ADVERTISEMENT

ತಮ್ಮಂದಿರಿಗೆ ಮೂತ್ರಪಿಂಡ ದಾನಮಾಡಿದ ಅಕ್ಕಂದಿರು

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 10:08 IST
Last Updated 9 ಮಾರ್ಚ್ 2018, 10:08 IST
ತಮ್ಮಂದಿರಿಗೆ ಮೂತ್ರಪಿಂಡ ದಾನಮಾಡಿದ ಅಕ್ಕಂದಿರು
ತಮ್ಮಂದಿರಿಗೆ ಮೂತ್ರಪಿಂಡ ದಾನಮಾಡಿದ ಅಕ್ಕಂದಿರು   

ಹುಬ್ಬಳ್ಳಿ: ‘ತಮ್ಮಂದಿರ ಬದುಕಿನ ಮುಂದೆ ಯಾವುದೂ ದೊಡ್ಡದು ಎನಿಸಲಿಲ್ಲ. ಅವರ ಸಂತೋಷದಲ್ಲಿಯೇ ನಮಗೆ ನೆಮ್ಮದಿಯಿದೆ...’

ಹೀಗೆ ಅತ್ಯಂತ ಭಾವುಕರಾಗಿ ಕಣ್ಣೀರು ಹಾಕುತ್ತ ಮಾತು ಆರಂಭಿಸಿದ್ದು ಸವಿತಾಬಾಬು ಕದಂ ಹಾಗೂ ಲಲಿತಾ ಪ್ರಕಾಶ ಜಾಧವ್‌. ಮೂತ್ರಪಿಂಡ ವೈಫಲ್ಯದಿಂದ ಬಳಲಿ ಬದುಕುವ ಆಸೆಯನ್ನೇ ಕೈಚೆಲ್ಲಿದ್ದ ತಮ್ಮಂದಿರ ಬದುಕಿಗೆ ನೆರವಾದ ಸಂತೃಪ್ತಿ ಅವರಲ್ಲಿತ್ತು.

ಮುಂಡಗೋಡ ತಾಲ್ಲೂಕಿನ ಹಿರೇಹಳ್ಳಿಯ ಸವಿತಾ ಮತ್ತು ಧಾರವಾಡದ ಮೃತ್ಯುಂಜಯ ನಗರದ ನಿವಾಸಿ ಲಲಿತಾ ಅವರು, ಮೂರು ತಿಂಗಳ ಹಿಂದೆ ತಮ್ಮ ತಮ್ಮಂದಿರಿಗೆ ಮೂತ್ರಪಿಂಡ(ಕಿಡ್ನಿ) ದಾನ ಮಾಡಿದ್ದಾರೆ. ಇದರಿಂದ ಸವಿತಾ ಅವರ ತಮ್ಮ ಪರುಶರಾಮ ಹಾಗೂ ಲಲಿತಾ ಅವರ ತಮ್ಮ ಸುನೀಲ ನಾಗಪ್ಪ ಕದಂ  ಅವರು, ಸಂಪೂರ್ಣವಾಗಿ ಚೇತರಿಸಿಕೊಂಡು ಸಹಜ ಜೀವನನಡೆಸುತ್ತಿದ್ದಾರೆ.

ADVERTISEMENT

ಸವಿತಾ ಪೋಷಕರಿಗೆ ಐದು ಜನ ಹೆಣ್ಣುಮಕ್ಕಳು. ಪರುಶುರಾಮ ಒಬ್ಬನೇ ಮಗ. ತಮ್ಮನಿಗೆ ಮೂತ್ರಪಿಂಡ ವೈಫಲ್ಯದ ಸಮಸ್ಯೆ ಗೊತ್ತಾದಾಗ ಅಕ್ಕಂದಿರಿಗೆ ದಿಕ್ಕೇ ತೋಚದಂತಾಗಿತ್ತು. ತಮ್ಮನ ಮೇಲಿನ ಪ್ರೀತಿಗೆ ಸವಿತಾ ಅವರು, ಮೂತ್ರಪಿಂಡ ದಾನ ಮಾಡಿದ್ದಾರೆ.

