಚನಗಳನ್ನು ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.