ADVERTISEMENT

ತಂಬಾಕು ವಿರೋಧಿ ಬ್ಯಾಂಡ್ ಕಟ್ಟಿದರವರು

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 8:50 IST
Last Updated 19 ಜುಲೈ 2012, 8:50 IST

ಹುಬ್ಬಳ್ಳಿ: ಮಕ್ಕಳ ಮುಖದಲ್ಲಿ ಸಂಭ್ರಮವಿತ್ತು. ಶಿಕ್ಷಕರು ಸಂತಸದಲ್ಲಿದ್ದರು. ಪಾಲಕರ ಆತಂಕ ದೂರವಾಗಿತ್ತು. ಯಾಕೆಂದರೆ ಅಲ್ಲಿ ಮಕ್ಕಳು ಪರಸ್ಪರ ಕಟ್ಟಿದ `ಬ್ಯಾಂಡ್~ ವಿಶೇಷವಾಗಿತ್ತು. ಅದರಲ್ಲಿ `ಸೆ ನೋ ಟು ಟೊಬ್ಯಾಕೋ~ (ತಂಬಾಕಿನಿಂದ ದೂರವಿರಿ) ಎಂದು ಬರೆದಿತ್ತು.

ಈ ಕಾರ್ಯಕ್ರಮ ನಡೆದದ್ದು ಬಸವೇಶ್ವರ ನಗರದ ಚಿನ್ನಬಸಮ್ಮ ಲಿಂಗನಗೌಡ ಪಾಟೀಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ. ನಗರದ ಗ್ರಾಮ ಶಿಕ್ಷಣ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಉದ್ದೇಶ ತಂಬಾಕಿನ ದುಷ್ಪರಿಣಾಮದ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವುದು.

ಮುಂಬೈನ ನರೋತ್ತಮ ಶೇಷಕಾರಿ ಫೌಂಡೇಷನ್‌ನ ತಂಬಾಕು ವಿರೋಧಿ ಯೋಜನೆಯ ಅಂಗವಾಗಿ ನಗರದ ವಿವಿಧ ಶಾಲೆ-ಕಾಲೇಜುಗಳಲ್ಲಿ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯ ಅಂಗವಾಗಿ ಮಕ್ಕಳು ಪರಸ್ಪರ ಬ್ಯಾಂಡ್ ಕಟ್ಟಿದರು, ತಂಬಾಕು ದುಷ್ಪರಿಣಾಮದ ಬಗ್ಗೆ ಕಿರು ಪ್ರಹಸನ ಪ್ರದರ್ಶಿಸಿದರು, ತಂಬಾಕು ಉತ್ಪನ್ನಗಳ ವಿರುದ್ಧ ಅರಿವು ಮೂಡಿಸಲು ಸಜ್ಜಾದರು.

ಕಾರ್ಯಕ್ರಮ್ನ ಉದ್ಘಾಟಿಸಿದ ಗ್ರಾಮ ಶಿಕ್ಷಣ ಪ್ರತಿಷ್ಠಾನದ ರೀನಾ ಹೊಂಬಳ, ತಂಬಾಕುಯುಕ್ತ ಪದಾರ್ಥ ತಿನ್ನುವುದನ್ನು ಅನೇಕರು ಪ್ರತಿಷ್ಠೆಯನ್ನಾಗಿ ಮಾಡಿಕೊಂಡಿರುತ್ತಾರೆ. ದುಷ್ಪರಿಣಾಮ ಗೊತ್ತಿದ್ದರೂ ತಂಬಾಕು ತಿನ್ನುವುದನ್ನು ಬಿಡಲು ಯಾರೂ ಸಿದ್ಧರಿಲ್ಲ. ಹೀಗಾಗಿ ಈ ಚಟವನ್ನು ಆರಂಭಿಸದಂತೆ ಅರಿವು ಮೂಡಿಸಬೇಕಾದ ಅಗತ್ಯವಿರುವುದರಿಂದ ಇಂಥ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

`ಕೆಲವು ತಂಬಾಕುಯುಕ್ತ ಪದಾರ್ಥಗಳಲ್ಲಿ 40ಕ್ಕೂ ಹೆಚ್ಚು ವಿಷಕಾರಿ ವಸ್ತುಗಳಿರುತ್ತವೆ. ಹಲ್ಲಿಗಳನ್ನು ಪುಡಿ ಮಾಡಿ ಹಾಕಿ ತಯಾರಿಸುವ ಪದಾರ್ಥಗಳು ಕೂಡ ಇವೆ. ಇದು ಕ್ಯಾನ್ಸರ್‌ನಂಥ ಮಾರಕ ರೋಗಗಳಿಗೆ ಕಾರಣವಾಗುತ್ತದೆ. ಅಂಥ ಪದಾರ್ಥಗಳ ಸೇವನೆಯನ್ನು ಬಿಡಲು ಪ್ರಯತ್ನ ಮಾಡಬೇಕು~ ಎಂದು ಹೇಳಿದರು.    

ಶಾಲೆಯ ಮುಖ್ಯ ಶಿಕ್ಷಕಿ ಶಾಂತಮ್ಮ ವೈ. ಹಳೇಪೇಟೆ ಮಾತನಾಡಿ, ತಂಬಾಕುಯುಕ್ತ ಪದಾರ್ಥಗಳನ್ನು ಸೇವಿಸದೇ ಇರುವವರು ಅದನ್ನು ಸೇವಿಸದಿರುವಂತೆ ಇತರರಿಗೂ ಹೇಳಬೇಕು. ಹೀಗೆ ಮಾಡಿ ಎಲ್ಲರ ಆರೋಗ್ಯವನ್ನು ಉಳಿಸಲು ಮುಂದಾಗಬೇಕು ಎಂದು ಹೇಳಿದರು.

ಸ್ಥಳೀಯರಾದ ಎ.ವಿ. ಕಾಮತ್, ಶಾಲೆಗಳಲ್ಲಿ ತಂಬಾಕು ವಿರೋಧಿ ಕಾರ್ಯಕ್ರಮಗಳನ್ನು ನಡೆಸುವುದು ಅಭಿನಂದನೀಯ, ದೇಶವನ್ನು ತಂಬಾಕಿನಿಂದ ಮುಕ್ತವಾಗಿಸಲು ಎಲ್ಲರೂ ಶ್ರಮಿಸಬೇಕು ಎಂದರು.

`ತಂಬಾಕು ಮುಕ್ತ ಶಾಲೆ~ ಯೋಜನೆಯ ವ್ಯವಸ್ಥಾಪಕಿ ಶಿವಲೀಲಾ, ಪಾಲಕರಾದ ಕಾಡಪ್ಪ, ಮಾರುತಿ ಮೊರಬದ ಉಪಸ್ಥಿತರಿದ್ದರು. ಎ.ವಿ. ಶೆಟ್ಟರ ಸ್ವಾಗತಿಸಿದರು. ಅಜಯಕುಮಾರ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.