‘ಸಮಸ್ಯೆಯ ಆರಂಭದ ದಿನಗಳಲ್ಲಿ ಪರಶುರಾಮ ಚೆನ್ನಾಗಿ ಊಟ ಮಾಡುತ್ತಿರಲಿಲ್ಲ. ದಿನದಿಂದ ದಿನಕ್ಕೆ ಆತನ ಆರೋಗ್ಯದಲ್ಲಿ ಬದಲಾವಣೆ ಕಂಡು ಬರುತ್ತಿದ್ದರಿಂದ ಗಾಬರಿಯಾಯಿತು. ವೈದ್ಯರನ್ನು ಸಂಪರ್ಕಿಸಿದಾಗ ಮೂತ್ರಪಿಂಡ ವೈಫಲ್ಯವಾಗಿದೆ ಎಂಬುದು ಗೊತ್ತಾಯಿತು. ಮರು ಯೋಚಿಸದೇ ತಮ್ಮನಿಗೆ ನಾನೇ, ಮೂತ್ರಪಿಂಡ ನೀಡಲು ನಿರ್ಧರಿಸಿದೆ. ಆತನ ಖುಷಿಗಿಂತ ಬೇರೆ ಏನೂ ಬೇಕಿಲ್ಲ’ ಎಂದು ಹಿರೇಹಳ್ಳಿಯಲ್ಲಿ ಅಂಗನವಾಡಿ ಸಹಾಯಕಿಯಾಗಿರುವ ಸವಿತಾ ಹೇಳಿದರು.

ಲಲಿತಾ ಅವರ ಪೋಷಕರಿಗೆ ಮೂವರು ಹೆಣ್ಣು ಮತ್ತು ಮೂವರು ಗಂಡು ಮಕ್ಕಳು. ಸುನೀಲ ಅಡುಗೆ ಕೆಲಸ ಮಾಡುತ್ತಿದ್ದರು.

‘ಸುನೀಲನಿಗೆ ಹೇಗೆ ಮೂತ್ರಪಿಂಡ ವೈಫಲ್ಯ ಆಗಿದೆ ಎಂಬುದು ಗೊತ್ತಿಲ್ಲ. ಡಯಾಲಿಸಿಸ್‌ ಬಗ್ಗೆಯೂ ಏನು ತಿಳಿದಿರಲಿಲ್ಲ. ಒಂದೇ ಮೂತ್ರಪಿಂಡದ ಮೇಲೆ ಆರಾಮಾಗಿ ಬದುಕಬಹುದು ಎಂಬುದನ್ನು ತಿಳಿದು ತಮ್ಮನಿಗೆ ಮೂತ್ರಪಿಂಡ ಕೊಟ್ಟೆ. ಇದರಿಂದ ನನಗೆ ಏನೂ ಸಮಸ್ಯೆಯಾಗಿಲ್ಲ. ತಮ್ಮನನ್ನು ಉಳಿಸಿಕೊಂಡು ಹೆಮ್ಮೆಯಿದೆ. ಪುಣ್ಯದ ಕಾರ್ಯಮಾಡಿದ ತೃಪ್ತಿಯಿದೆ’ ಎಂದು ಲಲಿತಾ ಕಣ್ಣೀರಿಟ್ಟರು.

**

‘ಸಕ್ಕರೆ ಕಾಯಿಲೆ, ಬಿಪಿಯಿಂದ ವೈಫಲ್ಯ’

‘ಅತಿಯಾದ ಸಕ್ಕರೆ ಕಾಯಿಲೆ, ಬಿಪಿ, ಒತ್ತಡದ ಬದುಕು, ವಿಪರೀತ ಬೊಜ್ಜು, ಆರೋಗ್ಯದ ಸಣ್ಣ ಸಮಸ್ಯೆಗಳಿಗೂ ಮಾತ್ರೆಗಳನ್ನು ತೆಗೆದುಕೊಳ್ಳುವುದು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ’ ಎಂದು ತತ್ವದರ್ಶ ಆಸ್ಪತ್ರೆಯ ಮೂತ್ರಪಿಂಡ ತಜ್ಞ ಡಾ. ವೆಂಕಟೇಶ ಮೊಗೆರೆ ಹೇಳಿದರು.

‘ತಾತ್ಕಾಲಿಕ ಮತ್ತು ದೀರ್ಘಕಾಲಿಕ.. ಹೀಗೆ ಎರಡು ರೀತಿಯ ಮೂತ್ರಪಿಂಡ ವೈಫಲ್ಯದ ಸಮಸ್ಯೆಗಳು ಇರುತ್ತವೆ. ಸಮಸ್ಯೆಯನ್ನು ಆರಂಭದಲ್ಲಿಯೇ ಗುರುತಿಸಿದರೆ ಬೇಗನೆ ಗುಣಪಡಿಸಬಹುದು. ದೀರ್ಘಕಾಲಿಕ ಸಮಸ್ಯೆಯಾದರೆ ಬದಲಿ ಮೂತ್ರಪಿಂಡ ಕಸಿ ಅನಿವಾರ್ಯ’ ಎಂದರು.

ಸನ್ಮಾನ: ಪರಶುರಾಮ ಮತ್ತು ಸುನೀಲ ಅವರು ತತ್ವದರ್ಶಿ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡಿದ್ದಾರೆ. ಮೂತ್ರಪಿಂಡ ದಾನ ಮಾಡಿದ ಸವಿತಾ, ಲಲಿತಾ ಅವರನ್ನು ಗುರುವಾರ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಇನ್ನೊಬ್ಬ ದಾನಿ ರಾಮಾಂಜನೇಯ ಲಕ್ಷ್ಮಣ ಅವರನ್ನೂ ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಗುರುವಾರ ಆಸ್ಪತ್ರೆ ವತಿಯಿಂದ ಗೌರವಿಸಲಾಯಿತು.

ಆಸ್ಪತ್ರೆಯ ಅಧ್ಯಕ್ಷ ಡಾ. ಎಸ್‌.ಪಿ. ಬಳಿಗಾರ, ವೈದ್ಯರಾದ ಭರತ್‌ ಕ್ಷತ್ರಿ, ಮಂಜುಪ್ರಸಾದ, ಸಂಜೀವ ಕುಲಗೋಡ, ಶಾಸಕ ಅರವಿಂದ ಬೆಲ್ಲದ ಇದ್ದರು.

**

ನೆರವು ನೀಡಲು ಮನವಿ

ಸವಿತಾ ಮತ್ತು ಲಲಿತಾ ಅವರ ಕುಟುಂಬದ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಆದ್ದರಿಂದ ನೆರವು ನೀಡುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಸವಿತಾ ಅವರ ಮೊ. 81975 06568 ಮತ್ತು ಸುನೀಲ ಮೊ. 99863 12264 ಸಂಪರ್ಕಿಸಿ.

**

ನಾಲ್ಕೂವರೆ ವರ್ಷ ಡಯಾಲಿಸಿಸ್‌ ಮಾಡಿಸಿಕೊಂಡ ಮೇಲೂ ಬದುಕುತ್ತೇನೆ ಎನ್ನುವ ಭರವಸೆ ಇರಲಿಲ್ಲ. ಅಕ್ಕ ನನಗೆ ಮರುಜೀವ ನೀಡಿದ್ದಾರೆ.

–ಸುನೀಲ ನಾಗಪ್ಪ ಕದಂ, ಮೂತ್ರಪಿಂಡ ವೈಫಲ್ಯದಿಂದ ಚೇತರಿಸಿಕೊಂಡವರು

*

ತಮ್ಮಂದಿರನ್ನು ಉಳಿಸಿಕೊಳ್ಳಲು ಅಕ್ಕಂದಿರು ಮಾಡಿದ ತ್ಯಾಗ ದೊಡ್ಡದು. ಎಲ್ಲರಿಗೂ ಮಾದರಿಯಾಗುವಂತಹ ಕೆಲಸ ಮಾಡಿದ್ದಾರೆ.

ಡಾ. ವೆಂಕಟೇಶ ಮೊಗೆರೆ, ತತ್ವದರ್ಶ ಆಸ್ಪತ್ರೆಯ ಮೂತ್ರಪಿಂಡ ತಜ್ಞ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.